Yogesh Gowda Murder| ಯೋಗೇಶ್ ಗೌಡ ಕೊಲೆ ಪ್ರಕರಣ:  ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಅಪರಾಧಿ
x

Yogesh Gowda Murder| ಯೋಗೇಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಅಪರಾಧಿ

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಆರೋಪಿಗಳ ಪೈಕಿ 19 ಆರೋಪಿಗಳು ಅಪರಾಧಿಗಳೆಂದು ಪರಿಗಣಿಸಲಾಗಿದೆ. ಗುರುವಾರ ಶಿಕ್ಷೆಯ ಪ್ರಮಾಣದ ವಾದ ನಡೆಯಲಿದೆ.


Click the Play button to hear this message in audio format

ತೀವ್ರ ಕುತೂಹಲ ಕೆರಳಿಸಿರುವ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವ ಸಾಧ್ಯತೆ ಇದೆ. ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಆರೋಪಿಗಳ ಪೈಕಿ 19 ಆರೋಪಿಗಳು ಅಪರಾಧಿಗಳೆಂದು ಪರಿಗಣಿಸಲಾಗಿದ್ದು, ಇಬ್ಬರನ್ನು ಖುಲಾಸೆ ಮಾಡಲಾಗಿದೆ.

ಸತತ 10 ವರ್ಷಗಳ ವಿಚಾರಣೆ ಬಳಿಕ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಅಪರಾಧಿ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಸೂಚನೆ ಮೇರೆಗೆ ವಿನಯ್‌ ಕುಲಕರ್ಣಿ ಸೇರಿದಂತೆ ಎಲ್ಲರನ್ನು ವಶಕ್ಕೆ ಪಡೆದಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಗುರುವಾರ ಶಿಕ್ಷೆಯ ಪ್ರಮಾಣದ ಕುರಿತು ವಾದ ನಡೆಯಲಿದೆ. ವಾದ-ಪ್ರತಿವಾದ ಅಲಿಸಿದ ಬಳಿಕ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಧಾರವಾಡದ ರಾಜಕೀಯದಲ್ಲಿ ನಾಯಕರಾಗಿ ಬೆಳೆಯುತ್ತಿದ್ದ ಬಿಜೆಪಿ ಮುಖಂಡ ಯೋಗೇಶ್ ಗೌಡ 2016ರ ಜೂ.15 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಂದು ಬೆಳಿಗ್ಗೆ ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಮಾಲೀಕತ್ವದ ಉದಯ ಜಿಮ್‌ಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದರು. ಮೊದಲು ಕಣ್ಣಿಗೆ ಖಾರದ ಪುಡಿ ಎರಚಿ, ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಅವರನ್ನು ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರ ಮುಂದೆ ಆರು ಜನ ಆರೋಪಿಗಳು ಶರಣಾಗಿದ್ದರು. ಈ ಕೊಲೆಯು ಕೇವಲ ಜಮೀನು ವಿವಾದ ಅಥವಾ ಹಳೇ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಈ ಹತ್ಯೆಯ ಹಿಂದೆ ದೊಡ್ಡ ರಾಜಕೀಯ ಒಳಸಂಚು ಇದೆ ಎಂದು ಯೋಗೇಶ್ ಗೌಡ ಅವರ ಕುಟುಂಬಸ್ಥರು ಮತ್ತು ಬಿಜೆಪಿ ಮುಖಂಡರು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದರು.

ಸಿಬಿಐ ತನಿಖೆ - ರಾಜಕೀಯ ತಿರುವು

ಯೋಗೇಶ್ ಗೌಡ ಅವರ ಪತ್ನಿ ಮಲ್ಲಮ್ಮ ಮತ್ತು ಸಹೋದರ ಗುರುನಾಥ ಗೌಡ ಇದೊಂದು ರಾಜಕೀಯ ಸುಪಾರಿ ಕೊಲೆ ಎಂದು ಆರೋಪಿಸಿದರು. ನಂತರ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಯಿತು, ಆದರೆ ಅಲ್ಲೂ ಕುಟುಂಬಸ್ಥರಿಗೆ ನ್ಯಾಯ ಸಿಗಲಿಲ್ಲ. ಬಳಿಕ ಅವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸುದೀರ್ಘ ಕಾನೂನು ಹೋರಾಟ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2019ರಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿತು. ಸಿಬಿಐ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಂಡ ಮೇಲೆ ತನಿಖೆ ಹೊಸ ವೇಗವನ್ನು ಪಡೆಯಿತು. ಕೊಲೆಯ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಒಳಸಂಚು ಇದೆ ಎಂಬ ಗಂಭೀರ ಆರೋಪ ಕೇಳಿಬಂತು. ಸಾಕ್ಷ್ಯಗಳನ್ನು ಸಂಗ್ರಹಿಸಿದ ಸಿಬಿಐ ಅಧಿಕಾರಿಗಳು, ಅಂತಿಮವಾಗಿ 2020ರ ನವೆಂಬರ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದರು. ಪ್ರಕರಣದಲ್ಲಿ ಕೇವಲ ರಾಜಕೀಯ ವ್ಯಕ್ತಿಗಳಲ್ಲದೆ, ಸಾಕ್ಷ್ಯ ನಾಶಕ್ಕೆ ಸಹಕರಿಸಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 21 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಯಿತು.

