
ರಾಮನಗರ ಈಗ ಡ್ರಗ್ಸ್ ʼಡೆಡ್ ಡ್ರಾಪ್ʼ ಸ್ಪಾಟ್! ಮಾದಕ ವಸ್ತುಗಳಿಗೆ ಕೇರಳ- ಮೈಸೂರು ಎಕ್ಸ್‌ಪ್ರೆಸ್ ʼವೇʼ
ಆನ್‌ಲೈನ್ ಆರ್ಡರ್, UPI ಪಾವತಿ ಮತ್ತು 'ಡೆಡ್ ಡ್ರಾಪ್' ವಿಧಾನಗಳಿಂದಾಗಿ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ದಂಧೆ, ಗ್ರಾಮೀಣ ಭಾಗದ ಯುವಕರನ್ನೂ ಸೆಳೆಯುತ್ತಿರುವ ಆತಂಕ ಶುರುವಾಗಿದೆ.
ಬೆಟ್ಟಗುಡ್ಡಗಳ ಸಾಲು, ಹಚ್ಚ ಹಸಿರಿನ ಪ್ರಕೃತಿ ಮಡಿಲಿಂದಾಗಿ ಪ್ರವಾಸಿಗರ ಸ್ವರ್ಗವೆನಿಸಿರುವ ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ), ಈಗ ಡ್ರಗ್ಸ್ ಪೆಡ್ಲರ್‌ಗಳ ಹೊಸ 'ಹಾಟ್ ಸ್ಪಾಟ್' ಆಗಿ ಬದಲಾಗುತ್ತಿದೆ.
ಬೆಂಗಳೂರಿನ ನೆರಳಿನಂತಿರುವ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿರುವ ರಾಮನಗರದಲ್ಲಿ ಪೊಲೀಸರ ಕಾರ್ಯಾಚರಣೆ ವೇಳೆ ಅಂತರರಾಷ್ಟ್ರೀಯ ಡ್ರಗ್ಸ್ ದಂಧೆ ಬಯಲಾಗಿದೆ. ಆನ್‌ಲೈನ್ ಮೂಲಕವೇ ಡ್ರಗ್ಸ್‌ಗೆ ಬೇಡಿಕೆ ಇಡುವಂತಹ ವ್ಯವಸ್ಥಿತ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಇಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಜಾಲ ಇನ್ನಷ್ಟು ವಿಸ್ತರಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿದೇಶಿ ಪ್ರಜೆಯ ಮೂಲಕ ಡ್ರಗ್ಸ್ ಪೆಡ್ಲಿಂಗ್ ನಡೆದಿರುವುದು ಜಿಲ್ಲೆಯ ನೆಮ್ಮದಿಗೆ ಭಂಗ ತರುತ್ತಿದೆ.
ಮೈಸೂರು ಎಕ್ಸ್‌ಪ್ರೆಸ್ ವೇ- ಡ್ರಗ್ಸ್ ಜಾಲಕ್ಕೆ ರಹದಾರಿ?
