
ಟಿಎಂಸಿ ಮಾಜಿ ಶಾಸಕ ಸೌಕತ್ ಮೊಲ್ಲಾ
ಭಾಂಗರ್ ಬಾಂಬ್ ಸ್ಫೋಟ ಪ್ರಕರಣ: ಟಿಎಂಸಿ ಮಾಜಿ ಶಾಸಕ ಸೌಕತ್ ಮೊಲ್ಲಾ ನಿವಾಸದ ಮೇಲೆ ಎನ್ಐಎ ದಾಳಿ!
ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಪ್ರದೇಶದ ಮೌಖಾಲಿಯಲ್ಲಿರುವ ಸೌಕತ್ ಮೊಲ್ಲಾ ಅವರ ನಿವಾಸಕ್ಕೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿಯೊಂದಿಗೆ ಎನ್ಐಎ ಅಧಿಕಾರಿಗಳ ತಂಡ, ಇಡೀ ಮನೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ನಾಯಕರಿಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ದೊಡ್ಡ ಆಘಾತ ನೀಡಿವೆ. ಇತ್ತೀಚೆಗಷ್ಟೇ ಮುಕ್ತಾಯವಾದ ವಿಧಾನಸಭಾ ಚುನಾವಣೆಗೆ ಮುನ್ನ ಭಾಂಗರ್ನಲ್ಲಿ ನಡೆದಿದ್ದ ಭೀಕರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಗುರುವಾರ ಬೆಳಿಗ್ಗೆ ಟಿಎಂಸಿ ಮಾಜಿ ಶಾಸಕ ಸೌಕತ್ ಮೊಲ್ಲಾ ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದೆ.
ಮುಂಜಾನೆ ಸುತ್ತುವರೆದ ಸಿಎಪಿಎಫ್ ಪಡೆಗಳು!
ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಪ್ರದೇಶದ ಮೌಖಾಲಿಯಲ್ಲಿರುವ ಸೌಕತ್ ಮೊಲ್ಲಾ ನಿವಾಸಕ್ಕೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿಯೊಂದಿಗೆ ಎನ್ಐಎ ಅಧಿಕಾರಿಗಳ ತಂಡ, ಇಡೀ ಮನೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಕೇವಲ ಮೊಲ್ಲಾ ಅವರ ನಿವಾಸ ಮಾತ್ರವಲ್ಲದೆ, ಕಚೇರಿ, ಪತ್ನಿ ಮತ್ತು ಮಗಳ ನಿವಾಸಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ. ತನಿಖೆಯ ಭಾಗವಾಗಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಏನಿದು ಭಾಂಗರ್ ಬಾಂಬ್ ಸ್ಫೋಟ ಪ್ರಕರಣ?
ಚುನಾವಣಾ ಕಣ ರಂಗೇರಿದ್ದ ಸಂದರ್ಭದಲ್ಲಿ ಅಂದರೆ ಮಾರ್ಚ್ 19 ರಂದು ದಕ್ಷಿಣ 24 ಪರಗಣ ಜಿಲ್ಲೆಯ ಬಾಮುನಿಯಾ ಗ್ರಾಮದಲ್ಲಿ ಭೀಕರ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿತ್ತು. ಚುನಾವಣೆ ವೇಳೆ ಹಿಂಸಾಚಾರ ನಡೆಸಲು ರಹಸ್ಯವಾಗಿ ಕಚ್ಚಾ ಬಾಂಬ್ ತಯಾರಿಸುತ್ತಿದ್ದಾಗ ಈ ದುರಂತ ಸಂಭವಿಸಿತ್ತು ಎನ್ನಲಾಗಿದೆ. ಈ ಸ್ಫೋಟದ ತೀವ್ರತೆಗೆ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಎನ್ಐಎ ತನಿಖೆ
ಪಶ್ಚಿಮ ಬಂಗಾಳದ ಆಂತರಿಕ ಭದ್ರತೆಗೆ ಸವಾಲಾಗಿದ್ದ ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಇದರ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಗುರುವಾರ ಎನ್ಐಎ ಅಧಿಕಾರಿಗಳ ಮತ್ತೊಂದು ತಂಡ ಸ್ಫೋಟ ನಡೆದಿದ್ದ ಬಾಮುನಿಯಾ ಗ್ರಾಮಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ.
ಹಲವರ ಬಂಧನ: ಮೊಲ್ಲಾಗೆ ಹೆಚ್ಚಿದ ಸಂಕಷ್ಟ!
ಈ ಬಾಂಬ್ ಸ್ಫೋಟದ ಹಿಂದೆ ರಾಜಕೀಯ ಪಿತೂರಿ ಇರುವ ಶಂಕೆ ವ್ಯಕ್ತವಾಗಿದ್ದು, ಎನ್ಐಎ ಈಗಾಗಲೇ ಟಿಎಂಸಿ ಪ್ರಭಾವಿ ನಾಯಕ ವಹಿದುಲ್ ಇಸ್ಲಾಂ ಸೇರಿದಂತೆ ಹಲವು ಶಂಕಿತರನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ. ಬಂಧಿತರು ನೀಡಿದ ಮಹತ್ವದ ಸುಳಿವುಗಳ ಆಧಾರದ ಮೇಲೆಯೇ ಸೌಕತ್ ಮೊಲ್ಲಾ ಅವರ ನಿವಾಸದ ಮೇಲೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೊಲ್ಲಾ ಅವರ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಭದ್ರತೆ ಹಿಂಪಡೆದಿದ್ದ ಸರ್ಕಾರ!
ಕ್ಯಾನಿಂಗ್ ಪೂರ್ವ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ 2016 ಮತ್ತು 2021ರ ಚುನಾವಣೆಗಳಲ್ಲಿ ಸೌಕತ್ ಮೊಲ್ಲಾ ಭರ್ಜರಿ ಜಯಗಳಿಸಿದ್ದರು. ಆದರೆ, ಇತ್ತೀಚಿನ ರಾಜಕೀಯ ಬದಲಾವಣೆಗಳು ಹಾಗೂ ಚುನಾವಣಾ ಸೋಲಿನ ಬೆನ್ನಲ್ಲೇ ಪಶ್ಚಿಮ ಬಂಗಾಳ ಸರ್ಕಾರ ಅವರಿಗೆ ನೀಡಿದ್ದ ಅಧಿಕೃತ ಸರ್ಕಾರಿ ಭದ್ರತೆಯನ್ನು ಇತ್ತೀಚೆಗಷ್ಟೇ ಹಿಂತೆಗೆದುಕೊಂಡಿತ್ತು. ಭದ್ರತೆ ಕೈತಪ್ಪಿದ ಬೆನ್ನಲ್ಲೇ ಎನ್ಐಎ ದಾಳಿ ನಡೆಸಿರುವುದು ಮೊಲ್ಲಾ ಹಾಗೂ ಟಿಎಂಸಿ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

