
ಕೊಲೆ ಆರೋಪಿ ನಟ ದರ್ಶನ್
ರೇಣುಕಾಸ್ವಾಮಿ ಕೇಸ್: ಪ್ರಾಸಿಕ್ಯೂಷನ್‌ಗೆ ಮುಖಭಂಗ, ಐವರಿಗೆ ಹೈಕೋರ್ಟ್ ರಿಲೀಫ್!
ಪ್ರಕರಣದಲ್ಲಿ ಸದ್ಯ ಜಾಮೀನಿನ ಮೇಲೆ ಹೊರಗಿರುವ ವಿನಯ್, ನಂದೀಶ್ (ಎ5), ಧನರಾಜು, ಪವನ್ ಮತ್ತು ರಾಘವೇಂದ್ರ ಅವರ ಮುಕ್ತ ಓಡಾಟಕ್ಕೆ ಬ್ರೇಕ್ ಹಾಕಲು ಪ್ರಾಸಿಕ್ಯೂಷನ್ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕೋರ್ಟ್ ಅವರ ಮನವಿಯನ್ನ ತಳ್ಳಿಹಾಕಿದೆ.
ಇಡೀ ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಸಹಚರರಿಗೆ ಹೈಕೋರ್ಟ್‌ನಲ್ಲಿ ‘ಬಿಗ್ ರಿಲೀಫ್’ ಸಿಕ್ಕಿದೆ. ಜೈಲಿನಿಂದ ಹೊರಗಿರುವ ಐವರು ಆರೋಪಿಗಳ ಜಾಮೀನು ರದ್ದುಗೊಳಿಸಬೇಕೆಂದು ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಬುಧವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಇದರೊಂದಿಗೆ ಐವರು ಆರೋಪಿಗಳಿಗೆ ಎದುರಾಗಿದ್ದ ತಕ್ಷಣದ ಜೈಲುವಾಸದ ಭೀತಿ ಸದ್ಯಕ್ಕೆ ದೂರಾದಂತಾಗಿದೆ.
ಯಾರಿಗೆ ಸಿಕ್ತು ರಿಲೀಫ್?
ಪ್ರಕರಣದಲ್ಲಿ ಸದ್ಯ ಜಾಮೀನಿನ ಮೇಲೆ ಹೊರಗಿರುವ ವಿನಯ್, ನಂದೀಶ್ (ಎ5), ಧನರಾಜು, ಪವನ್ ಮತ್ತು ರಾಘವೇಂದ್ರ ಅವರ ಮುಕ್ತ ಓಡಾಟಕ್ಕೆ ಬ್ರೇಕ್ ಹಾಕಲು ಪ್ರಾಸಿಕ್ಯೂಷನ್ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕೋರ್ಟ್ ಅವರ ಮನವಿಯನ್ನ ತಳ್ಳಿಹಾಕಿದೆ.
ಪ್ರಾಸಿಕ್ಯೂಷನ್ ವಾದವೇನಿತ್ತು?
"ಈ ಕೊಲೆ ಪ್ರಕರಣವು ಅತ್ಯಂತ ಕ್ರೂರ ಸ್ವರೂಪದ್ದಾಗಿದೆ. ಸುಪ್ರೀಂಕೋರ್ಟ್ ಈಗಾಗಲೇ ಮುಖ್ಯ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 7 ಜನರ ಜಾಮೀನು ರದ್ದುಪಡಿಸಿ ಜೈಲಿಗೆ ಕಳುಹಿಸಿದೆ. ಅದೇ ನಿಯಮದಂತೆ ಈ ಐವರು ಆರೋಪಿಗಳೂ ಹೊರಗಿದ್ದರೆ ಸಾಕ್ಷ್ಯ ನಾಶಪಡಿಸುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಇವರ ಜಾಮೀನನ್ನೂ ರದ್ದು ಮಾಡಬೇಕು" ಎಂದು ಪ್ರಬಲ ವಾದ ಮಂಡಿಸಲಾಗಿತ್ತು.
