
ಸಾಂದರ್ಭಿಕ ಚಿತ್ರ
Suicide Case| ಬಕೆಟ್ ನೀರಿನಲ್ಲಿ ಬಿದ್ದು ಮಗು ಸಾವು; ಆಘಾತ ತಾಳಲಾರದೆ ಹೆತ್ತಮ್ಮ ಆತ್ಮಹತ್ಯೆ
ಬಕೆಟ್ ನೀರಿನಲ್ಲಿ ಬಿದ್ದು ಮಗು ಸಾವು; ಮಗುವಿನ ಸಾವಿನ ಆಘಾತ ತಾಳಲಾರದೆ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಇಲ್ಲಿದೆ.
ಆಟವಾಡುತ್ತಿದ್ದ 11 ತಿಂಗಳ ಮಗು ಆಕಸ್ಮಿಕವಾಗಿ ನೀರಿನ ಬಕೆಟ್‌ನಲ್ಲಿ ಬಿದ್ದು ಮೃತಪಟ್ಟ ಬೆನ್ನಲ್ಲೇ ಮಗುವಿನ ಸಾವಿಗೆ ತಾನೇ ಕಾರಣ ಎಂದು ನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ನಡೆದಿದೆ.
ನಗರದ ನಿವಾಸಿಯಾದ 29 ವರ್ಷದ ಪ್ರತಿಭಾ ಮತ್ತು ಅವರ ಪುಟ್ಟ ಪುತ್ರ ಅಗಸ್ತ್ಯ ಮೃತ ದುರ್ದೈವಿಗಳು. ಪ್ರತಿಭಾ ಅವರು ಸಾಫ್ಟ್‌ವೇರ್ ವೃತ್ತಿಯಲ್ಲಿದ್ದು, ಪತಿ ಮಹಾಂತೇಶ್ ಅವರೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬುಧವಾರ ಮಹಾಂತೇಶ್ ಅವರು ಎಂದಿನಂತೆ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಪ್ರತಿಭಾ ಅವರು ಟೆರೇಸ್ ಮೇಲೆ ಒಣಗಿದ ಬಟ್ಟೆಗಳನ್ನು ತರಲು ಹೋಗಿದ್ದ ವೇಳೆ, ಮನೆಯಲ್ಲಿ ತೆವಳುತ್ತಿದ್ದ ಮಗು ಅಗಸ್ತ್ಯ ವಾಷಿಂಗ್ ಏರಿಯಾಕ್ಕೆ ಹೋಗಿ ನೀರಿನಿಂದ ತುಂಬಿದ್ದ ಬಕೆಟ್‌ಗೆ ಬಿದ್ದಿದೆ. ವಾಪಸ್ ಬಂದ ತಾಯಿಗೆ ಮಗು ನೀರಿನಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ.
ಮಗು ಪ್ರಾಣಬಿಟ್ಟಿದ್ದನ್ನು ಕಂಡು ತೀವ್ರ ಆಘಾತಕ್ಕೊಳಗಾದ ಪ್ರತಿಭಾ, ಮಗುವಿನ ಸಾವಿಗೆ ತಾನೇ ಹೊಣೆ ಎಂಬ ಅಪರಾಧ ಪ್ರಜ್ಞೆಯಿಂದ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಜೆ 6.30ರ ಸುಮಾರಿಗೆ ಪತಿ ಮಹಾಂತೇಶ್ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅನುಮಾನಗೊಂಡು ಪರ್ಯಾಯ ಕೀ ಬಳಸಿ ಒಳಗೆ ಪ್ರವೇಶಿಸಿದಾಗ ಪತ್ನಿ ಮತ್ತು ಮಗುವಿನ ಶವಗಳು ಪತ್ತೆಯಾಗಿವೆ.
ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ಪ್ರತಿಭಾ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. "ನನ್ನ ಮಗುವಿನ ಸಾವಿಗೆ ನಾನೇ ಜವಾಬ್ದಾರಿ. ನಾನು ಬಟ್ಟೆ ತರಲು ಹೋದಾಗ ಈ ಅನಾಹುತ ನಡೆದಿದೆ" ಎಂದು ಬರೆದಿದ್ದಾರೆ. ಮೊದಲು ಮಾತ್ರೆಗಳನ್ನು ಸೇವಿಸಿ ಹಾಗೂ ಕೈ ಮಣಿಕಟ್ಟನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅವರು, ಅಂತಿಮವಾಗಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