ರಾಜಧಾನಿ ಬೆಂಗಳೂರಿಗೆ ಅತ್ಯಂತ ಹತ್ತಿರದಲ್ಲಿರುವುದರೊಂದಿಗೆ ಎಕ್ಸ್‌ಪ್ರೆಸ್‌ವೇ ಮೂಲಕ ಸುಲಭ ಸಂಪರ್ಕವಿರುವುದರಿಂದ ಪೆಡ್ಲರ್‌ಗಳಿಗೆ ಇಲ್ಲಿಗೆ ಬಂದು ಹೋಗುವುದು ಸುಲಭವಾಗಿದೆ. ಜತೆಗೆ ಜಿಲ್ಲೆಯಲ್ಲಿ ಹೆಚ್ಚಾಗಿರುವ ರೆಸಾರ್ಟ್ ಸಂಸ್ಕೃತಿಗಳಿಂದಾಗಿ ಈ ಡ್ರಗ್ಸ್ ದಂಧೆ ಇನ್ನಷ್ಟು ವಿಸ್ತರಿಸಿಕೊಳ್ಳುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರಿನ ಯುವ ಸಮೂಹ ವಾರಾಂತ್ಯದಲ್ಲಿ ರಾಮನಗರದ ನಿರ್ಜನ ಪ್ರದೇಶಗಳಲ್ಲಿರುವ ರೆಸಾರ್ಟ್‌ಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದ ಜಾಗಗಳಲ್ಲಿ ಡ್ರಗ್ಸ್ ಮತ್ತು ಮದ್ಯದ ಅಮಲಿನಲ್ಲಿ ತೇಲುವ ಈ ಸಂಸ್ಕೃತಿ ಈಗ ಸ್ಥಳೀಯವಾಗಿಯೂ ಹರಡುತ್ತಿದೆ. ಇತ್ತೀಚೆಗಷ್ಟೇ ಜಿಲ್ಲೆಯ ಗಡಿ ಭಾಗದ ರೆಸಾರ್ಟ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾಗ, ದೊಡ್ಡ ಮಟ್ಟದ ರೇವ್ ಪಾರ್ಟಿ ಬಯಲಾಗಿತ್ತು. ಅಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಹೈಟೆಕ್ ಪೆಡ್ಲರ್‌ಗಳ ಸಂಪರ್ಕ ಪತ್ತೆಯಾಗಿದ್ದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿತ್ತು. ಈಗ ಅದೇ ಮಾದರಿಯಲ್ಲಿ ವಿದೇಶಿ ಡ್ರಗ್ಸ್ ನೆಟ್‌ವರ್ಕ್ ದಂಧೆ ಬಯಲಾಗಿರುವುದು ಆತಂಕ ಸೃಷ್ಟಿಸಿದೆ.
ಆನ್‌ಲೈನ್ ಆರ್ಡರ್, UPI ಪಾವತಿ ಮತ್ತು ಅಜ್ಞಾತ ಸ್ಥಳಗಳಲ್ಲಿ ಡ್ರಗ್ಸ್ ಎಸೆಯುವ 'ಡೆಡ್ ಡ್ರಾಪ್' (ನಿರ್ಜನ ಪ್ರದೇಶದಲ್ಲಿ ಮಾದಕವಸ್ತುಗಳನ್ನು ಎಸೆಯುವುದು) ವಿಧಾನಗಳಿಂದಾಗಿ ಇಷ್ಟು ದಿನ ನಗರ ಪ್ರದೇಶ ಮತ್ತು ಕಾಲೇಜುಗಳಿಗೆ ಸೀಮಿತವಾಗಿದ್ದ ಈ ದಂಧೆ, ಈಗ ರೆಸಾರ್ಟ್‌ಗಳ ಮೂಲಕ ಗ್ರಾಮೀಣ ಭಾಗದ ಯುವಕರನ್ನೂ ಸೆಳೆಯುತ್ತಿದೆ. ಒಮ್ಮೆ ರೆಸಾರ್ಟ್ ಅಥವಾ ಪಾರ್ಟಿಗಳಲ್ಲಿ ಡ್ರಗ್ಸ್ ರುಚಿ ಹತ್ತಿದ ಯುವಕರು ನಂತರ ತಾವೇ ಗ್ರಾಮೀಣ ಪ್ರದೇಶಗಳಲ್ಲಿ ಪೆಡ್ಲರ್‌ಗಳಾಗಿ ಬದಲಾಗುವ ಅಪಾಯವಿದೆ.
ರಾಮನಗರ ಪೊಲೀಸರು ಪತ್ತೆ ಮಾಡಿದ ಮಾದಕ ಪದಾರ್ಥಗಳು
ಏನಿದು ಘಟನೆ?
ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು ವ್ಯವಸ್ಥಿತವಾಗಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಯಲ್ಲಿ ಇಬ್ಬರು ಆರೋಪಿಗಳು ಜೈಲು ಸೇರಿದ್ದಾರೆ. ಬೆಂಗಳೂರಿನ ಗೋರಿಪಾಳ್ಯದ ಸಜ್ಜಿಲ್ ಪಾಷ ಅಲಿಯಾಸ್ ಸಲ್ಮಾನ್ ಹಾಗೂ ಜಿಗಣಿಯಲ್ಲಿ ವಾಸವಿದ್ದ ಉಗಾಂಡ ಮೂಲದ ನಾನಾ ಜಾನ್ಸನ್ ಈ ದಂಧೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯವರೆಗೂ ವಿಸ್ತರಿಸಿದ್ದರು. ಪೊಲೀಸರ ತನಿಖೆ ವೇಳೆ 1.5 ಕೋಟಿ ರೂ., ಮೌಲ್ಯದ ಮಾದಕ ವಸ್ತುಗಳು ಪತ್ತೆಯಾಗಿವೆ. ಇದರಲ್ಲಿ 750 ಗ್ರಾಂ ಮೆಥಾಂಫೆಟಮೈನ್ (Methamphetamine), 450 MDMA ಮಾತ್ರೆಗಳು ಮತ್ತು 550 ಗ್ರಾಂ ಕ್ರಿಸ್ಟಲ್ ಡ್ರಗ್ಸ್ ಸೇರಿವೆ.
ಹೇಗೆ ನಡೆಯುತ್ತಿತ್ತು ದಂಧೆ?
ಆನ್‌ಲೈನ್ ಮೂಲಕ ಡ್ರಗ್ಸ್‌ಗೆ ಬೇಡಿಕೆ ಇಟ್ಟರೆ, ಈ ಆರೋಪಿಗಳು ರಾಮನಗರದವರೆಗೂ ಡ್ರಗ್ಸ್ ಪೂರೈಸುತ್ತಿದ್ದರು. ಬೆಂಗಳೂರಿನಿಂದ ಡ್ರಗ್ಸ್ ಪಡೆದು, ರಾಮನಗರದ ಅಜ್ಞಾತ ಸ್ಥಳದಲ್ಲಿ ಡ್ರಗ್ಸ್ ಬಿಸಾಡುತ್ತಿದ್ದರು. ಬಳಿಕ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಲೊಕೇಶನ್ ಕಳುಹಿಸುತ್ತಿದ್ದರು. ಆ ಲೊಕೇಶನ್‌ನಲ್ಲಿ ಹುಡುಕಾಡಿ, ಡ್ರಗ್ಸ್ ಪಡೆಯಬೇಕಿತ್ತು. ಯುಪಿಐ ಪೇಮೆಂಟ್ ಮೂಲಕ ಹಣ ಪಡೆಯುತ್ತಿದ್ದ ಆರೋಪಿ ಸಜ್ಜಿಲ್ ಪಾಷ, ನೇರವಾಗಿ ಕೇರಳದಲ್ಲಿ ತಲೆಮರೆಸಿಕೊಳ್ಳುತ್ತಿದ್ದ. ವಾರದ ಬಳಿಕ ಮತ್ತೊಂದು ಆರ್ಡರ್ ಪಡೆದು, ರಾಮನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದ.