ಪ್ರತಿವಾದ ಆಲಿಸಿದ ಕೋರ್ಟ್
ಆರೋಪಿಗಳ ಪರ, ವಿಶೇಷವಾಗಿ ಎ5 ನಂದೀಶ್ ಪರ ಹಿರಿಯ ವಕೀಲ ರಾಮ್ ಸಿಂಗ್ ಅವರು ವಾದ ಮಂಡಿಸಿ, "ಆರೋಪಿಗಳು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕೋರ್ಟ್ ವಿಧಿಸಿರುವ ಜಾಮೀನಿನ ಯಾವುದೇ ನಿಯಮಗಳನ್ನು ಎಲ್ಲೂ ಉಲ್ಲಂಘಿಸಿಲ್ಲ" ಎಂದು ಪ್ರತಿಪಾದಿಸಿದ್ದರು. ಉಭಯ ಪಕ್ಷಗಳ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠವು, ಪ್ರಾಸಿಕ್ಯೂಷನ್ ಅರ್ಜಿಯಲ್ಲಿ ಬಲವಾದ ಕಾನೂನು ಆಧಾರಗಳಿಲ್ಲ ಎಂದು ಅದನ್ನು ವಜಾಗೊಳಿಸಿದೆ.
ಫಾಸ್ಟ್ ಟ್ರ್ಯಾಕ್ ಟ್ರಯಲ್!
ಕಳೆದ ವರ್ಷವೇ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಟ ದರ್ಶನ್ ಮತ್ತು ಅವರ ಪ್ರಮುಖ ಸಹಚರರ ಜಾಮೀನನ್ನು ರದ್ದುಗೊಳಿಸಿ ಜೈಲಿಗೆ ಕಳಿಸುವಂತೆ ಆದೇಶಿಸಿತ್ತು. ಪ್ರಸ್ತುತ ದರ್ಶನ್ ಸೇರಿದಂತೆ 7 ಪ್ರಮುಖ ಆರೋಪಿಗಳು ಕಠಿಣ ಜೈಲುವಾಸ ಅನುಭವಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್, ಈ ಕೊಲೆ ಪ್ರಕರಣದ ಟ್ರಯಲ್ ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದು, "ಒಂದು ವರ್ಷದ ಒಳಗಾಗಿ" ಸಾಕ್ಷಿಗಳ ವಿಚಾರಣೆ ಮುಗಿಸಿ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಗಡುವು ವಿಧಿಸಿದೆ.
59ನೇ ಸೆಷನ್ಸ್ ಕೋರ್ಟ್‌ಗೆ ಕೇಸ್ ವರ್ಗಾವಣೆ!
ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮತ್ತೊಂದು ಪ್ರಮುಖ ತಾಂತ್ರಿಕ ಬದಲಾವಣೆಯಾಗಿದೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ಡೆಪ್ಯುಟಿ ರಿಜಿಸ್ಟ್ರಾರ್ ಹೊರಡಿಸಿರುವ ಹೊಸ ನಿಯೋಜನೆ ಆದೇಶದ ಅನ್ವಯ, ಸೆಷನ್ಸ್ ಕೋರ್ಟ್‌ಗಳಿಗೆ ಸಬ್ ಡಿವಿಜನ್‌ಗಳನ್ನು ಮರುಹಂಚಿಕೆ ಮಾಡಲಾಗಿದೆ. ವಿಜಯನಗರ ಸಬ್ ಡಿವಿಜನ್ ವ್ಯಾಪ್ತಿಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಎಲ್ಲಾ ಕ್ರಿಮಿನಲ್ ಪ್ರಕರಣಗಳು ಈಗ ಅಧಿಕೃತವಾಗಿ 59ನೇ ಸೆಷನ್ಸ್ ಕೋರ್ಟ್‌ಗೆ ವರ್ಗಾವಣೆಯಾಗಿವೆ. ಹೀಗಾಗಿ, ಇನ್ನುಮುಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸುದೀರ್ಘ ಸಾಕ್ಷ್ಯ ವಿಚಾರಣೆ ಹಾಗೂ ಅಂತಿಮ ಟ್ರಯಲ್ ಸಂಪೂರ್ಣವಾಗಿ 59ನೇ ನ್ಯಾಯಾಲಯದಲ್ಲಿಯೇ ಜರುಗಲಿದೆ.

