
ಉಗಾಂಡಾದಲ್ಲಿ ರನ್ಯಾ ರಾವ್‌ಗೆ ಬಿದ್ದಿತ್ತು 2 ಕೋಟಿ ರೂ. ನಾಮ
Ranya Rao| 50 ಕೆ.ಜಿ ಗೋಲ್ಡ್ ಡೀಲ್, 2 ಕೋಟಿ ವಂಚನೆ; ಕೊನೆಗೆ ಶುರುವಾಯ್ತು ಸ್ಮಗ್ಲಿಂಗ್
ಇ.ಡಿ. ಅಧಿಕಾರಿಗಳು ವಾಟ್ಸ್ಆ್ಯಪ್ ಸಂಭಾಷಣೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಹಣ ಪಾವತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಪತ್ತೆ ಹಚ್ಚಿದ್ದಾರೆ.
ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ನಟಿ ರನ್ಯಾ ರಾವ್ ಚಿನ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ. ರನ್ಯಾ ರಾವ್ ಹಾಗೂ ಆಕೆಯ ತಂಡ ನಡೆಸುತ್ತಿದ್ದ ಬೃಹತ್ ಚಿನ್ನದ ಕಳ್ಳಸಾಗಣೆ ದಂಧೆಯ ಕುರಿತು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ದುಬೈನಿಂದ ಬೆಂಗಳೂರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುವ ಮೊದಲು, ಈ ತಂಡ ಆಫ್ರಿಕಾದಲ್ಲಿ ಭಾರಿ ವಂಚನೆಗೆ ಒಳಗಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.
2025ರ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 12.56 ಕೋಟಿ ರೂಪಾಯಿ ಮೌಲ್ಯದ 14 ಕೆಜಿ ಚಿನ್ನದೊಂದಿಗೆ ರನ್ಯಾ ರಾವ್ ಸಿಕ್ಕಿಬಿದ್ದಿದ್ದರು. ಆದರೆ ಈ ಅಕ್ರಮ ದಂಧೆಗೂ ಮೊದಲು ರನ್ಯಾ ಮತ್ತು ಆಕೆಯ ಸಹಚರ ತರುಣ್ ಕೊಂಡೂರು ರಾಜು, ಆಫ್ರಿಕಾದ ಉಗಾಂಡಾ ಮತ್ತು ಕೀನ್ಯಾದಿಂದ ನೇರವಾಗಿ ಚಿನ್ನವನ್ನು ಖರೀದಿಸಲು ಯತ್ನಿಸಿದ್ದರು. ಈ ಉದ್ದೇಶಕ್ಕಾಗಿ ಅವರು ದುಬೈನಲ್ಲಿ 'ವಿರಾ ಡೈಮಂಡ್ಸ್ ಟ್ರೇಡಿಂಗ್' ಎಂಬ ಸಂಸ್ಥೆಯನ್ನು ಕೂಡ ಆರಂಭಿಸಿದ್ದರು. ಉಗಾಂಡಾದ ಬೆನ್ ಎಂಬ ಏಜೆಂಟ್‌ನೊಂದಿಗೆ 50 ಕೆಜಿ ಚಿನ್ನದ ಒಪ್ಪಂದ ಮಾಡಿಕೊಂಡಿದ್ದ ಈ ಜೋಡಿ, ಹಂತ ಹಂತವಾಗಿ ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಾವತಿಸಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಹಣ ಪಡೆದು ನಾಪತ್ತೆಯಾದ ಏಜೆಂಟ್
