ರಾಯ್ ಸಿ.ಜೆ ನಿಗೂಢ ಸಾವು: ತನಿಖೆಗೆ ಎಸ್‌ಐಟಿ ತಂಡ ರಚಿಸಿದ ಸರ್ಕಾರ
x

ರಾಯ್ ಸಿ.ಜೆ ನಿಗೂಢ ಸಾವು: ತನಿಖೆಗೆ ಎಸ್‌ಐಟಿ ತಂಡ ರಚಿಸಿದ ಸರ್ಕಾರ

ಕರ್ನಾಟಕ ವಿಧಾನ ಸಭೆಯ ಅಧಿವೇಶನ ನಡೆಯುತ್ತಿದ್ದು, ಆಡಳಿತ ಪಕ್ಷಕ್ಕೆ ಇದೇ ವಿಚಾರವನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಸವಾಲೊಡ್ಡುವ ಸಾಧ್ಯತೆಗಳು ಇರುವ ಕಾರಣ ತಕ್ಷಣವೇ ಕಾರ್ಯಪ್ರವೃತ್ತಗೊಂಡ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ.


Click the Play button to hear this message in audio format

ರಾಜ್ಯದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ರಾಯ್ ಸಿ. ಜೆ ಅವರ ಆತ್ಮಹತ್ಯೆ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಐಟಿ ಅಧಿಕಾರಿಗಳ ವಿಚಾರಣೆ ನಡುವೆಯೇ ಸಂಭವಿಸಿದ ಈ ದುರಂತ ಸಾವಿನ ಸುತ್ತ ಅನುಮಾನ ಮೂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಶನಿವಾರ ‘ವಿಶೇಷ ತನಿಖಾ ತಂಡ’ (ಎಸ್​ಐಟಿ) ರಚಿಸಿ ಆದೇಶ ಹೊರಡಿಸಿದ್ದಾರೆ.

ಗೃಹಸಚಿವ ಜಿ ಪರಮೇಶ್ವರ್ ಅವರು ಎಸ್​ಐಟಿ ರಚನೆಯನ್ನು ಖಚಿತಪಡಿಸಿದ್ದಾರೆ. "ಘಟನೆ ಬಗ್ಗೆ ತನಿಖೆ ನಡೆಸಲು ನಾವು ಎಸ್‌ಐಟಿ ರಚಿಸಿದ್ದೇವೆ. ಡಿಸೆಂಬರ್‌ನಲ್ಲಿ ನಡೆದಿದೆ ಎನ್ನಲಾದ ಐಟಿ ದಾಳಿಯಿಂದ ಅವರು ಸಮಸ್ಯೆ ಎದುರಿಸುತ್ತಿದ್ದರೇ ಅಥವಾ ಈ ಸಾವಿನ ಹಿಂದೆ-ಮುಂದೆ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಈ ತಂಡ ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆ. ತನಿಖೆಯಲ್ಲಿ ಕಂಡುಬರುವ ಸತ್ಯಾಂಶಗಳ ಆಧಾರದ ಮೇಲೆ ಯಾರನ್ನು ವಿಚಾರಣೆಗೆ ಕರೆಯಬೇಕು ಅಥವಾ ತನಿಖೆಗೆ ಒಳಪಡಿಸಬೇಕು ಎಂಬುದನ್ನು ಎಸ್‌ಐಟಿ ಅಧಿಕಾರಿಗಳೇ ನಿರ್ಧರಿಸಲಿದ್ದು, ಅದೆಲ್ಲವೂ ಅವರ ವಿವೇಚನೆಗೆ ಬಿಟ್ಟ ವಿಚಾರ,'' ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನ ಸಭೆಯ ಅಧಿವೇಶನ ನಡೆಯುತ್ತಿದ್ದು, ಬುಧವಾರ ತನಕ ಮುಂದುವರಿಯಲಿದೆ. ಆಡಳಿತ ಪಕ್ಷಕ್ಕೆ ಇದೇ ವಿಚಾರವನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಸವಾಲೊಡ್ಡುವ ಸಾಧ್ಯತೆಗಳು ಇರುವ ಕಾರಣ ತಕ್ಷಣವೇ ಕಾರ್ಯಪ್ರವೃತ್ತಗೊಂಡ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಕಾನ್ಫಿಡೆಂಟ್​ ಗ್ರೂಪ್​ನ ಕಚೇರಿ ವ್ಯಾಪ್ತಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಆರಂಭಿಕ ಮಾಹಿತಿಯನ್ನು ಅವರು ನಗರ ಪೊಲೀಸ್ ಆಯುಕ್ತರಿಗೆ ಒಪ್ಪಿಸಿದ್ದಾರೆ. ಅದರ ಆಧಾರದಲ್ಲಿ ಎಸ್​ಐಟಿ ತಂಡ ತನಿಖೆ ನಡೆಸಲಿದೆ.

ತಂಡದಲ್ಲಿರುವ ಅಧಿಕಾರಿಗಳು

ಈ ಪ್ರಕರಣವು ಮೇಲ್ನೋಟಕ್ಕೆ ಆತ್ಮಹತ್ಯೆಯಾಗಿದ್ದರೂ ಇದರ ಹಿಂದೆ ಪ್ರಭಾವಿ ವ್ಯಕ್ತಿಗಳು ನಂಟು ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ. ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ವಂಶಿಕೃಷ್ಣ ಅವರು ಈ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ತಂಡದಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಯ ಎಸಿಪಿ ಸುಧೀರ್ ಅವರುಗಳು ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಪ್ರಾಥಮಿಕ ಹಂತದ ತನಿಖೆ ಆರಂಭಿಸಿದ್ದಾರೆ.

