ಶಾಸಕ ವಿನಯ್‌ ಕುಲಕರ್ಣಿ ದೋಷಿ: ಕೋರ್ಟ್‌ನಲ್ಲಿ ಭಾವುಕರಾದ ಕುಟುಂಬಸ್ಥರು
x

ಶಾಸಕ ವಿನಯ್‌ ಕುಲಕರ್ಣಿ ದೋಷಿ: ಕೋರ್ಟ್‌ನಲ್ಲಿ ಭಾವುಕರಾದ ಕುಟುಂಬಸ್ಥರು

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ಕೋರ್ಟ್‌ ಭಾವುಕವಾದ ಕ್ಷಣಕ್ಕೆ ಸಾಕ್ಷಿಯಾಯಿತು.


Click the Play button to hear this message in audio format

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ಮೌನವಾದ ನ್ಯಾಯಾಲಯದ ಕೊಠಡಿ ಭಾವುಕವಾದ ಕ್ಷಣಕ್ಕೆ ಸಾಕ್ಷಿಯಾಯಿತು.

ವಿನಯ್ ಕುಲಕರ್ಣಿ ಅವರ ಮುಖದಲ್ಲಿ ಆತಂಕ ಮೂಡಿದರೆ, ಅವರ ಪತ್ನಿ, ಮಕ್ಕಳು ಕಣ್ಣೀರು ಹಾಕತೊಡಗಿದರು. ಸದಾ ಬೆಂಬಲಿಗರ ದಂಡಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದ ವಿನಯ್ ಕುಲಕರ್ಣಿ, ಕಣ್ಣೀರು ಹಾಕುತ್ತಿದ್ದ ತಮ್ಮ ಮಕ್ಕಳನ್ನು ಕಂಡು ತಾವೂ ಭಾವುಕರಾದರು. ತಂದೆಯ ಪಕ್ಕದಲ್ಲೇ ಕುಳಿತಿದ್ದ ಮಕ್ಕಳು ಅವರ ಕೈ ಹಿಡಿದು ಅಳುತ್ತಿದ್ದರೆ, ಇಡೀ ನ್ಯಾಯಾಲಯದ ಸಭಾಂಗಣ ಸ್ತಬ್ದವಾಯಿತು.

ಅಪರಾಧಿ ಎಂದು ಘೋಷಿತವಾಗುತ್ತಿದ್ದಂತೆ ಕುಟುಂಬ ಸದಸ್ಯರ ದುಃಖ ಮಡುಗಟ್ಟಿತ್ತು. ಈ ವೇಳೆ ವಿನಯ್ ಕುಲಕರ್ಣಿ ತಮ್ಮ ಪತ್ನಿ ಮತ್ತು ಮಕ್ಕಳಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಮುಂದಿನ ಕಾನೂನು ಹೋರಾಟ ಮಾಡುವ ಕುರಿತು ಸಮಾಧಾನದ ಮಾತುಗಳು ಕುಟುಂಬಸ್ಥರ ನಡುವೆ ವಿನಿಮಯವಾದವು. ಆದರೆ, ಅನಿವಾರ್ಯವಾಗಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದಾಗ ಕುಟುಂಬಸ್ಥರ ದುಃಖ ಕಟ್ಟೆಯೊಡೆಯಿತು.

2016ರ ಜೂ. 15ರಂದು ಧಾರವಾಡದ ಸಪ್ತಾಪುರದ ಉದಯ ಜಿಮ್‌ನಲ್ಲಿ ನಡೆದಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸುದೀರ್ಘ ತನಿಖೆ ನಡೆಸಿತ್ತು. ಒಟ್ಟು 21 ಆರೋಪಿಗಳ ಪೈಕಿ 19 ಮಂದಿಯನ್ನು ನ್ಯಾಯಾಲಯ ಅಪರಾಧಿಗಳೆಂದು ಪರಿಗಣಿಸಿದೆ. ಇದರಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರು ಕೊಲೆಗೆ ಸಂಚು ರೂಪಿಸಿದ ಪ್ರಮುಖ ಆರೋಪಿಯಾಗಿದ್ದಾರೆ. ಉಳಿದ ಇಬ್ಬರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ.

ತೀರ್ಪು ಬಂದ ತಕ್ಷಣವೇ ಪೊಲೀಸರು ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 19 ಅಪರಾಧಿಗಳನ್ನು ತಮ್ಮ ವಶಕ್ಕೆ ಪಡೆದರು. ಇವರೆಲ್ಲರನ್ನೂ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ನ್ಯಾಯಾಲಯವು ಅಪರಾಧಿಗಳಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣದ ಕುರಿತಾದ ವಾದ-ಪ್ರತಿವಾದಗಳನ್ನು ಆಲಿಸಲು ಗುರುವಾರಕ್ಕೆ ದಿನಾಂಕ ನಿಗದಿಪಡಿಸಿದೆ. ಈ ವೇಳೆ ಜೀವಾವಧಿ ಶಿಕ್ಷೆಯಾಗುತ್ತದೆಯೇ ಅಥವಾ ಎಷ್ಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬುದು ಸ್ಪಷ್ಟವಾಗಲಿದೆ.

Read More
Next Story