
ಶಿವಮೊಗ್ಗ: ಚಲಿಸುತ್ತಿದ್ದ ಒಮ್ನಿ ವಾಹನಕ್ಕೆ ಆಕಸ್ಮಿಕ ಬೆಂಕಿ, ಕೂದಲೆಳೆ ಅಂತರದಲ್ಲಿ ಪಾರಾದ ಮಾಲೀಕ ಮತ್ತು ಚಾಲಕ
ಸುಟ್ಟು ಕರಕಲಾದ ಈ ವಾಹನವು ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರ ಗ್ರಾಮದ ನಿವಾಸಿ ಗಂಗಾಧರ್ ಎಂಬುವವರಿಗೆ ಸೇರಿದ್ದಾಗಿದೆ.
ರಸ್ತೆಯಲ್ಲಿ ಚಲಿಸುತ್ತಿದ್ದ ಮಾರುತಿ ಒಮ್ನಿ ವಾಹನವೊಂದರಲ್ಲಿ ಹಠಾತ್ತನೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಬೆಳ್ಳೂರು ಬಂಗ್ಲಿ ದಿಬ್ಬದ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಇಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಟ್ಟು ಕರಕಲಾದ ಈ ವಾಹನವು ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರ ಗ್ರಾಮದ ನಿವಾಸಿ ಗಂಗಾಧರ್ ಎಂಬುವವರಿಗೆ ಸೇರಿದ್ದಾಗಿದೆ. ಗಂಗಾಧರ್ ಅವರು ತಮ್ಮ ಮನೆಯಲ್ಲಿ ಆಯೋಜಿಸಲಾಗಿದ್ದ ಮದುವೆ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗ ನಗರದಿಂದ ಅಗತ್ಯ ದಿನಸಿ ಸಾಮಗ್ರಿಗಳನ್ನು ವಾಹನದಲ್ಲಿ ತುಂಬಿಕೊಂಡು ತಮ್ಮ ಊರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಬೆಳ್ಳೂರು ಬಂಗ್ಲಿ ದಿಬ್ಬದ ಬಳಿ ಬರುತ್ತಿದ್ದಂತೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ.
ತಕ್ಷಣವೇ ಕೆಳಗಿಳಿದು ಪಾರಾದ ಇಬ್ಬರು
ವಾಹನದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತ ಚಾಲಕ ಶ್ರೀಕಾಂತ್ ಹಾಗೂ ವಾಹನದ ಮಾಲೀಕ ಗಂಗಾಧರ್ ಅವರು ತ್ವರಿತವಾಗಿ ಕಾರಿನಿಂದ ಕೆಳಗೆ ಇಳಿದಿದ್ದಾರೆ. ಹೀಗಾಗಿ ಬಹುದೊಡ್ಡ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ. ಆದರೆ, ನೋಡನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ವಾಹನವನ್ನು ಆವರಿಸಿಕೊಂಡ ಪರಿಣಾಮ ವಾಹನ ಹಾಗೂ ಅದರಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಬಳಿಕ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸ್ಥಳೀಯರ ನೆರವಿನಿಂದ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಲಾಯಿತು.