ಡೆತ್ ನೋಟ್ ಸಿಗದಿರುವ ಗೊಂದಲ

ಸಾಮಾನ್ಯವಾಗಿ ಇಂತಹ ಆಘಾತಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳು ತಮ್ಮ ಸಾವಿಗೆ ಕಾರಣವೇನು ಎಂಬುದನ್ನು ವಿವರಿಸಿ ಮರಣ ಪತ್ರ (Death Note) ಬರೆದಿಡುವುದು ವಾಡಿಕೆ. ಆದರೆ, ಸಿಜೆ ರಾಯ್ ಅವರ ಮೃತದೇಹ ಪತ್ತೆಯಾದ ಸ್ಥಳದಲ್ಲಾಗಲಿ ಅಥವಾ ಅವರ ಕಚೇರಿಯಲ್ಲಾಗಲಿ ಡೆತ್ ನೋಟ್ ಪತ್ತೆಯಾಗಿಲ್ಲ. ಇದು ತನಿಖಾಧಿಕಾರಿಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಡೆತ್ ನೋಟ್ ಇಲ್ಲದಿರುವುದು ರಾಯ್ ಅವರು ಹಠಾತ್ ಆಗಿ ಒತ್ತಡಕ್ಕೆ ಸಿಲುಕಿ ಈ ನಿರ್ಧಾರ ತೆಗೆದುಕೊಂಡರೇ ಅಥವಾ ಸಾಕ್ಷ್ಯ ನಾಶದ ಪ್ರಯತ್ನವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಗುಂಡು ಹಾರಿಸಿಕೊಂಡ ರೀತಿಯಲ್ಲೂ ಸಂಶಯ

ಆತ್ಮಹತ್ಯೆಯ ಸ್ವರೂಪ ಕೂಡ ಪೊಲೀಸರನ್ನು ಗೊಂದಲಕ್ಕೆ ಈಡು ಮಾಡಿದೆ. ಸಾಮಾನ್ಯವಾಗಿ ಪಿಸ್ತೂಲ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳುವವರು ತಲೆಗೆ ಗುಂಡು ಹಾರಿಸಿಕೊಳ್ಳುವುದು ಕಂಡುಬರುತ್ತದೆ. ಆದರೆ, ಸಿಜೆ ರಾಯ್ ಅವರು ತಮ್ಮ ಎದೆಗೆ ತೀರಾ ಹತ್ತಿರದಿಂದ ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಈ ಅಸಹಜ ನಡವಳಿಕೆಯು ತನಿಖೆಗೆ ಹೊಸ ಆಯಾಮ ನೀಡಿದೆ. ಎಸ್‌ಐಟಿ ತಂಡವು ಈ ಆಯಾಮದಲ್ಲೂ ಕೂಲಂಕುಷವಾಗಿ ಪರಿಶೀಲನೆ ನಡೆಸಲಿದೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ವರದಿ ಈ ಹಂತದಲ್ಲಿ ನಿರ್ಣಾಯಕವಾಗಲಿದೆ.

ರಾಜಕೀಯ ನಂಟಿನ ಜಾಡು

ಕಾನ್ಫಿಡೆಂಟ್ ಗ್ರೂಪ್‌ನ ಬೃಹತ್ ಸಾಮ್ರಾಜ್ಯದ ಹಿಂದೆ ಕೇವಲ ರಾಯ್ ಅವರ ಶ್ರಮವಷ್ಟೇ ಅಲ್ಲದೆ, ಅಕ್ರಮ ಹಣದ ಹರಿವು ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದ ಪ್ರಭಾವಿ ರಾಜಕೀಯ ನಾಯಕರು ಹಾಗೂ ಖ್ಯಾತ ಚಲನಚಿತ್ರ ತಾರೆಯರು ಬೇನಾಮಿ ಹೆಸರಿನಲ್ಲಿ ಅಥವಾ ಅಕ್ರಮವಾಗಿ ರಾಯ್ ಅವರ ಸಂಸ್ಥೆಯಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪಗಳು ಇದೀಗ ಕೇಳಿ ಬಂದಿವೆ. ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ, ಈ ಅಕ್ರಮ ಹೂಡಿಕೆದಾರರ ಹೆಸರುಗಳನ್ನು ಬಾಯಿಬಿಡದಂತೆ ರಾಯ್ ಅವರ ಮೇಲೆ ರಾಜಕೀಯ ವಲಯದಿಂದ ತೀವ್ರ ಒತ್ತಡವಿತ್ತೇ ಎಂಬ ಪ್ರಶ್ನೆಗಳು ಇದೀಗ ಸುಳಿದಾಡುತ್ತಿವೆ.

ಘಟನೆಯ ಹಿನ್ನೆಲೆ ಏನು?

ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ, ಅಧಿಕಾರಿಗಳ ಅನುಮತಿ ಪಡೆದು ನೀರು ಕುಡಿಯುವ ನೆಪದಲ್ಲಿ ತಮ್ಮ ಕ್ಯಾಬಿನ್‌ಗೆ ತೆರಳಿದ ಸಿಜೆ ರಾಯ್, ಕ್ಷಣಾರ್ಧದಲ್ಲೇ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದರು. ಮಾರುತಿ 800 ಕಾರಿನಲ್ಲಿ ಓಡಾಡುತ್ತಾ ಉದ್ಯಮ ಆರಂಭಿಸಿ ಇಂದು ಬಹುಕೋಟಿ ರೂಪಾಯಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದ್ದ ಕೇರಳ ಮೂಲದ ಸಿಜೆ ರಾಯ್ ಅವರ ದುರಂತ ಅಂತ್ಯ ಈಗ ನಿಗೂಢತೆಯಲ್ಲಿ ಸಿಲುಕಿದೆ.

Read More
Next Story