ಸಿಬಿಐ ಪ್ರವೇಶದಿಂದ ಪ್ರಕರಣಕ್ಕೆ ತಿರುವು

2018ರಲ್ಲಿ ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಿ, 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಈ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿತು. ಯೋಗೇಶ್ ಗೌಡ ಅವರ ಕುಟುಂಬದ ಸತತ ಮನವಿ ಮತ್ತು ಅಂದಿನ ಬಿಜೆಪಿ ನಾಯಕರ ಒತ್ತಾಯದ ಮೇರೆಗೆ ಸರ್ಕಾರವು ಪ್ರಕರಣವನ್ನು ಸಿಬಿಐಗೆ ತನಿಖೆಗೆ ಹಸ್ತಾಂತರಿಸಿತು.

ಸಿಬಿಐ ಅಧಿಕಾರಿಗಳು ಧಾರವಾಡದಲ್ಲಿ ಮೊಕ್ಕಾಂ ಹೂಡಿ ಹಳೆಯ ಕಡತಗಳನ್ನು ಕೆದಕಿದಾಗ ಅಚ್ಚರಿಯ ಸಂಗತಿಗಳು ಹೊರಬಂದವು. ಪೊಲೀಸರು ಮತ್ತು ಸಿಐಡಿ ಈ ಹಿಂದೆ ಸಲ್ಲಿಸಿದ್ದ ವರದಿಗಿಂತ ಭಿನ್ನವಾದ ಸತ್ಯಗಳು ಬೆಳಕಿಗೆ ಬಂದವು. ಕೊಲೆಗೆ ಬಳಸಿದ್ದ ಆಯುಧಗಳು, ಆರೋಪಿಗಳ ನಡುವಿನ ಫೋನ್ ಕರೆಗಳ ದಾಖಲೆ ಮತ್ತು ಕೊಲೆಗಾರರಿಗೆ ನೀಡಲಾದ ಹಣದ ಮೂಲವನ್ನು ಸಿಬಿಐ ಪತ್ತೆಹಚ್ಚಿತು.

ಶಾಸಕ ವಿನಯ್ ಕುಲಕರ್ಣಿ ಬಂಧನ

ಸಿಬಿಐ ತನಿಖೆಯು ಕಾಂಗ್ರೆಸ್‌ನ ಪ್ರಭಾವಿ ನಾಯಕ ವಿನಯ್ ಕುಲಕರ್ಣಿ ಅವರತ್ತ ಬೆರಳು ಮಾಡಿತು. 2020ರ ನ.5 ರಂದು ಸಿಬಿಐ ಅಧಿಕಾರಿಗಳು ಧಾರವಾಡದ ನಿವಾಸದ ಮೇಲೆ ದಾಳಿ ಮಾಡಿ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದರು. ಸುದೀರ್ಘ ವಿಚಾರಣೆಯ ನಂತರ ಅವರನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಯಿತು. ಸಿಬಿಐ ಸಲ್ಲಿಸಿದ ಆರೋಪಪಟ್ಟಿ ಪ್ರಕಾರ, ಯೋಗೇಶ್ ಗೌಡ ಮತ್ತು ವಿನಯ್ ಕುಲಕರ್ಣಿ ನಡುವೆ ತೀವ್ರ ರಾಜಕೀಯ ಪೈಪೋಟಿ ಇತ್ತು. ಯೋಗೇಶ್ ಗೌಡರು ವಿನಯ್ ಕುಲಕರ್ಣಿ ಅವರ ಭದ್ರಕೋಟೆಯಲ್ಲೇ ಅವರಿಗೆ ಸವಾಲಾಗಿದ್ದರು. ಧಾರವಾಡ ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ನಡೆದ ವಾಗ್ವಾದ ಮತ್ತು ಜಮೀನು ವಿಚಾರದ ನೆಪದಲ್ಲಿ ನಡೆದ ವೈಷಮ್ಯವು ಕೊಲೆಗೆ ಪ್ರಚೋದನೆ ನೀಡಿತು. ವಿನಯ್ ಕುಲಕರ್ಣಿ ಅವರ ಸೂಚನೆಯ ಮೇರೆಗೆ ಅವರ ಆಪ್ತರು ಸುಪಾರಿ ನೀಡಿ ಈ ಹತ್ಯೆ ಮಾಡಿಸಿದ್ದಾರೆ ಎಂಬುದು ಸಿಬಿಐ ವಾದವಾಗಿತ್ತು.

ಜಾಮೀನು ಹಾಗೂ ಜಿಲ್ಲಾ ಪ್ರವೇಶಕ್ಕೆ ನಿಷೇಧ

ಸುಮಾರು ಒಂಬತ್ತು ತಿಂಗಳುಗಳ ಕಾಲ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ಅವರಿಗೆ 2021ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಆದರೆ, ನ್ಯಾಯಾಲಯವು ಒಂದು ಕಠಿಣ ಷರತ್ತನ್ನು ವಿಧಿಸಿತು. ವಿನಯ್ ಕುಲಕರ್ಣಿ ಅವರು ಧಾರವಾಡ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂದು ನಿರ್ದೇಶನ ನೀಡಿತು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಯಿತು. ಈ ನಿರ್ಬಂಧದ ಕಾರಣದಿಂದ ವಿನಯ್ ಕುಲಕರ್ಣಿ ಅವರು ತಮ್ಮ ಜಿಲ್ಲೆಯಿಂದ ಹೊರಗಿದ್ದುಕೊಂಡೇ 2023ರ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಯಿತು. ಬೆಳಗಾವಿಯ ಕಿತ್ತೂರಿನಲ್ಲಿ ಕುಳಿತು ಅವರು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಸ್ಪರ್ಧಿಸಿ ಜಯಗಳಿಸಿದರು. ನ್ಯಾಯಾಲಯಕ್ಕೆ ಹಲವು ಬಾರಿ ಮನವಿ ಸಲ್ಲಿಕೆ ಮಾಡಿದ ಬಳಿಕ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶಿಸಲು ಅನುಮತಿ ನೀಡಲಾಯಿತು.

Read More
Next Story