ಚಿನ್ನದ ಆಸೆಗೆ ಬಿದ್ದು ಉಗಾಂಡಾದ ಕಂಪಾಲಾಗೆ ತೆರಳಿದ್ದ ತರುಣ್ ರಾಜುಗೆ ಅಲ್ಲಿನ ಏಜೆಂಟ್ ಚಿನ್ನವನ್ನು ತೋರಿಸಿ ನಂಬಿಸಿದ್ದ ಎನ್ನಲಾಗಿದೆ. ರನ್ಯಾ ಮತ್ತು ತರುಣ್, ಉಗಾಂಡಾದ ಬೆನ್ ಎಂಬ ಏಜೆಂಟ್ ಮೂಲಕ ಸುಮಾರು 50 ಕೆಜಿ ಚಿನ್ನ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಮೊದಲು ಬೆನ್‌ಗೆ 23.5 ಲಕ್ಷ ರೂ. ಮುಂಗಡ ಪಾವತಿಸಿದ್ದರು. ನಂತರ ಎರಡು ಬಾರಿ ತಲಾ 9.4 ಲಕ್ಷ ರೂ. ನೀಡಿದ್ದರು. ಆದರೆ ಹಣ ಪಡೆದ ನಂತರ ಏಜೆಂಟ್ ನಾಪತ್ತೆಯಾಗಿದ್ದು, ತಾವು ಮೋಸ ಹೋಗಿರುವುದು ಇವರಿಗೆ ತಡವಾಗಿ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ತರುಣ್, ಉಗಾಂಡಾದ ರಾಜಧಾನಿ ಕಂಪಾಲಾಕ್ಕೆ ಭೇಟಿ ನೀಡಿದ್ದ. ಅಲ್ಲಿ ಏಜೆಂಟ್ ಚಿನ್ನವನ್ನು ತೋರಿಸಿ, ಅದನ್ನು ನೀಡಲು ಹೆಚ್ಚುವರಿ 1.7 ಕೋಟಿ ರೂ. ಪಾವತಿಸುವಂತೆ ಕೇಳಿದಾಗ ರನ್ಯಾ ಹಣದ ವ್ಯವಸ್ಥೆ ಮಾಡಿದ್ದಳು. ಹೀಗೆ ಒಟ್ಟಾರೆ 2 ಕೋಟಿ ರೂ.ಗಿಂತ ಹೆಚ್ಚು ವಂಚನೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ಕೀನ್ಯಾದಲ್ಲೂ ವಂಚನೆಗೆ ಒಳಗಾದ ಜೋಡಿ
ಉಗಾಂಡಾದಲ್ಲಿ ದೊಡ್ಡ ಮಟ್ಟದ ವಂಚನೆಗೆ ಒಳಗಾದ ರನ್ಯಾ ಮತ್ತು ತರುಣ್, ಬಳಿಕ ಕೀನ್ಯಾದಲ್ಲಿ ಕೂಡ ಅಂತಹದ್ದೇ ವ್ಯವಹಾರವನ್ನು ಕುದುರಿಸಲು ಪ್ರಯತ್ನಿಸಿ ವಿಫಲರಾದರು. ಅಲ್ಲಿನ ಅಧಿಕಾರಿಗಳ ಮೊರೆ ಹೋದರೂ ಅವರಿಗೆ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ಅಥವಾ ಪರಿಹಾರ ಸಿಗಲಿಲ್ಲ. ಈ ಸರಣಿ ಸೋಲುಗಳಿಂದ ಪಾಠ ಕಲಿತ ಅವರು ಆಫ್ರಿಕಾದಿಂದ ನೇರವಾಗಿ ಚಿನ್ನ ಖರೀದಿಸುವ ಸಾಹಸಕ್ಕೆ ಕೈಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಬದಲಾಗಿ, ಅವರು ದುಬೈನ ದೇರಾ ಗೋಲ್ಡ್ ಸೌಕ್‌ನಲ್ಲಿ ನೆಲೆಸಿದ್ದ ಆಫ್ರಿಕನ್ ಮೂಲದ ಚಿನ್ನದ ವ್ಯಾಪಾರಿಗಳ ಮೂಲಕ ಸ್ಥಳೀಯವಾಗಿ ಚಿನ್ನವನ್ನು ಖರೀದಿಸಲು ಶುರು ಮಾಡಿದರು. ಆದರೆ ಈ ವ್ಯಾಪಾರಿಗಳು ಬ್ಯಾಂಕ್ ವರ್ಗಾವಣೆಗಳ ಮೂಲಕ ಹಣ ಪಡೆಯಲು ನಿರಾಕರಿಸುತ್ತಿದ್ದರು ಮತ್ತು ಕೇವಲ ನಗದು ರೂಪದ ಪಾವತಿಯನ್ನು ಮಾತ್ರ ಕಟ್ಟುನಿಟ್ಟಾಗಿ ಒತ್ತಾಯಿಸುತ್ತಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಆಫ್ರಿಕಾದಲ್ಲಿ ಹಣ ಕಳೆದುಕೊಂಡ ಬಳಿಕವೇ ಇವರು ದುಬೈನ ಸ್ಥಳೀಯ ಮಾರುಕಟ್ಟೆಯಲ್ಲಿ ಆಫ್ರಿಕಾ ಮೂಲದ ಏಜೆಂಟ್‌ಗಳಿಂದ ಚಿನ್ನ ಖರೀದಿಸಿ, ಅದನ್ನು ಗುಪ್ತವಾಗಿ ಭಾರತಕ್ಕೆ ಸಾಗಿಸುವ ಕೆಲಸಕ್ಕೆ ಕೈಹಾಕಿದ್ದರು.
