Online betting disaster: Four members of a family from Tumkur commit suicide in Bihar
x

ಸಾಂದರ್ಭಿಕ ಚಿತ್ರ

ಆನ್‌ಲೈನ್ ಬೆಟ್ಟಿಂಗ್ ಕೊಟ್ಟ ಪೆಟ್ಟು: ಬಿಹಾರದಲ್ಲಿ ತುಮಕೂರಿನ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ತಂಗಿ ಮಗ ಅಮೋಘ್‌ ಕೀರ್ತಿ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ 2025ರ ಆಗಸ್ಟ್‌ನಲ್ಲಿ ಮಾವ ನಾಗಪ್ರಸಾದ್‌ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೂ ಹೋಗಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


Click the Play button to hear this message in audio format

ಆನ್‌ಲೈನ್‌ ಬೆಟ್ಟಿಂಗ್‌ ಚಟಕ್ಕೆ ಒಳಗಾದವರ ಕುಟುಂಬಗಳು ಬಲಿಯಾಗುತ್ತಿರುವುದು ದುರಂತದ ಸಂಗತಿ. ಇದೀಗ ಇಂತಹದೇ ದುರ್ಘಟನೆಯೊಂದು ನಡೆದಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕುಟುಂಬವೊಂದು ದಾರುಣ ಅಂತ್ಯ ಕಂಡಿದೆ.

ನೇಪಾಳಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಿಹಾರದ ನಳಂದ ಜಿಲ್ಲೆಯ ರಾಜಗೀರ್‌ನಲ್ಲಿ ನಡೆದಿದ್ದು, ಮೃತರನ್ನು ತಾಯಿ ಜಿ.ಆರ್.ಸುಮಂಗಲಾ (78), ಮಗ ಜಿ.ಆರ್.ನಾಗಪ್ರಸಾದ್ (50) ಹಾಗೂ ಆಕೆಯ ಇಬ್ಬರು ಪುತ್ರಿಯರಾದ ಜಿ.ಆರ್.ಶಿಲ್ಪಾ (48) ಹಾಗೂ ಜಿ.ಆರ್‌.ಶ್ರುತಾ (43) ಎಂದು ಗುರುತಿಸಲಾಗಿದೆ.

ಸುಮಂಗಲಾ ರತ್ನಬಾಲ ರಾಜು ಎಂಬುವವರ ಪತ್ನಿ ಎಂದು ತಿಳಿದುಬಂದಿದ್ದು, ಮೃತರಿಗೆ ಸೇರಿದ ಮೊಬೈಲ್‌ , ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಎಟಿಎಂ ಕಾರ್ಡ್‌ ಸೇರಿದಂತೆ ಹಲವು ದಾಖಲೆಗಳು, 1.18 ಲಕ್ಷ ರೂ. ಹಣ ಹಾಗೂ ಬಹಳ ಪ್ರಮಾಣದ ನಿದ್ರೆ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆಗಿದ್ದೇನು?

ರಾಜಗೀರ್‌ ಬೌದ್ಧ ಮತ್ತು ಜೈನರಿಗೆ ಅತ್ಯಂತ ಪವಿತ್ರವೆನಿಸಿದ ಯಾತ್ರಾ ಸ್ಥಳವಾಗಿದ್ದು, ಮೃತರು ನೇಪಾಳಕ್ಕೆ ಪ್ರವಾಸ ಹೋಗಿ ಜ.30ರಂದು ರಾಜಗೀರ್‌ಗೆ ಬಂದು ಧರ್ಮಶಾಲೆಯೊಂದರಲ್ಲಿ ಕೊಠಡಿ ಬುಕ್‌ ಮಾಡಿದ್ದರು. ಮುಂದೆ ನಳಂದಾದ ಪಾವಾಪುರಿಗೆ ಹೋಗಲು ಯೋಜಿಸಿದ್ದರು. ಶುಕ್ರವಾರ(ಫೆ.6) ಬೆಳಿಗ್ಗೆ 9.40ರ ಸುಮಾರಿಗೆ ಕೊಠಡಿಯಿಂದ ಕೊಳೆತ ವಾಸನೆ ಬಂದ ಹಿನ್ನೆಲೆ ಧರ್ಮಶಾಲೆಯ ಮ್ಯಾನೇಜರ್‌ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ನಾಲ್ಕೂ ಮಂದಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂರು ದಿನದಿಂದ ಕೊಠಡಿಯ ಬಾಗಿಲನ್ನೇ ತೆರೆದಿರಲಿಲ್ಲ ಎನ್ನಲಾಗಿದ್ದು, ಮೃತರಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ತುಮಕೂರು ಮೂಲದವರು ಎಂದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಟ್ಟಿಂಗ್‌ ಚಟ, ಹಿನ್ನೆಲೆ ಏನು ?

