
Zombie Drug| ಬೆಂಗಳೂರಿಗೆ 'ಜೋಂಬಿ ಡ್ರಗ್' ಲಗ್ಗೆ ಇಟ್ಟಿರೋದು ನಿಜನಾ? ಈ ಮಾದಕ ವಸ್ತು ಎಷ್ಟು ಅಪಾಯಕಾರಿ?
ಪ್ರಾಣಿಗಳಿಗೆ ನೀಡುವ ಕ್ಸೈಲಾಜಿನ್ ಔಷಧ ಈಗ ಮನುಷ್ಯರ ಪಾಲಿಗೆ 'ಜೋಂಬಿ ಡ್ರಗ್' ಆಗಿ ಪರಿಣಮಿಸಿದೆ.
ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋವೊಂದು ಸಿಲಿಕಾನ್ ಸಿಟಿ ಜನರಲ್ಲಿ ಭೀತಿ ಮೂಡಿಸಿತ್ತು. ರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬ ವಿಚಿತ್ರವಾಗಿ ವರ್ತಿಸುತ್ತಾ, ಸಮತೋಲನ ಕಳೆದುಕೊಂಡು ನಿಂತಿದ್ದ ದೃಶ್ಯವನ್ನು ಕಂಡು 'ಜೋಂಬಿ ಡ್ರಗ್' (Xylazine) ಬೆಂಗಳೂರಿಗೆ ಲಗ್ಗೆ ಇಟ್ಟಿದೆ ಎಂಬ ವದಂತಿ ಹಬ್ಬಿತ್ತು.
ಏನಿದು ಘಟನೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಾದಕ ವಸ್ತುವಿನ ಅಮಲಿನಲ್ಲಿರುವ 'ಜೋಂಬಿʼಯಂತೆ ವಿಚಿತ್ರವಾಗಿ ನಿಂತಿದ್ದ. ಇದನ್ನು ನೋಡಿದ ನೆಟ್ಟಿಗರು, ಪ್ರಾಣಿಗಳಿಗೆ ನೀಡುವ ಟ್ರ್ಯಾಂಕ್ವಿಲೈಜರ್ 'ಕ್ಸೈಲಾಜಿನ್' (Xylazine) ಅನ್ನು ಇತರ ಡ್ರಗ್ಸ್ ಜೊತೆ ಬೆರೆಸಿ ಸೇವಿಸಿರುವ ಪರಿಣಾಮ ಇದು ಎಂದು ಚರ್ಚಿಸಲು ಆರಂಭಿಸಿದ್ದರು. ಇದರಿಂದಾಗಿ ಈ ' ಜೋಂಬಿ ಡ್ರಗ್' ಬೆಂಗಳೂರಿನಲ್ಲಿ ಹರಡುತ್ತಿದೆ ಎಂಬ ಆತಂಕ ಸೃಷ್ಟಿಯಾಗಿತ್ತು.
ಏನಿದು ಜೋಂಬಿ ಡ್ರಗ್ಸ್?
'ಜಾಂಬಿ ಡ್ರಗ್' ಎನ್ನುವುದು ಮಾದಕ ವ್ಯಸನಿಗಳ ಲೋಕದಲ್ಲಿ ಕ್ಸೈಲಾಜಿನ್ ಎಂಬ ಅಪಾಯಕಾರಿ ರಾಸಾಯನಿಕಕ್ಕೆ ಕರೆಯುವ ಹೆಸರಾಗಿದೆ. ಮೂಲತಃ ಇದು ಮನುಷ್ಯರಿಗಾಗಿ ತಯಾರಿಸಿದ ಔಷಧವಲ್ಲ, ಬದಲಾಗಿ ಕುದುರೆ ಮತ್ತು ಹಸುಗಳಂತಹ ದೊಡ್ಡ ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೋವು ನಿವಾರಿಸಲು ಬಳಸುವ ಒಂದು ಪ್ರಾಣಿ ಶಾಮಕ ಔಷಧಿಯಾಗಿದೆ.
