Drug Mafia Busted| ಕಾಲೇಜು ವಿದ್ಯಾರ್ಥಿಗಳಿಗೆ ಎಂಡಿಎಂಎ; ವಿದೇಶಿ ಪ್ರಜೆ  ಸೇರಿ ಎಂಟು ಮಂದಿ ಸೆರೆ; 27 ಕೋಟಿ ಮಾಲು ವಶ
x

Drug Mafia Busted| ಕಾಲೇಜು ವಿದ್ಯಾರ್ಥಿಗಳಿಗೆ ಎಂಡಿಎಂಎ; ವಿದೇಶಿ ಪ್ರಜೆ ಸೇರಿ ಎಂಟು ಮಂದಿ ಸೆರೆ; 27 ಕೋಟಿ ಮಾಲು ವಶ

ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಡ್ರಗ್ಸ್‌ ಮಾಫಿಯಾವನ್ನು ನಗರ ಪೊಲೀಸರು ಭೇದಿಸಿದ್ದಾರೆ.


ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಡ್ರಗ್ಸ್‌ ಮಾಫಿಯಾವನ್ನು ನಗರ ಪೊಲೀಸರು ಭೇದಿಸಿದ್ದಾರೆ.

ಹೆಬ್ಬಗೋಡಿ, ಯಲಹಂಕ ಉಪನಗರ ಸೇರಿದಂತೆ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿದೇಶಿ ಪ್ರಜೆ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಜೈಲಿಗಟ್ಟಿದ್ದಾರೆ. ಜತೆಗೆ, ಬರೋಬ್ಬರಿ 27.42 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ಡ್ರಗ್ಸ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಎಂಟು ಮಂದಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ವಿದ್ಯಾರ್ಥಿಗಳೇ ಈ ಜಾಲದ ಪ್ರಮುಖ ಗುರಿಯಾಗಿಸಿರುವ ಮಾಹಿತಿ ಬೆಳಕಿಗೆ ಬಂದಿದೆ. ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ತಂದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ವಶಪಡಿಸಿಕೊಂಡ ವಸ್ತುಗಳಲ್ಲಿ 12 ಕೆಜಿ 91 ಗ್ರಾಂ ಎಂಡಿಎಂಎ (MDMA), 275 ಗ್ರಾಂ ಕೋಕೇನ್, 34 ಕೆಜಿ 802 ಗ್ರಾಂ ಗಾಂಜಾ ಸೇರಿದೆ. ಜತೆಗೆ 2.85 ಲಕ್ಷ ರೂಪಾಯಿ ನಗದು, 40 ಗ್ರಾಂ ಚಿನ್ನಾಭರಣ, ಒಂದು ಕಾರು, ಎರಡು ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಈ ಜಾಲದಲ್ಲಿ ಕೇವಲ ಸ್ಥಳೀಯರು ಮಾತ್ರವಲ್ಲದೆ, ವಿದೇಶಿ ಹಾಗೂ ಹೊರರಾಜ್ಯದ ಕೊಂಡಿಗಳು ಸೇರಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾಸರೆ. ಬಂಧಿತರಲ್ಲಿ ಒಬ್ಬ ವಿದೇಶಿ ಪ್ರಜೆ, ನಾಲ್ವರು ಹೊರ ರಾಜ್ಯದವರು ಮತ್ತು ಮೂವರು ಸ್ಥಳೀಯರಿದ್ದಾರೆ. ಶಾಲಾ ಕಾಲೇಜುಗಳು ಮತ್ತು ಜನನಿಬಿಡ ಪ್ರದೇಶಗಳಾದ ಹೆಬ್ಬಗೋಡಿ, ಯಲಹಂಕ ಉಪನಗರ, ಮೈಕೋಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಹಾಗೂ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.

ನಗರದ ಆಯಕಟ್ಟಿನ ಜಾಗಗಳಲ್ಲಿ ಎಂಡಿಎಂಎ, ಕೋಕೇನ್ ಮತ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದರು.

ಮುಂದುವರಿದ ತನಿಖೆ

ಬಂಧಿತ ಎಂಟು ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಈ ಜಾಲದ ಹಿಂದಿರುವ 'ಬಿಗ್ ಫಿಶ್'ಗಳ ಪತ್ತೆ ಇನ್ನೂ ಬಾಕಿ ಇದೆ. ಆರೋಪಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮುಖ್ಯಸ್ಥರ ಪತ್ತೆಗಾಗಿ ತನಿಖೆ ತೀವ್ರಗೊಂಡಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಈ ಕಾರ್ಯಾಚರಣೆಯು ಡಿಸಿಪಿಗಳಾದ ನಾರಾಯಣ್ ಎಂ, ಜಿ.ಕೆ. ಮಿಥುನ್ ಕುಮಾರ್, ಮೊಹಮ್ಮದ್ ಸುಜೀತ ಹಾಗೂ ಡಾ. ವಿಕ್ರಮ್ ಆಮಟೆ ಇದ್ದರು.

Read More
Next Story