ರಾಜಗೀರ್‌ನಲ್ಲಿ ಪತ್ತೆಯಾದ ಒಂದೇ ಕುಟುಂಬದ ನಾಲ್ವರಲ್ಲಿ ತಾಯಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದು, ಇದರಲ್ಲಿ ನಾಗಪ್ರಸಾದ್, ತನ್ನ ತಂಗಿ ಶಿಲ್ಪಾ ಮಗನಾದ ಅಮೋಘ್ ಕೀರ್ತಿಯ ನಡೆ ಮತ್ತು ಗೇಮ್ ಚಟದಿಂದ ಬೇಸತ್ತಿದ್ದರು. ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಅಮೋಘ್ ಕೀರ್ತಿಯನ್ನು 2025ರ ಆಗಸ್ಟ್‌ನಲ್ಲಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೂ ಹೋಗಿ ಬಂದಿದ್ದರು. ಈ ವೇಳೆ ತಂಗಿ ಶಿಲ್ಪಾ ಬೇಲ್ ಕೊಟ್ಟು ಬಿಡಿಸಿಕೊಂಡು ಬಂದಿದ್ದರು.

ಪಶ್ಚಾತ್ತಾಪದಿಂದ ಕುಗ್ಗಿದ್ದ ಕುಟುಂಬ

ಕೊಲೆ ಕೃತ್ಯದ ನಂತರ ನಾಗಪ್ರಸಾದ್ ತೀವ್ರ ಮಾನಸಿಕ ಖಿನ್ನತೆ ಮತ್ತು ಪಶ್ಚಾತ್ತಾಪಕ್ಕೆ ಒಳಗಾಗಿದ್ದರು. ತಂಗಿ ಮಗನ ಕೊಲೆ ಮತ್ತು ಅದರಿಂದಾದ ಅವಮಾನ ಇಡೀ ಕುಟುಂಬವನ್ನು ಕುಗ್ಗಿಸಿತ್ತು. ಈ ಮಾನಸಿಕ ಒತ್ತಡದಿಂದ ಹೊರಬರಲು ಅವರು ತಾಯಿ ಸುಮಂಗಲಾ, ಸಹೋದರಿಯರಾದ ಶಿಲ್ಪಾ ಮತ್ತು ಶ್ರುತಾ ಅವರೊಂದಿಗೆ ಪ್ರವಾಸ ಹೋಗಿದ್ದರು. ಆದರೆ, ಹಳೆಯ ನೋವು ಮರೆಯಲು ಸಾಧ್ಯವಾಗದ ಕಾರಣ ಪಶ್ಚಾತ್ತಾ ಪದಲ್ಲಿದ್ದ ಕುಟುಂಬವು ಈ ನಿರ್ಧಾರ ಕೈಗೊಂಡಿದೆ ಎಂದು ಶಂಕಿಸಲಾಗಿದೆ.

ರಾಜ್ಯ ಪೊಲೀಸರ ಸಂಪರ್ಕ

ಘಟನೆಯಲ್ಲಿ ವಶಪಡಿಸಿಕೊಂಡ ದಾಖಲೆಗಳ ಪ್ರಕಾರ ಮೃತರು ಕರ್ನಾಟಕದವರೆಂದು ತಿಳಿದು ಬಂದಿದ್ದು, ರಾಜ್ಯ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮೃತರ ಕುಟುಂಬಕ್ಕೆ ಮಾಹಿತಿ ತಲುಪಿಸಿದ್ದೇವೆ. ಎಲ್ಲಾ ಶವಗಳನ್ನು ನಲಂದಾ ಜಿಲ್ಲೆಯ ಬಿಹಾರ್ ಶರೀಫ್‌ನಲ್ಲಿರುವ ಸದರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವೀಡಿಯೊಗ್ರಫಿಯೊಂದಿಗೆ ವೈದ್ಯಕೀಯ ಮಂಡಳಿಯು ಶವಪರೀಕ್ಷೆ ನಡೆಸಲಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ನಡೆಸಲು ನಲಂದಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಈ ಸಂಬಂಧ ಇಬ್ಬರು ಪೊಲೀಸರನ್ನು ಗುಬ್ಬಿಗೆ ಕಳುಹಿಸಲಾಗಿದೆ ಎಂದು ರಾಜಗೀರ್‌ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story