11 crore transactions in one account in Shivamogga; CID officials shocked by cyber thieves cleverness
x

ಸಾಂದರ್ಭಿಕ ಚಿತ್ರ

ಶಿವಮೊಗ್ಗದ ಒಬ್ಬನ ಖಾತೆಯಲ್ಲೇ 11 ಕೋಟಿ ವಹಿವಾಟು; ಸೈಬರ್ ಕಳ್ಳನ ಚಾಣಾಕ್ಷತನಕ್ಕೆ ಬೆಚ್ಚಿ ಬಿದ್ದ ಸಿಐಡಿ ಅಧಿಕಾರಿಗಳು

ಡಿಜಿಪಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ನಡೆದ ಈ ಹೈ-ವೋಲ್ಟೇಜ್ ಕಾರ್ಯಾಚರಣೆಯಲ್ಲಿ ಸೈಬರ್ ವಂಚನೆಗೆ ಬಳಸಲಾಗುತ್ತಿದ್ದ ಬರೋಬ್ಬರಿ 42,000 'ಮ್ಯೂಲ್' (ಬಾಡಿಗೆ) ಬ್ಯಾಂಕ್ ಖಾತೆಗಳ ಬೃಹತ್ ಜಾಲವನ್ನು ಪತ್ತೆಹಚ್ಚುವಲ್ಲಿ ಸಿಐಡಿ ಯಶಸ್ವಿಯಾಗಿದೆ.


Click the Play button to hear this message in audio format

ಸೈಬರ್ ವಂಚನೆ ಪ್ರಕಣದಲ್ಲಿ ಶಿವಮೊಗ್ಗದಲ್ಲಿ ಸಿಐಡಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ವಂಚಕನೊಬ್ಬನ ಚಾಣಾಕ್ಷತನಕಕ್ಕೆ ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ಒಬ್ಬ ವ್ಯಕ್ತಿ ಬರೋಬ್ಬರಿ 19 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದಲ್ಲದೆ, ಬರೋಬ್ಬರಿ 11 ಕೋಟಿ ರೂ.ಗಳ ಅಕ್ರಮ ವಹಿವಾಟು ನಡೆಸಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಯ ಸಿಐಡಿ ಸೈಬರ್ ಕಮಾಂಡ್ ವಿಭಾಗವು ನಡೆಸಿದ ರಾಜ್ಯವ್ಯಾಪಿ ವಿಶೇಷ ಕಾರ್ಯಾಚರಣೆಯಲ್ಲಿ ಈ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಶಿವಮೊಗ್ಗದಲ್ಲಿ ಬಂಧಿತನಾದ ಈ ಸೈಬರ್​ ಕಳ್ಳನ ವಿರುದ್ಧ ರಾಜ್ಯದ ವಿವಿಧೆಡೆ ಈಗಾಗಲೇ 96 ಪ್ರಕರಣಗಳು ದಾಖಲಾಗಿವೆ ಎಂದರೆ ಈ ಜಾಲದ ವಿಸ್ತಾರ ಎಷ್ಟಿರಬಹುದು ಎಂದು ಊಹಿಸಬಹುದು. ಅಷ್ಟೇ ಅಲ್ಲ, ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಬರೋಬ್ಬರಿ 55 ಕೋಟಿ ರೂ. ವಂಚನೆ ನಡೆದಿರುವ ಸುಳಿವು ಕೂಡ ಸಿಕ್ಕಿದೆ.

