ಸೌಜನ್ಯ ಪ್ರಕರಣ: ಹೋರಾಟಗಾರರಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬ ಪ್ರಶ್ನೆಗೆ ಮಹೇಶ್ ರೆಡ್ಡಿ ತಿಮರೋಡಿ ತಿರುಗೇಟು
ಸೌಜನ್ಯ ಪ್ರಕರಣದ ಮರುತನಿಖೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಹಣ ಎಲ್ಲಿಂದ ಬರುತ್ತಿದೆ ಎಂಬ ಪ್ರಶ್ನೆಗೆ ಮಹೇಶ್ ರೆಡ್ಡಿ ತಿಮರೋಡಿ ತಿರುಗೇಟು ನೀಡಿದ್ದಾರೆ. ತಮ್ಮ ವಿರುದ್ಧವೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ಹಣ ಎಲ್ಲಿಂದ ಬರುತ್ತಿದೆ ಎಂಬ ಪ್ರಶ್ನೆಗಳಿಗೆ ಹೋರಾಟಗಾರ ಮಹೇಶ್ ರೆಡ್ಡಿ ತಿಮರೋಡಿ ತಿರುಗೇಟು ನೀಡಿದ್ದಾರೆ. ದ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಘಟಾನುಘಟಿ ವಕೀಲರನ್ನು ನೇಮಿಸಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಹಣ ಎಲ್ಲಿಂದ ಬರುತ್ತಿದೆ? ವಿದೇಶದಿಂದ ಹಣಕಾಸಿನ ನೆರವು ಬರುತ್ತಿದೆಯೇ? ಅಥವಾ ಯಾವುದಾದರೂ ಕ್ಷೇತ್ರವನ್ನು ನಿಯಂತ್ರಿಸುವ ಉದ್ದೇಶದಿಂದ ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಇದಕ್ಕೆ ಉತ್ತರಿಸಿರುವ ಅವರು, ತಮ್ಮ ವಿರುದ್ಧ ಆರೋಪ ಮಾಡುವವರು ಮೊದಲು ಈ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವವರನ್ನು ಪ್ರಶ್ನಿಸುವ ಬದಲು, ಅತ್ಯಾಚಾರ ಆರೋಪಿಗಳ ಪರವಾಗಿ ವಾದಿಸುವ ವಕೀಲರನ್ನೂ ಪ್ರಶ್ನಿಸಲಿ ಎಂದು ಸವಾಲು ಹಾಕಿದ್ದಾರೆ.
ತಮ್ಮ ಹೋರಾಟಕ್ಕೆ ಹಣ ಬರುತ್ತಿದ್ದರೆ ತನಿಖೆ ನಡೆಸಲಿ. ತಾವು ದೇಶದ ಕಾನೂನು ಮತ್ತು ಸಂವಿಧಾನದ ವ್ಯಾಪ್ತಿಯಲ್ಲಿಯೇ ಇದ್ದು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಹಣಕಾಸಿನ ಆರೋಪ ಮಾಡುವವರು, ಮಾಧ್ಯಮಗಳಿಗೆ ನೋಟಿಸ್ ನೀಡುವವರು, ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳನ್ನು ಅಳಿಸುವಂತೆ ಒತ್ತಡ ಹೇರುವವರು ಹಾಗೂ ಅತ್ಯಾಚಾರ ಆರೋಪಿಗಳ ವಿರುದ್ಧ ಮಾತನಾಡದಂತೆ ತಡೆಯಲು ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಪಡೆಯುವವರ ಬಗ್ಗೆ ಏಕೆ ತನಿಖೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಕಳೆದ 14 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಮರುತನಿಖೆಗೆ ಅವಕಾಶ ಮಾಡಿಕೊಟ್ಟಿರುವುದು ಮಹತ್ವದ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸೌಜನ್ಯಳಿಗೆ ಮಾತ್ರವಲ್ಲದೆ, ಇಂತಹ ಪ್ರಕರಣಗಳಲ್ಲಿ ಬಲಿಯಾದ ಇತರ ಹೆಣ್ಣುಮಕ್ಕಳಿಗೂ ನ್ಯಾಯ ಸಿಗಬೇಕು. ನಿಜವಾದ ಅಪರಾಧಿಗಳು ಯಾರೆಂಬುದು ತನಿಖೆಯಿಂದ ಬಹಿರಂಗವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ಕುರಿತು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ನ್ಯಾಯಕ್ಕಾಗಿ ಧ್ವನಿ ಎತ್ತುವುದನ್ನು ತಡೆಯುವ ಕಾನೂನು ತರಲಿ ನೋಡೋಣ ಎಂದು ಸವಾಲು ಹಾಕಿರುವ ಅವರು, ತಮ್ಮ ವಿರುದ್ಧದ ಆರೋಪಗಳಿಗೂ ತನಿಖೆ ನಡೆಸಲು ಸಿದ್ಧ ಎಂದು ಹೇಳಿದ್ದಾರೆ.