ಈ ಮಾದಕ ವಸ್ತುವನ್ನು ಸೇವಿಸಿದ ಮನುಷ್ಯರು ತಮ್ಮ ದೇಹದ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಅವರು ಪ್ರಜ್ಞೆ ಇದ್ದೂ ಇಲ್ಲದವರಂತೆ ವಿಚಿತ್ರವಾಗಿ ವರ್ತಿಸುತ್ತಾ, ರಸ್ತೆಗಳಲ್ಲಿ ನಿಂತಲ್ಲೇ ಬಾಗಿದ ಸ್ಥಿತಿಯಲ್ಲಿ ಗಂಟೆಗಟ್ಟಲೆ ಇರುತ್ತಾರೆ. ನೋಡಲು ಸಿನಿಮಾಗಳಲ್ಲಿ ಬರುವ ಜಾಂಬಿಗಳಂತೆ ಕಾಣುವುದರಿಂದಲೇ ಇದಕ್ಕೆ 'ಜಾಂಬಿ ಡ್ರಗ್' ಎಂಬ ಹೆಸರು ಬಂದಿದೆ.
ದೇಹವನ್ನು ಕೊಳೆಯುವಂತೆ ಮಾಡುವ ಶಕ್ತಿ ಈ ಡ್ರಗ್‌ಗಿದೆ!
ಇದರ ಅತ್ಯಂತ ಭೀಕರ ಪರಿಣಾಮವೆಂದರೆ ಇದು ಮನುಷ್ಯನ ಚರ್ಮ ಮತ್ತು ಮಾಂಸವನ್ನು ಜೀವಂತವಾಗಿ ಕೊಳೆಸುತ್ತದೆ. ಈ ಔಷಧವನ್ನು ಚುಚ್ಚುಮದ್ದಿನ ಮೂಲಕ ಪಡೆದಾಗ ದೇಹದ ಭಾಗಗಳಲ್ಲಿ ದೊಡ್ಡ ಗಾಯಗಳಾಗಿ ಮಾಂಸ ಕೊಳೆಯಲಾರಂಭಿಸುತ್ತದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ 'ನೆಕ್ರೋಸಿಸ್' ಎಂದು ಕರೆಯಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಈ ಗಾಯಗಳು ಗುಣವಾಗದ ಮಟ್ಟಕ್ಕೆ ಹದಗೆಟ್ಟು, ವ್ಯಕ್ತಿಯ ಕೈ ಅಥವಾ ಕಾಲುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಿ ತೆಗೆಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ.
ಸಾಮಾನ್ಯವಾಗಿ ಮಾದಕ ವ್ಯಸನಿಗಳು ಈ ಕ್ಸೈಲಾಜಿನ್ ಅನ್ನು ಫೆಂಟಾನಿಲ್ ಎಂಬ ಮತ್ತೊಂದು ಪ್ರಬಲ ಡ್ರಗ್ ಜೊತೆ ಬೆರೆಸಿ ಬಳಸುತ್ತಾರೆ. ಈ ಮಿಶ್ರಣವು ಹೃದಯದ ಬಡಿತ ಮತ್ತು ಉಸಿರಾಟವನ್ನು ಅತ್ಯಂತ ಅಪಾಯಕಾರಿ ಮಟ್ಟಕ್ಕೆ ಇಳಿಸುತ್ತದೆ. ಡ್ರಗ್ಸ್ ಓವರ್‌ಡೋಸ್ ಆದಾಗ ಜೀವ ಉಳಿಸಲು ಬಳಸುವ ಸಾಮಾನ್ಯ ಮದ್ದುಗಳು ಕೂಡ ಈ ಕ್ಸೈಲಾಜಿನ್ ವಿರುದ್ಧ ಪರಿಣಾಮ ಬೀರುವುದಿಲ್ಲ, ಹೀಗಾಗಿ ಇದು ಅತಿ ವೇಗವಾಗಿ ಸಾವಿಗೆ ದಾರಿ ಮಾಡಿಕೊಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಂತಹ ದೇಶಗಳಲ್ಲಿ ಈ ಡ್ರಗ್ ಭಾರಿ ದೊಡ್ಡ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ.
ತನಿಖೆ ನಡೆಸಿದ ಈಶಾನ್ಯ ವಿಭಾಗದ ಪೊಲೀಸರು
ಇನ್ನು ಬೆಂಗಳೂರಿನಲ್ಲಿ ಹರಿದಾಡುತ್ತಿರುವ ಈ ವಿಡಿಯೋದ ಗಂಭೀರತೆ ಅರಿತ ಈಶಾನ್ಯ ವಿಭಾಗದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಪೊಲೀಸ್ ಆಯುಕ್ತರ ಸ್ಪಷ್ಟನೆ:
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಈ ಕುರಿತು ಅಧಿಕೃತ ಮಾಹಿತಿ ನೀಡಿ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ಪತ್ತೆಯಾದ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇ ರೀತಿಯ ಮಾದಕ ದ್ರವ್ಯ ಅಥವಾ ಅಕ್ರಮ ಅಮಲು ಪದಾರ್ಥಗಳ ಅಂಶ ಪತ್ತೆಯಾಗಿಲ್ಲ ಎಂದಿದ್ದಾರೆ.
