
ತಂದೆಯ ಸಾವು, ಆಸ್ಪತ್ರೆ ವೆಚ್ಚಕ್ಕೆ ಬೆದರಿ ಯುವಕ ಆತ್ಮಹತ್ಯೆ; ತಾಯಿಯಿಂದಲೂ ಅತ್ಮಹತ್ಯೆ ಯತ್ನ
ಸೋಮವಾರ ರಾತ್ರಿ ತನ್ನ ಸ್ನೇಹಿತನಿಗೆ ಸಂದೇಶವೊಂದನ್ನು ಕಳುಹಿಸಿದ ವಿಶಾಲ್, ಯಡುವನಹಳ್ಳಿ ಬಳಿಯ ಜೈನ್ ಕಾಲೇಜು ಸಮೀಪ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದರು.
ವಿಧಿಯಾಟಕ್ಕೆ ಒಂದು ಸುಂದರ ಕುಟುಂಬ ಅಕ್ಷರಶಃ ಛಿದ್ರವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಸಾಲು ಸಾಲು ಸಂಕಷ್ಟಕ್ಕೆ ಈಡಾಗಿದ್ದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ, ಮಗನ ಅಗಲಿಕೆ ತಾಳಲಾರದೆ ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾರೋಹಳ್ಳಿ ತಾಲ್ಲೂಕಿನ ಮರಿಗೌಡನದೊಡ್ಡಿ ನಿವಾಸಿ ವಿಶಾಲ್ ಆತ್ಮಹತ್ಯೆಗೆ ಶರಣಾದ ದುರ್ದೈವಿ ಯುವಕ. ಕೆಲವು ತಿಂಗಳ ಹಿಂದೆ ವಿಶಾಲ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಚಿಕಿತ್ಸೆಗಾಗಿ ಕುಟುಂಬವು ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿತ್ತು. ಆರ್ಥಿಕ ಸಂಕಷ್ಟದ ಬೆನ್ನಲ್ಲೇ ವಿಶಾಲ್ ಅವರ ತಂದೆಯೂ ಇತ್ತೀಚೆಗೆ ನಿಧನರಾಗಿದ್ದರು.
ತನ್ನ ಚಿಕಿತ್ಸೆಗೆ ಆದ ಬೃಹತ್ ಮೊತ್ತದ ವೆಚ್ಚ ಮತ್ತು ತಂದೆಯ ಅಗಲಿಕೆಯಿಂದ ವಿಶಾಲ್ ತೀವ್ರವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಇದೇ ಮನಸ್ಥಿತಿಯಲ್ಲಿ ಸೋಮವಾರ ರಾತ್ರಿ ತನ್ನ ಸ್ನೇಹಿತನಿಗೆ ಸಂದೇಶವೊಂದನ್ನು ಕಳುಹಿಸಿದ ವಿಶಾಲ್, ಯಡುವನಹಳ್ಳಿ ಬಳಿಯ ಜೈನ್ ಕಾಲೇಜು ಸಮೀಪ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದರು.
ತಾಯಿಯ ಆತ್ಮಹತ್ಯೆ ಯತ್ನ
ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ವಿಶಾಲ್ ತಾಯಿ ಆಘಾತಕ್ಕೊಳಗಾಗಿದ್ದಾರೆ. ಮಗನನ್ನು ಕಳೆದುಕೊಂಡ ದುಃಖ ತಡೆಯಲಾರದೆ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತ ಅಕ್ಕಪಕ್ಕದ ಮನೆಯವರು ಮತ್ತು ಸಂಬಂಧಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಆದರೆ ಮಗ ಮತ್ತು ಪತಿಯನ್ನು ಕಳೆದುಕೊಂಡ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಾರೋಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ಮುಗಿಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