ಇ.ಡಿ. ಅಧಿಕಾರಿಗಳು ವಾಟ್ಸಾಪ್ ಸಂಭಾಷಣೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಹಣ ಪಾವತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಪತ್ತೆಹಚ್ಚಿದ್ದಾರೆ. ಆದರೆ, ಈ ಪ್ರಕರಣದಲ್ಲಿ ನಡೆದಿರುವ ವಂಚನೆಗೆ ಸಂಬಂಧಿಸಿದಂತೆ ಸಂಪೂರ್ಣವಾದ ಸಾಕ್ಷ್ಯಾಧಾರಗಳು ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹವಾಲಾ ಮೂಲಕ ವಿದೇಶಕ್ಕೆ ಹಣ ರವಾನೆ
2024ರ ಮಾರ್ಚ್‌ನಿಂದ 2025ರ ಮಾರ್ಚ್ ಅವಧಿಯಲ್ಲಿ ಈ ತಂಡ ಬರೋಬ್ಬರಿ 102 ಕೋಟಿ ರೂಪಾಯಿ ಮೌಲ್ಯದ 127 ಕೆಜಿ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಚಿನ್ನವನ್ನು ಸ್ಥಳೀಯ ಜ್ಯುವೆಲ್ಲರ್‌ಗಳಿಗೆ ಮಾರಿ ಹಣವನ್ನು ಹವಾಲಾ ಮೂಲಕ ವಿದೇಶಕ್ಕೆ ವರ್ಗಾಯಿಸಲಾಗುತ್ತಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಈಗಾಗಲೇ 34 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದು, ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಏನಿದು ಪ್ರಕರಣ?
ನಟಿ ರನ್ಯಾ ರಾವ್ 2025ರ ಮಾ.3ರಂದು 12.56 ಕೋಟಿ ರೂ. ಮೌಲ್ಯದ 14 ಕೆ.ಜಿ. ಚಿನ್ನವನ್ನು ವಿದೇಶದಿಂದ ಕಳ್ಳಸಾಗಾಟ ಮಾಡುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಬಳಿಕ ಆಕೆಯ ಮನೆಯ ಮೇಲೆ ದಾಳಿ ನಡೆಸಿ ಶೋಧಿಸಿದಾಗ ಪತ್ತೆಯಾದ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ. ನಗದನ್ನು ಜಪ್ತಿ ಮಾಡಲಾಗಿತ್ತು. ಈ ಸಂಬಂಧ ಡಿಆರ್‌ಐ ಮತ್ತು ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಇ.ಡಿ. ತನಿಖೆ ನಡೆಸುತ್ತಿದೆ. 2024ರ ಮಾರ್ಚ್‌ನಿಂದ 2025ರ ಮಾರ್ಚ್ ಅವಧಿಯಲ್ಲಿ 102.55 ಕೋಟಿ ರೂ. ಮೌಲ್ಯದ 127 ಕೆ.ಜಿ. 287 ಗ್ರಾಂ ಚಿನ್ನಾಭರಣವನ್ನು ಆರೋಪಿಗಳು ಸಾಗಾಟ ಮಾಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲಮಗಳಾಗಿರುವ ರನ್ಯಾ, ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ಪ್ರಕರಣದಲ್ಲಿ ರನ್ಯಾ ರಾವ್ ಮಾತ್ರವಲ್ಲದೆ ಆಕೆಯ ಸಹಚರರಾದ ತರುಣ್ ಕೊಂಡೂರು ಹಾಗೂ ಸಾಹಿಲ್ ಸಕಾರಿಯಾ ಜೈನ್ ಕೂಡ ಭಾಗಿಯಾಗಿದ್ದರು. ಆರೋಪಿ ತರುಣ್ ಕೊಂಡೂರು ಈ ಜಾಲದ ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದಾರೆ. ಮತ್ತೋರ್ವ ಆರೋಪಿ ಸಾಹಿಲ್ ಸಕಾರಿಯಾ ಜೈನ್ ಅಕ್ರಮ ಸಾಗಣೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಭಾಗಿಯಾದ ವ್ಯಕ್ತಿಯಾಗಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಯಾರು ಈ ರನ್ಯಾ ರಾವ್?
ರನ್ಯಾ ರಾವ್ ಚಿಕ್ಕಮಗಳೂರಿನಲ್ಲಿ ಜನಿಸಿ, ಕೊಡಗಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ವ್ಯಾಸಂಗಕ್ಕೆ ಸೇರಿದರು. ಆದರೆ ನಟನಾ ವೃತ್ತಿಯನ್ನು ಮುಂದುವರಿಸಲು ತಮ್ಮ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿದರು.
ನಂತರ ಅವರು ಮುಂಬೈನ ಕಿಶೋರ್ ನಮಿತ್ ಕಪೂರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದರು. ರನ್ಯಾ ರಾವ್ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ಮಲಮಗಳಾಗಿದ್ದಾರೆ. 'ಮಾಣಿಕ್ಯ' (2014) ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು ತಮಿಳು ಚಿತ್ರ 'ವಾಘಾ' (2016) ನಲ್ಲಿ ವಿಕ್ರಮ್ ಪ್ರಭು ಜೊತೆ ನಾಯಕಿಯಾಗಿ ನಟಿಸಿದರು ಮತ್ತು ಗಣೇಶ್ ಅವರೊಂದಿಗೆ ಕನ್ನಡ ಚಿತ್ರ 'ಪಟಾಕಿ' (2017) ನಲ್ಲಿ ನಟಿಸಿದರು.

