ಮಾತು ಬಾರದ ಮಗಳ ಮೇಲೆಯೇ ತಂದೆಯಿಂದ ಅತ್ಯಾಚಾರ; ಡಿಎನ್​ಎ ಟೆಸ್ಟ್‌ನಿಂದ ಬಯಲಾಯ್ತು ಕರಾಳ ಮುಖ!
x

ಮಾತು ಬಾರದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. 

ಮಾತು ಬಾರದ ಮಗಳ ಮೇಲೆಯೇ ತಂದೆಯಿಂದ ಅತ್ಯಾಚಾರ; ಡಿಎನ್​ಎ ಟೆಸ್ಟ್‌ನಿಂದ ಬಯಲಾಯ್ತು ಕರಾಳ ಮುಖ!

ಸತ್ಯಾಸತ್ಯತೆ ಪತ್ತೆಹಚ್ಚಲು ಪೊಲೀಸರು ಸಂತ್ರಸ್ತೆಯ ತಂದೆ ಸೇರಿದಂತೆ ಒಟ್ಟು 17 ಶಂಕಿತರ ರಕ್ತ ಮತ್ತು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.


Click the Play button to hear this message in audio format

ಸಮಾಜ ತಲೆತಗ್ಗಿಸುವಂತಹ ಘಟನೆಯೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಮಾತು ಬಾರದ ಮತ್ತು ಕಿವುಡುತನದ ಸಮಸ್ಯೆಯಿಂದ ಬಳಲುತ್ತಿದ್ದ 20 ವರ್ಷದ ತನ್ನ ಸ್ವಂತ ಮಗಳ ಮೇಲೆಯೇ ತಂದೆಯೊಬ್ಬ ಅತ್ಯಾಚಾರ ಎಸಗಿರುವ ಹೀನ ಕೃತ್ಯ ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿದೆ. ಅಮಾಯಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ, ವೈಜ್ಞಾನಿಕ ವರದಿ ಪಾಪಿ ಅಪ್ಪನ ಕೃತ್ಯ ಬಯಲು ಮಾಡಿದೆ.

ಮುಂಬೈನ ಕಫ್ ಪೆರೇಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ 47 ವರ್ಷದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೆಪ್ಟೆಂಬರ್ 2025ರಲ್ಲಿ ಈ ಘಟನೆ ಬೆಳಕಿಗೆ ಬಂದಿತ್ತು. ಸಂತ್ರಸ್ತ ಯುವತಿಯು ತನಗೆ ಹೊಟ್ಟೆಯಲ್ಲಿ ಏನೋ ಹುಳುಗಳು ಹರಿದಾಡಿದಂತೆ ಆಗುತ್ತಿದೆ ಎಂದು ಸನ್ನೆಗಳ ಮೂಲಕ ತನ್ನ ಅಜ್ಜಿಗೆ ವಿವರಿಸಿದ್ದಳು. ಕೂಡಲೇ ಕುಟುಂಬಸ್ಥರು ಆಕೆಯನ್ನು ಮುಂಬೈನ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯಕೀಯ ತಪಾಸಣೆ ನಡೆಸಿದಾಗ ಯುವತಿ ಐದು ತಿಂಗಳ ಗರ್ಭಿಣಿ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿತ್ತು. ಈ ವಿಷಯ ತಿಳಿದ ಕೂಡಲೇ ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತ್ತು.

ದಾರಿ ತಪ್ಪಿದ್ದ ತನಿಖೆ

ಆರಂಭದಲ್ಲಿ ಯುವತಿಗೆ ಮಾತನಾಡಲು ಸಾಧ್ಯವಾಗದ ಕಾರಣ, ತನಿಖೆ ನಡೆಸುವುದು ಪೊಲೀಸರಿಗೆ ಸವಾಲಾಗಿತ್ತು. ಆಕೆ ನೀಡಿದ ಅಸ್ಪಷ್ಟ ಸುಳಿವು ಮತ್ತು ಫೋಟೋಗಳ ಆಧಾರದ ಮೇಲೆ ಕಫ್ ಪೆರೇಡ್ ಕೊಳೆಗೇರಿ ಪ್ರದೇಶದ 16 ವರ್ಷದ ಬಾಲಕ ಮತ್ತು 32 ವರ್ಷದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಇವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು.

ತಂದೆಯ ನಾಟಕ ಬಯಲು

ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ಸಂತ್ರಸ್ತೆಯ ತಂದೆಯನ್ನು ವಿಚಾರಿಸಿದಾಗ, ಆತ ತನಗೇನೂ ಗೊತ್ತಿಲ್ಲವೆಂಬಂತೆ ನಾಟಕವಾಡಿದ್ದ. ಅಷ್ಟೇ ಅಲ್ಲ, ಮಗಳ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಲು ಕೂಡ ನಿರಾಕರಿಸಿದ್ದ. ಆದರೆ, ಅನುಮಾನಗೊಂಡ ಪೊಲೀಸರು ಸಂತ್ರಸ್ತೆಗೆ ಕೌನ್ಸೆಲಿಂಗ್ ಕೊಡಿಸಿ ದೂರು ದಾಖಲಿಸಿಕೊಂಡಿದ್ದರು.

ಸತ್ಯಾಸತ್ಯತೆ ಪತ್ತೆಹಚ್ಚಲು ಪೊಲೀಸರು ಸಂತ್ರಸ್ತೆಯ ತಂದೆ ಸೇರಿದಂತೆ ಒಟ್ಟು 17 ಶಂಕಿತರ ರಕ್ತ ಮತ್ತು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಜನವರಿ 27 ರಂದು ಬಂದ ವರದಿಯಲ್ಲಿ, ಸಂತ್ರಸ್ತೆಯ ಮಗುವಿನ ಡಿಎನ್‌ಎ, ಆಕೆಯ ತಂದೆಯ ಡಿಎನ್‌ಎಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗಿದೆ. ಈ ಮೂಲಕ ರಕ್ಷಕನಾಗಬೇಕಿದ್ದ ತಂದೆಯೇ ಭಕ್ಷಕನಾಗಿದ್ದು ಸಾಬೀತಾಗಿದೆ.

ಕಳೆದ 2025ರ ಮಾರ್ಚ್‌ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಕಾಮುಕ ತಂದೆಯನ್ನು ಕಂಬಿ ಹಿಂದೆ ತಳ್ಳಲಾಗಿದ್ದು, ಈ ಹಿಂದಿನ ತಪ್ಪು ಗ್ರಹಿಕೆಯಿಂದ ಬಂಧಿತರಾಗಿದ್ದ ಅಮಾಯಕರಿಗೆ ಬಿಡುಗಡೆ ಭಾಗ್ಯ ಸಿಗಲಿದೆ.

Read More
Next Story