
ʼಸಾಂಸ್ಕೃತಿಕ ನಗರಿʼಯಲ್ಲಿ ಮಾದಕ ಜಾಲ; ಹುಣಸೂರಿನಲ್ಲಿ 12 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ದಾಸನಪುರ ಗ್ರಾಮದ ಆಸ್ಪತ್ರೆ ಕಾವಲ್ ಬಳಿಯ ನಿರ್ಜನ ಪ್ರದೇಶದಲ್ಲಿರುವ ಒಂಟಿ ಮನೆಯಲ್ಲೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ಮೇಲ್ನೋಟಕ್ಕೆ ಕೃಷಿ ಚಟುವಟಿಕೆಯಂತೆ ಕಂಡರೂ ಒಳಗೆ ಅಪಾಯಕಾರಿ ಕೆಮಿಕಲ್‌ಗಳನ್ನು ಬಳಸಿ ಸಿಂಥೆಟಿಕ್ ಡ್ರಗ್ಸ್ ತಯಾರಿಸಲಾಗುತ್ತಿತ್ತು
ಸಾಂಸ್ಕೃತಿಕ ನಗರಿ ಹಾಗೂ ಸಿಎಂ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿಗೆ ಇದೀಗ ಮಾದಕ ಜಾಲದ ಕರಿನೆರಳು ಜೋರಾಗಿ ಆವರಿಸಿದೆ. ಕಳೆದ ಕೆಲ ತಿಂಗಳುಗಳಿಂದ ನಗರದಲ್ಲಿ ಸತತವಾಗಿ ಪತ್ತೆಯಾಗುತ್ತಿರುವ ಡ್ರಗ್ಸ್ ಜಾಲಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ.
ಜಿಲ್ಲೆಯ ಹುಣಸೂರು ತಾಲೂಕಿನ ದಾಸನಪುರ ಗ್ರಾಮದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಸುಮಾರು 12 ಕೋಟಿ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ತಯಾರಿಕಾ ಘಟಕ ಪತ್ತೆಹಚ್ಚಿ, ಇಬ್ಬರು ಆರೋಪಿಗಳಾದ ಮೈಸೂರಿನ ಸಿದ್ಧಿಕಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ ಮತ್ತು ಹುಣಸೂರಿನ ನಿವಾಸಿ ಮೊಹಮ್ಮದ್ ಇರ್ಫಾನ್ ಎಂಬುವರನ್ನು ಬಂಧಿಸಿದ್ದಾರೆ.
ದಾಸನಪುರ ಗ್ರಾಮದ ಆಸ್ಪತ್ರೆ ಕಾವಲ್ ಬಳಿಯ ನಿರ್ಜನ ಪ್ರದೇಶದಲ್ಲಿರುವ ಒಂಟಿ ಮನೆಯಲ್ಲೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ಮೇಲ್ನೋಟಕ್ಕೆ ಕೃಷಿ ಚಟುವಟಿಕೆಯಂತೆ ಕಂಡರೂ ಒಳಗೆ ಅಪಾಯಕಾರಿ ಕೆಮಿಕಲ್‌ಗಳನ್ನು ಬಳಸಿ ಸಿಂಥೆಟಿಕ್ ಡ್ರಗ್ಸ್ ತಯಾರಿಸಲಾಗುತ್ತಿತ್ತು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಪೊಲೀಸರ ದಾಳಿ ನಡೆಸಿದಾಗ 7.35 ಕೆ.ಜಿ ಮೆಫೆಡ್ರೋನ್, 41 ಕೆ.ಜಿ ಪ್ರಿಕರ್ಸರ್ ಕೆಮಿಕಲ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಹುಣಸೂರು ನಗರದ ರೆಹಮತ್ ಮೊಹಲ್ಲಾದ ಶೆಡ್ ಒಂದರಲ್ಲಿ ಡ್ರಗ್ ತಯಾರಿಕೆಗೆ ಬೇಕಾದ ಯಂತ್ರೋಪಕರಣಗಳು ಮತ್ತು ಕಚ್ಚಾ ವಸ್ತುಗಳನ್ನು ಅಡಗಿಸಿಡಲಾಗಿತ್ತು. ಈ ಜಾಲವು ಅಂತರರಾಜ್ಯ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ
ಮೈಸೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಕಳೆದ ಕೆಲವು ತಿಂಗಳಿಂದ ಡ್ರಗ್ಸ್ ಜಾಲ ಸಕ್ರಿಯವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಳೆದ ತಿಂಗಳಷ್ಟೇ ಮೈಸೂರಿನ ಹೊರವಲಯದಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಕೇರಳ ಮೂಲದ ಕಿಂಗ್‌ಪಿನ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 15 ಲಕ್ಷ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದರು. ಅಲ್ಲದೇ, ನಂಜನಗೂಡು ಕೈಗಾರಿಕಾ ಪ್ರದೇಶದ ಫಾರ್ಮಾ ಕಂಪನಿಯೊಂದರ ಮರೆಯಲ್ಲಿ ಅಕ್ರಮವಾಗಿ ಕೆಮಿಕಲ್ ಮಿಶ್ರಣ ಮಾಡುತ್ತಿದ್ದ ಘಟಕದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು.
"ಯುವಜನರನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯ ಜಾಲ ಸಕ್ರಿಯವಾಗಿದೆ. ಹಳ್ಳಿಗಳ ನಿರ್ಜನ ಪ್ರದೇಶಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು," ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮನವಿ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡ್ರಗ್ ಫ್ಯಾಕ್ಟರಿ ಜಪ್ತಿ ಮಾಡಿದ್ದ ಪೊಲೀಸರು
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಸಿಂಥೆಟಿಕ್ ಡ್ರಗ್ ತಯಾರಿಸುತ್ತಿದ್ದ ಬೃಹತ್ ಕಾರ್ಖಾನೆಯನ್ನು ಎನ್‌ಸಿಬಿ ಅಧಿಕಾರಿಗಳು 2026 ಜನವರಿ ತಿಂಗಳಲ್ಲಿ ಭೇದಿಸಿ ಜಪ್ತಿ ಮಾಡಿದ್ದರು. ಈ ಜಾಲದಲ್ಲಿ ರಾಜಸ್ಥಾನ ಮತ್ತು ಗುಜರಾತ್ ಮೂಲದ ವ್ಯಕ್ತಿಗಳು ಶಾಮೀಲಾಗಿದ್ದರು. ಫಿನಾಯಿಲ್, ಕ್ಲೀನಿಂಗ್ ಕೆಮಿಕಲ್ ಕಾರ್ಖಾನೆ ಸೋಗಿನಲ್ಲಿ ಡ್ರಗ್ಸ್ ಉತ್ಪಾದಿಸಲಾಗುತ್ತಿತ್ತು. ಗುಜರಾತ್ ಪೊಲೀಸರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿ, ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಮತ್ತು 500 ಕೆ.ಜಿ.ಗೂ ಹೆಚ್ಚು ರಾಸಾಯನಿಕ ವಶಪಡಿಸಿಕೊಳ್ಳಲಾಗಿತ್ತು.

