ಶಿವಮೊಗ್ಗದಲ್ಲಿ ರೌಡಿಶೀಟರ್ ಕುಳ್ಳಿ ಕಿರಣ್ ಬರ್ಬರ ಹತ್ಯೆ
x

15 ನಿಮಿಷಗಳ ಮಾತುಕತೆ ಬಳಿಕ ಕುಳ್ಳಿ ಕಿರಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆದಿದೆ.

ಶಿವಮೊಗ್ಗದಲ್ಲಿ ರೌಡಿಶೀಟರ್ ಕುಳ್ಳಿ ಕಿರಣ್ ಬರ್ಬರ ಹತ್ಯೆ

ಕುಳ್ಳಿ ಕಿರಣ್ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನ ಸೇರಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದವು. ಇತ್ತೀಚಿನ ದಿನಗಳಲ್ಲಿ ಆತ ಶಿವಮೊಗ್ಗದಲ್ಲಿ ಹೆಚ್ಚಾಗಿ ವಾಸಿಸುತ್ತಿರಲಿಲ್ಲ. ಆಗಾಗ ಊರಿಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


Click the Play button to hear this message in audio format

ಶಿವಮೊಗ್ಗ ತಾಲೂಕು ರಾಮಿನಕೊಪ್ಪ ಗ್ರಾಮದಲ್ಲಿ ರೌಡಿಶೀಟರ್‌ವೊಬ್ಬನನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿದೆ. ಮೃತನನ್ನು 32 ವರ್ಷದ ಕುಳ್ಳಿ ಕಿರಣ್ ಎಂದು ಗುರುತಿಸಲಾಗಿದೆ.

ಕುಳ್ಳಿ ಕಿರಣ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಮುಖ ಮತ್ತು ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಕಿರಣ್‌ನನ್ನು ಆತನ ಸ್ನೇಹಿತರು ತಕ್ಷಣ ಸಹ್ಯಾದ್ರಿ ನಾರಾಯಣ ಹೃದಯಾಲಯಕ್ಕೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಬಳಿಕ ಕಿರಣ್‌ನ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು

ಘಟನೆ ಕುರಿತು ಮಾಹಿತಿ ನೀಡಿದ ಎಸ್‌ಪಿ ನಿಖಿಲ್, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಿನಕೊಪ್ಪದಲ್ಲಿ ಕಿರಣ್ ಹತ್ಯೆಯಾಗಿರುವುದಾಗಿ ತಿಳಿಸಿದ್ದಾರೆ. ಬೈಕ್‌ನಲ್ಲಿ ಬಂದಿದ್ದ ಕೆಲವರು ಕಿರಣ್‌ನೊಂದಿಗೆ ಮಾತುಕತೆ ನಡೆಸಿದ ಬಳಿಕ ಆತನ ಮೇಲೆ ದಾಳಿ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಘಟನೆಯಲ್ಲಿ ಇಬ್ಬರಿಂದ ಮೂವರು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಈಗಾಗಲೇ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಆರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಿರಣ್

ಪೊಲೀಸರ ಪ್ರಕಾರ, ಕುಳ್ಳಿ ಕಿರಣ್ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನ ಸೇರಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದವು. ಇತ್ತೀಚಿನ ದಿನಗಳಲ್ಲಿ ಆತ ಶಿವಮೊಗ್ಗದಲ್ಲಿ ಹೆಚ್ಚಾಗಿ ವಾಸಿಸುತ್ತಿರಲಿಲ್ಲ. ಆಗಾಗ ಊರಿಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರಣ್‌ನ ಪರಿಚಿತರು ಅಥವಾ ಸಹಚರರೇ ಹತ್ಯೆಯ ಹಿಂದೆ ಇರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆದರೆ ಈ ಕುರಿತು ಸದ್ಯ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.

ಹಣಕಾಸಿನ ವಿಚಾರವೇ ಕೊಲೆಗೆ ಕಾರಣ?

ಪ್ರಾಥಮಿಕ ಮಾಹಿತಿಯ ಪ್ರಕಾರ ಹಣದ ವಿಚಾರವಾಗಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ನಡೆಯುವ ಮುನ್ನ ಕಿರಣ್ ಮತ್ತು ಆರೋಪಿಗಳ ನಡುವೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಬಳಿಕ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಗ್ಯಾಂಗ್‌ವಾರ್ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ

ಈ ಪ್ರಕರಣ ಗ್ಯಾಂಗ್‌ವಾರ್‌ಗೆ ಸಂಬಂಧಿಸಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆರೋಪಿಗಳನ್ನು ಬಂಧಿಸಿದ ಬಳಿಕವೇ ಹತ್ಯೆಯ ನಿಖರ ಕಾರಣ ಹಾಗೂ ಕೃತ್ಯದ ಹಿಂದಿರುವವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರಣ್‌ನ ಚಟುವಟಿಕೆಗಳ ಮೇಲೆ ಪೊಲೀಸರು ಈ ಹಿಂದಿನಿಂದಲೂ ನಿಗಾ ಇರಿಸಿದ್ದರು. ಆತನನ್ನು ಗಡಿಪಾರು ಮಾಡುವ ಕುರಿತೂ ಪೊಲೀಸ್ ಇಲಾಖೆ ಪರಿಶೀಲನೆ ನಡೆಸುತ್ತಿತ್ತು ಎಂದು ಎಸ್‌ಪಿ ನಿಖಿಲ್ ಮಾಹಿತಿ ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ.

Read More
Next Story