
ಪುಲಿಕೇಶಿನಗರ ಸ್ಫೋಟ ಪ್ರಕರಣ: ತನಿಖೆ ಚುರುಕು, ಎನ್ಐಎ ಎಂಟ್ರಿ ಬಹುತೇಕ ಖಚಿತ- ಸ್ಫೋಟಕ ಮಾಹಿತಿ ಬಯಲು
ಬೆಂಗಳೂರು ಪುಲಿಕೇಶಿನಗರದ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಐಇಡಿ ಬಳಕೆ ಶಂಕೆ, ಅನಾಮಧೇಯ ಕರೆ, ಇಬ್ಬರು ಕಾರ್ಮಿಕರಿಗೆ ಗಾಯ ಹಾಗೂ ಎನ್ಐಎ ತನಿಖೆಯ ಸಾಧ್ಯತೆ ಕುರಿತು ಸಂಪೂರ್ಣ ಮಾಹಿತಿ.
ಬೆಂಗಳೂರಿನ ಪುಲಿಕೇಶಿನಗರದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 61, 3(5) ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಮತ್ತು 5ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸ್ಫೋಟಕ್ಕೆ ಕಾರಣವಾದ ವಸ್ತುವಿನ ಸ್ವರೂಪದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೂಡ ಪ್ರಕರಣದ ಕುರಿತು ಮಾಹಿತಿ ಕೇಳಿದೆ ಎನ್ನಲಾಗಿದೆ.
ಅಕ್ಟೋಬರ್ 20ರಂದು ಸಂಭವಿಸಿದ್ದ ಸ್ಫೋಟ
ಅಕ್ಟೋಬರ್ 20ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಪುಲಿಕೇಶಿನಗರದ ಐದು ಅಂತಸ್ತಿನ ಕಟ್ಟಡವೊಂದರಲ್ಲಿ ಸ್ಫೋಟ ಸಂಭವಿಸಿತ್ತು. ಬ್ಯಾಟರಿಯನ್ನು ಚಾಲನೆಗೊಳಿಸುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಅಲ್ಲಾವುದ್ದೀನ್ ಮತ್ತು ನರೇಶ್ ಎಂಬ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದರು.
ಐಇಡಿ ಬಳಕೆ ಶಂಕೆ
ಪ್ರಕರಣದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಕೆಯಾಗಿರುವ ಸಾಧ್ಯತೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಮೂರು ಬ್ಯಾಟರಿಗಳನ್ನು ಬಳಸಿ ಸ್ಫೋಟಕ ಸಾಧನವನ್ನು ಸ್ಫೋಟಿಸಿರಬಹುದು ಎಂಬ ಶಂಕೆ ತನಿಖಾ ತಂಡಗಳಲ್ಲಿದೆ. ಆದರೆ, ಸ್ಫೋಟಕ್ಕೆ ನಿಖರವಾದ ಕಾರಣವೇನು ಮತ್ತು ಯಾವ ರೀತಿಯ ವಸ್ತುವನ್ನು ಬಳಸಲಾಗಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಹಾಗೂ ಭಯೋತ್ಪಾದನೆ ನಿಗ್ರಹ ಘಟಕ (ಎಟಿಸಿ) ತನಿಖೆ ನಡೆಸುತ್ತಿವೆ. ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಯೂ ಪ್ರಕರಣದ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಅನಾಮಧೇಯ ಕರೆ ಬಗ್ಗೆ ಸೆಕ್ಯುರಿಟಿ ಗಾರ್ಡ್ ಹೇಳಿಕೆ
ಸ್ಫೋಟಕ್ಕೂ ಮುನ್ನ ಕಟ್ಟಡದೊಳಗೆ ಪಾರ್ಸಲ್ವೊಂದನ್ನು ತೆಗೆದುಕೊಂಡು ಹೋಗಲು ಭದ್ರತಾ ಸಿಬ್ಬಂದಿಗೆ ಅನಾಮಧೇಯ ಕರೆ ಬಂದಿತ್ತು ಎನ್ನಲಾಗಿದೆ. ಕರೆ ಮಾಡಿದ ವ್ಯಕ್ತಿಯ ಸೂಚನೆಯ ಮೇರೆಗೆ ಪಾರ್ಸಲ್ ತಂದಿದ್ದಾಗಿ ಭದ್ರತಾ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನಂತರ ಭದ್ರತಾ ಸಿಬ್ಬಂದಿ ಮತ್ತು ಪೇಂಟರ್ ಪಾರ್ಸಲ್ ತೆರೆಯುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅನಾಮಧೇಯ ಕರೆ, ಪಾರ್ಸಲ್ನ ಮೂಲ, ಅದನ್ನು ಕಳುಹಿಸಿದವರು ಯಾರು ಮತ್ತು ಸ್ಫೋಟಕ್ಕೆ ಬಳಸಲಾದ ವಸ್ತುವಿನ ಸ್ವರೂಪದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಎನ್ಐಎಯಿಂದ ವರದಿ ಕೇಳಿರುವ ಮಾಹಿತಿ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎನ್ಐಎ ತನಿಖಾ ವರದಿಯನ್ನು ಕೇಳಿದೆ ಎನ್ನಲಾಗಿದೆ. ಎಫ್ಎಸ್ಎಲ್ ವರದಿಯನ್ನೂ ಪರಿಶೀಲನೆಗೆ ಕೇಳಲಾಗಿದ್ದು, ತನಿಖಾ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆಯಿದೆ. ಸ್ಫೋಟದಲ್ಲಿ ಐಇಡಿ ಬಳಕೆಯಾಗಿರುವುದು ದೃಢಪಟ್ಟರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳುವ ಕುರಿತು ಎನ್ಐಎ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ಈವರೆಗೆ ಎನ್ಐಎ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ದೃಢೀಕರಣ ಲಭ್ಯವಾಗಿಲ್ಲ.
ಸದ್ಯ ಪೊಲೀಸರು ಭದ್ರತಾ ಸಿಬ್ಬಂದಿ ಮತ್ತು ಪೇಂಟರ್ನ ಹೇಳಿಕೆಗಳು, ಅನಾಮಧೇಯ ಕರೆಯ ವಿವರಗಳು ಹಾಗೂ ವಿಧಿವಿಜ್ಞಾನ ಪರಿಶೀಲನೆಯ ವರದಿಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ಸ್ಫೋಟದ ಹಿಂದಿನ ಉದ್ದೇಶ ಮತ್ತು ಘಟನೆಯ ಹಿಂದೆ ಯಾರಾದರೂ ಇದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