ಆರೋಪಿಗಳಾದ ಸಜ್ಜಿಲ್ ಪಾಷ ಅಲಿಯಾಸ್ ಸಲ್ಮಾನ್ ಹಾಗೂ ಉಗಾಂಡ ಮೂಲದ ನಾನಾ ಜಾನ್ಸನ್
ಪ್ರಕರಣದ ಬಗ್ಗೆ ಸುಳಿವು ಪಡೆದ ಪೊಲೀಸರು, ಒಂದು ತಿಂಗಳ ಕಾಲ ಆರೋಪಿಗಳ ಪತ್ತೆಗಾಗಿ ಕಾದು ಕುಳಿತಿದ್ದರು. ಡ್ರಗ್ಸ್‌ಗೆ ಬೇಡಿಕೆ ಇಡುತ್ತಿದ್ದ ಗ್ರಾಹಕರನ್ನು ಬಳಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ. ಉಗಾಂಡ ಮೂಲದ ನಾನಾ ಜಾನ್ಸನ್‌ನನ್ನು ಬೆಂಗಳೂರಿನ ಜಿಗಣಿಯಲ್ಲಿ ವಶಕ್ಕೆ ಪಡೆದಿರುವ ಪೊಲೀಸರು, ಮತ್ತೊಬ್ಬ ಆರೋಪಿ ಸಜ್ಜಿಲ್ ಪಾಷನನ್ನು ಕೇರಳದಲ್ಲಿ ಬಂಧಿಸಿದ್ದಾರೆ.
ಈ ಇಬ್ಬರು ಆರೋಪಿಗಳ ಪೈಕಿ ನಾನಾ ಜಾನ್ಸನ್ ಮೇಲೆ ಬೆಂಗಳೂರಿನಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಇಬ್ಬರು ಆರೋಪಿಗಳು ಒಬ್ಬರನ್ನೊಬ್ಬರು ಮುಖ ನೋಡಿಲ್ಲ. ಎಲ್ಲವನ್ನೂ ಆನ್‌ಲೈನ್ ಮೂಲಕ ವಹಿವಾಟು ನಡೆಸುತ್ತಿದ್ದರು. ಈ ವ್ಯವಸ್ಥೆಯ ಹಿಂದೆ ಅಂತರರಾಷ್ಟ್ರೀಯ ಜಾಲವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬೆಂಗಳೂರಿನ ಜಿಗಣಿ ಮತ್ತು ಕೆ.ಆರ್. ಪುರಂ ಭಾಗದಲ್ಲಿ ನೆಲೆಸಿರುವ ಇತರೆ ವಿದೇಶಿ ಪ್ರಜೆಗಳ ಸಂಪರ್ಕದ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.
ಆರೋಪಿ ಸಜ್ಜಿಲ್ ಪಾಷಾ ಬಳಸುತ್ತಿದ್ದ UPI ಖಾತೆಗಳು ಮತ್ತು ಮೊಬೈಲ್ ಕರೆಗಳ ವಿವರವನ್ನು (CDR) ಪೊಲೀಸರು ಪರಿಶೀಲಿಸುತ್ತಿದ್ದಾರೆ. ರಾಮನಗರದ ಯಾವ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಈತನಿಂದ ನಿಯಮಿತವಾಗಿ ಡ್ರಗ್ಸ್ ಖರೀದಿಸುತ್ತಿದ್ದರು ಎಂಬ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇದರೊಂದಿಗೆ ಸಜ್ಜಿಲ್‌ಗೆ ಕೇರಳದಲ್ಲಿ ಆಶ್ರಯ ನೀಡುತ್ತಿದ್ದವರು ಯಾರು? ಅಲ್ಲಿಯೂ ಈತ ತನ್ನ ಜಾಲವನ್ನು ವಿಸ್ತರಿಸಿದ್ದನೇ? ಎಂಬ ಬಗ್ಗೆ ರಾಮನಗರದ ಐಜೂರು ಪೊಲೀಸರು ಕೇರಳ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.
ಈ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ರಾಮನಗರ ಪೊಲೀಸರು, ಜಿಲ್ಲೆಯ ಪ್ರಮುಖ ಎಂಜಿನಿಯರಿಂಗ್ ಮತ್ತು ಪದವಿ ಕಾಲೇಜುಗಳ ಸುತ್ತಮುತ್ತ ಹದ್ದಿನ ಕಣ್ಣಿಟ್ಟಿದ್ದಾರೆ. ಕಾಲೇಜು ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸಿ, ಶಂಕಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