42 ಸಾವಿರ ಮ್ಯೂಲ್ ಖಾತೆಗಳ ಪತ್ತೆ

ಡಿಜಿಪಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ನಡೆದ ಈ ಹೈ-ವೋಲ್ಟೇಜ್ ಕಾರ್ಯಾಚರಣೆಯಲ್ಲಿ ಸೈಬರ್ ವಂಚನೆಗೆ ಬಳಸಲಾಗುತ್ತಿದ್ದ ಬರೋಬ್ಬರಿ 42,000 'ಮ್ಯೂಲ್' (ಬಾಡಿಗೆ) ಬ್ಯಾಂಕ್ ಖಾತೆಗಳ ಬೃಹತ್ ಜಾಲವನ್ನು ಪತ್ತೆಹಚ್ಚುವಲ್ಲಿ ಸಿಐಡಿ ಯಶಸ್ವಿಯಾಗಿದೆ. ಫೆಬ್ರವರಿ 5 ಮತ್ತು 6 ರಂದು ರಾಜ್ಯದ 29 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ 25 ಎಟಿಎಂ ಕಾರ್ಡ್‌ಗಳು, 13 ಚೆಕ್ ಬುಕ್‌ಗಳು ಮತ್ತು 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೇಗಿತ್ತು ವಂಚಕರ ಜಾಲ?

ಅಮಾಯಕ ಜನರಿಗೆ 10 ರಿಂದ 20 ಸಾವಿರ ರೂಪಾಯಿ ಆಮಿಷವೊಡ್ಡಿ, ಅವರ ವೈಯಕ್ತಿಕ ದಾಖಲೆಗಳನ್ನು (KYC) ಮತ್ತು ಬ್ಯಾಂಕ್ ವಿವರಗಳನ್ನು ಪಡೆಯುವುದೇ ಈ ದಂಧೆಯ ಮೊದಲ ಹಂತ. ಹೀಗೆ ಸಂಗ್ರಹಿಸಿದ ದಾಖಲೆಗಳ ಮೂಲಕ ನಕಲಿ ಅಥವಾ 'ಮ್ಯೂಲ್' ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ, ಆ ಖಾತೆಗಳ ನಿಯಂತ್ರಣವನ್ನು ಸೈಬರ್ ಅಪರಾಧಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಖಾತೆಗಳನ್ನು ಬಳಸಿಕೊಂಡು ಆನ್‌ಲೈನ್ ವಂಚನೆ, ಅಕ್ರಮ ಬೆಟ್ಟಿಂಗ್ ಮತ್ತು ಕುಖ್ಯಾತ 'ಡಿಜಿಟಲ್ ಅರೆಸ್ಟ್' ದಂಧೆಗಳನ್ನು ನಡೆಸಲಾಗುತ್ತಿತ್ತು ಎಂದು ಡಿಜಿಪಿ ಪ್ರಣವ್ ಮೊಹಂತಿ ವಿವರಿಸಿದ್ದಾರೆ.

ಮಾಸ್ಟರ್ ಮೈಂಡ್‌ಗಳ ಪತ್ತೆಗೆ ಬಲೆ

"ಸಿಐಡಿ ಸೈಬರ್ ಕಮಾಂಡ್ ಅಸ್ತಿತ್ವಕ್ಕೆ ಬಂದು ಕೇವಲ 3 ತಿಂಗಳಾಗಿದ್ದು, ಇದೇ ಮೊದಲ ಬಾರಿಗೆ ಇಂತಹದೊಂದು ಸಂಘಟಿತ ದಾಳಿ ನಡೆಸಿದ್ದೇವೆ. ಈಗ ಸಿಕ್ಕಿಬಿದ್ದಿರುವವರು ಕೇವಲ ಮಧ್ಯವರ್ತಿಗಳು. ಇವರ ಹಿಂದಿರುವ ಅಸಲಿ ಮಾಸ್ಟರ್ ಮೈಂಡ್‌ಗಳನ್ನು ಪತ್ತೆಹಚ್ಚುವುದೇ ನಮ್ಮ ಮುಖ್ಯ ಗುರಿ," ಎಂದು ಡಿಜಿಪಿ ತಿಳಿಸಿದ್ದಾರೆ.

ಸಾರ್ವಜನಿಕರು ಹಣದಾಸೆಗೆ ಬಿದ್ದು ತಮ್ಮ ಬ್ಯಾಂಕ್ ಖಾತೆ ಅಥವಾ ದಾಖಲೆಗಳನ್ನು ಅಪರಿಚಿತರಿಗೆ ನೀಡಬಾರದು ಎಂದು ಪೊಲೀಸರು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

Read More
Next Story