
ವಾಯುವಿಹಾರಕ್ಕೆ ತೆರಳಿದ್ದ ವಕೀಲನ ಮೇಲೆ ಗುಂಡಿನ ದಾಳಿ.
ಹಾಡುಹಗಲೇ ವಕೀಲನ ಹತ್ಯೆ ಮಾಡಿ ಎಸ್ಕೇಪ್ ಆಗುವಾಗ ಕೈಕೊಟ್ಟ ಬೈಕ್, ಮುಂದೇನಾಯಿತು?
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ವಕೀಲ ರಾಜೀವ್ ಸಿಂಗ್ ಹತ್ಯೆ. ಕೊಲೆ ನಂತರ ಬೈಕ್ ಸ್ಟಾರ್ಟ್ ಆಗದೆ ಹಂತಕರು ಪರದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ. ಪೊಲೀಸ್ ತನಿಖೆ ಚುರುಕು.
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಶನಿವಾರ ಬೆಳಗ್ಗೆ ವಕೀಲ ಹಾಗೂ ಮಾಜಿ ಗ್ರಾಮ ಪಂಚಾಯತ್ ಮುಖ್ಯಸ್ಥರೊಬ್ಬರನ್ನು ಹಾಡುಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆಯ ನಂತರ ಆರೋಪಿಗಳ ಬೈಕ್ ಸ್ಟಾರ್ಟ್ ಆಗದೆ ಪರದಾಡಿದ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮೃತ ದುರ್ದೈವಿಯನ್ನು 45 ವರ್ಷದ ರಾಜೀವ್ ಸಿಂಗ್ ಎಂದು ಗುರುತಿಸಲಾಗಿದೆ. ಕಟುವಾರು ಕಾಪುರ ಪ್ರದೇಶದಲ್ಲಿ ಅವರು ಎಂದಿನಂತೆ ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳಲ್ಲಿ ಒಬ್ಬಾತ ಕೆಳಗಿಳಿದು ನಾಡಬಂದೂಕಿನಿಂದ ತೀರಾ ಹತ್ತಿರದಿಂದ ರಾಜೀವ್ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ, ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕೈಕೊಟ್ಟ ಬೈಕ್, ಹಂತಕರ ಪರದಾಟ
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಹಂತಕರು ರಾಜೀವ್ ಸಿಂಗ್ ಅವರಿಗಾಗಿ ಹೊಂಚು ಹಾಕಿ ಕುಳಿತಿರುವುದು ಸ್ಪಷ್ಟವಾಗಿದೆ. ಗುಂಡಿನ ದಾಳಿ ನಡೆಸಿದ ಬಳಿಕ ಹಂತಕ ತನ್ನ ಸಹಚರ ಕಾಯುತ್ತಿದ್ದ ಬೈಕ್ ಬಳಿ ವೇಗವಾಗಿ ಓಡಿಬಂದಿದ್ದಾನೆ. ಆದರೆ, ಆತುರದಲ್ಲಿ ಬೈಕ್ ಸ್ಟಾರ್ಟ್ ಆಗದ ಕಾರಣ ಕೆಲಕಾಲ ಪರದಾಡಿದ್ದಾರೆ. ಈ ವೇಳೆ ಶಬ್ದ ಕೇಳಿ ಸ್ಥಳೀಯರು ಜಮಾಯಿಸಲು ಮುಂದಾದಾಗ, ಆರೋಪಿಗಳು ಬಂದೂಕು ತೋರಿಸಿ ಜನರನ್ನು ಬೆದರಿಸಿದ್ದಾರೆ. ಕೊನೆಗೆ ಬೈಕ್ ಸ್ಟಾರ್ಟ್ ಆಗಿದ್ದು, ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಜೀವಬೆದರಿಕೆ ಬಗ್ಗೆ ಹಿಂದೆಯೇ ದೂರು
ಮೃತ ರಾಜೀವ್ ಸಿಂಗ್ ಅವರಿಗೆ ಜೀವಬೆದರಿಕೆ ಇತ್ತು ಮತ್ತು ಈ ಹಿಂದೆಯೂ ಎರಡು ಬಾರಿ ಅವರ ಮೇಲೆ ಕೊಲೆ ಯತ್ನ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ಅವರು ಪೊಲೀಸರಿಗೂ ದೂರು ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹತ್ಯೆ ಖಂಡಿಸಿ ವಕೀಲರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

