
ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ
ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಸ್ವಾಮೀಜಿಯಿಂದ ಪ್ರತಿ ದೂರು
ಸ್ವಾಮೀಜಿಯ ಹೋರಾಟಗಳಿಗೆ ಬೆಂಬಲ ನೀಡುತ್ತಿದ್ದ ಭಕ್ತೆಯಾಗಿದ್ದ ನನ್ನನ್ನು, ಮಠಕ್ಕೆ ಕರೆಸಿಕೊಂಡು 'ಪ್ರಸಾದ ನೀಡುತ್ತೇನೆ' ಎಂದು ಹೇಳಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.
ರಾಜ್ಯದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಮೂಲಕ ಮನೆಮಾತಾಗಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರು ಈಗ ಗಂಭೀರ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ಮೂಲದ ಮಹಿಳೆಯೊಬ್ಬರು ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬ್ಲಾಕ್‌ಮೇಲ್ ಆರೋಪ ಹೊರಿಸಿದ್ದು, ಪ್ರಕರಣವು ಈಗ ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿದೆ.
ಬೆಂಗಳೂರು ನಿವಾಸಿಯಾಗಿರುವ ಸಂತ್ರಸ್ತೆ ನೀಡಿರುವ ದೂರು ಇಡೀ ಧಾರ್ಮಿಕ ವಲಯದಲ್ಲಿ ಸಂಚಲನ ಮೂಡಿಸಿದೆ. "ಸ್ವಾಮೀಜಿಯ ಹೋರಾಟಗಳಿಗೆ ಬೆಂಬಲ ನೀಡುತ್ತಿದ್ದ ಭಕ್ತೆಯಾಗಿದ್ದ ನನ್ನನ್ನು, ಮಠಕ್ಕೆ ಕರೆಸಿಕೊಂಡು 'ಪ್ರಸಾದ ನೀಡುತ್ತೇನೆ' ಎಂದು ಹೇಳಿ ಅಸಭ್ಯವಾಗಿ ವರ್ತಿಸಿದ್ದಾರೆ. ನನ್ನ ಗಮನಕ್ಕೆ ಬಾರದಂತೆ ನನ್ನ ಮೇಲಿನ ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇಟ್ಟುಕೊಂಡು ಬೆದರಿಸುತ್ತಿರುವ ಸ್ವಾಮೀಜಿ, ಪ್ರತಿ ರಾತ್ರಿ ಫೋನ್ ಮಾಡಿ 'ಬೆತ್ತಲೆ ವಿಡಿಯೋ ಕಾಲ್' ಮಾಡುವಂತೆ ಒತ್ತಾಯಿಸುತ್ತಿದ್ದರು. ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ," ಎಂದು ದೂರಿದ್ದಾರೆ.
ಸ್ವಾಮೀಜಿ ಪ್ರತಿದೂರು
ಸಂತ್ರಸ್ತ ಮಹಿಳೆಯ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಜಯಮೃತ್ಯುಂಜಯ ಸ್ವಾಮೀಜಿ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧವೇ ಎಫ್‌ಐಆರ್ ದಾಖಲಿಸಿದ್ದಾರೆ. "ಮಹಿಳೆಯು ಅನಾಥಾಶ್ರಮ ನಡೆಸುತ್ತಿರುವುದಾಗಿ ಸುಳ್ಳು ಹೇಳಿ ಪರಿಚಯ ಮಾಡಿಕೊಂಡಿದ್ದಳು. ನನ್ನ ತೇಜೋವಧೆ ಮಾಡುವುದಾಗಿ ಬೆದರಿಸಿ 3 ಕೋಟಿ ರೂಪಾಯಿ ನೀಡುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ," ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ.
ಸ್ವಾಮೀಜಿಯದ್ದು ಎನ್ನಲಾದ ಕೆಲವು ಖಾಸಗಿ ವಿಡಿಯೋ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಒಂದು ಕಡೆ ಮಹಿಳೆಯು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರೆ, ಮತ್ತೊಂದೆಡೆ ಸ್ವಾಮೀಜಿ "ಇದು ವ್ಯವಸ್ಥಿತ ಪಿತೂರಿ ಮತ್ತು ಹನಿಟ್ರ್ಯಾಪ್ ಮಾದರಿಯ ಬ್ಲಾಕ್‌ಮೇಲ್,"ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