"ಈ ವ್ಯಕ್ತಿ ಬೆಂಗಳೂರಿನವರಲ್ಲ, ಹೊರಗಿನಿಂದ ಬಂದವರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅದಕ್ಕಾಗಿ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆ ಔಷಧಗಳ ಜೊತೆಗೆ ಸ್ವಲ್ಪ ಪ್ರಮಾಣದ ಮದ್ಯವನ್ನೂ ಸೇವಿಸಿದ್ದರು. ಮದ್ಯ ಮತ್ತು ಔಷಧಿಯ ಅಡ್ಡಪರಿಣಾಮದಿಂದಾಗಿ (Side Effects) ದೇಹದ ಸಮತೋಲನ ತಪ್ಪಿ ಅವರು ವಿಚಿತ್ರವಾಗಿ ವರ್ತಿಸಿದ್ದಾರೆ ಅಷ್ಟೆ. ಇದಕ್ಕೂ ಡ್ರಗ್ಸ್‌ಗೂ ಯಾವುದೇ ಸಂಬಂಧವಿಲ್ಲ," ಎಂದು ಆಯುಕ್ತರು ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಎಚ್ಚರಿಕೆ
ಇದೇ ವೇಳೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಆಯುಕ್ತರು ಕೆಂಗಣ್ಣು ಬೀರಿದ್ದಾರೆ. "ಯಾವುದೇ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಯಾವುದೇ ಆಧಾರವಿಲ್ಲದೆ ಡ್ರಗ್ಸ್‌ಗೆ ಲಿಂಕ್ ಮಾಡುವುದು ಸರಿಯಲ್ಲ," ಎಂದಿದ್ದಾರೆ. ಅಲ್ಲದೇ ವಿಡಿಯೋ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದವರನ್ನು ಮಾತ್ರವಲ್ಲದೆ, ಅದನ್ನು ಶೇರ್ ಮಾಡಿದವರಿಗೂ ಪೊಲೀಸರು ನೋಟಿಸ್ ನೀಡಲಿದ್ದಾರೆ ಮತ್ತು ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಗೃಹ ಸಚಿವರಿಂದ ಸ್ಪಷ್ಟನೆ
ಬೆಂಗಳೂರಿನಲ್ಲಿ 'ಜೋಂಬಿ ಡ್ರಗ್ಸ್' ಹರಡುತ್ತಿದೆ ಎಂಬ ವದಂತಿಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದು, “ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ವಿಷಯ ಎಂದು ತಿಳಿಸಿದ್ದಾರೆ. ವೈರಲ್ ವಿಡಿಯೋದಲ್ಲಿದ್ದ ವ್ಯಕ್ತಿ ಹರಿಯಾಣ ಅಥವಾ ಪಂಜಾಬ್ ಮೂಲದ ಲಾರಿ ಚಾಲಕನಾಗಿದ್ದು, ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದ ಆತ ಮದ್ಯವ್ಯಸನಿಯಾಗಿದ್ದ ಮತ್ತು ಹಿಂದೆ ಪಂಜಾಬ್‌ನಲ್ಲಿ ಮಾದಕ ವ್ಯಸನಿಯಾಗಿದ್ದ ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ತನಗಿದ್ದ ಯಾವುದೋ ಕಾಯಿಲೆಗಾಗಿ ಔಷಧಿ ತೆಗೆದುಕೊಳ್ಳುತ್ತಿದ್ದ ಆತ, ಅದರ ಜೊತೆಗೆ ಮದ್ಯವನ್ನೂ ಸೇವಿಸಿದ್ದರಿಂದ ಉಂಟಾದ ಅಡ್ಡಪರಿಣಾಮದಿಂದಾಗಿ ವಿಚಿತ್ರವಾಗಿ ವರ್ತಿಸಿದ್ದಾನೆಯೇ ಹೊರತು ಇದು ಜಾಂಬಿ ಡ್ರಗ್ಸ್ ಪ್ರಕರಣವಲ್ಲ ಎಂದು ಪೊಲೀಸ್ ಆಯುಕ್ತರು ವರದಿ ನೀಡಿದ್ದಾರೆ. ಈ ಸುಳ್ಳು ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹರಡಿದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

