
ಕುಖ್ಯಾತ ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ.
Mangalore Mafia | ರೌಡಿಶೀಟರ್ ‘ಟ್ಯಾಬ್ಲೆಟ್ ಆರಿಫ್’ ಬರ್ಬರ ಹತ್ಯೆ; ಗ್ಯಾಂಗ್ ವಾರ್ ಶಂಕೆ
ಶುಕ್ರವಾರ ಮುಂಜಾನೆ ಆರಿಫ್ ಅವರು ತಮ್ಮ ಮೋಟಾರು ಸೈಕಲ್‌ನಲ್ಲಿ ತೊಕ್ಕೊಟ್ಟು ಫ್ಲೈ ಓವರ್ ಮೇಲೆ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಮಂಗಳೂರಿನ ಹೊರವಲಯದ ತೊಕ್ಕೊಟ್ಟುವಿನಲ್ಲಿ ಶುಕ್ರವಾರ ಮುಂಜಾನೆ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ತಲಪಾಡಿಯ ಮುಳ್ಳುಗುಡ್ಡೆ ನಿವಾಸಿ ಆರಿಫ್ ಅಲಿಯಾಸ್ ‘ಟ್ಯಾಬ್ಲೆಟ್ ಆರಿಫ್’ (46) ಎಂದು ಗುರುತಿಸಲಾಗಿದ್ದು, ಈತ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದನು.
ಶುಕ್ರವಾರ ಮುಂಜಾನೆ ಆರಿಫ್ ಅವರು ತಮ್ಮ ಮೋಟಾರು ಸೈಕಲ್‌ನಲ್ಲಿ ತೊಕ್ಕೊಟ್ಟು ಫ್ಲೈ ಓವರ್ ಮೇಲೆ ಸಂಚರಿಸುತ್ತಿದ್ದಾಗ ಕೊಲೆ ಮಾಡಲಾಗಿದೆ. ಕಾರಿನಲ್ಲಿ ಬೆನ್ನಟ್ಟಿ ಬಂದ ಹಂತಕರ ತಂಡವು ಮೊದಲು ಆರಿಫ್ ಅವರ ಬೈಕ್‌ಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆರಿಫ್ ರಸ್ತೆಗೆ ಬಿದ್ದ ಕೂಡಲೇ ಕಾರಿನಿಂದ ಇಳಿದು ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಮೇಲೆ ಮುಗಿಬಿದ್ದಿದ್ದಾರೆ. ತಲೆ ಮತ್ತು ದೇಹದ ಭಾಗಗಳಿಗೆ ತೀವ್ರವಾಗಿ ಕೊಚ್ಚಿದ ಪರಿಣಾಮ ಆರಿಫ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಹಂತಕರು ಅದೇ ಕಾರಿನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಮಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ‘ಗ್ಯಾಂಗ್ ವಾರ್’ ಎನ್ನಲಾಗುತ್ತಿದೆ. ಆರಿಫ್ ಮೇಲೆ ಈ ಹಿಂದೆ ಹಲವಾರು ಕ್ರಿಮಿನಲ್ ಪ್ರಕರಣಗಳಿದ್ದವು ಮತ್ತು ಈ ಹಿಂದೆಯೂ ಅವರ ಮೇಲೆ ಕೊಲೆ ಯತ್ನ ನಡೆದಿತ್ತು ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಹಂತಕರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ. ಈ ಘಟನೆಯಿಂದಾಗಿ ಉಳ್ಳಾಲ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ಹಿಂದೆಯೂ ನಡೆದಿತ್ತು ಕೊಲೆ ಯತ್ನ
ಈ ಹಿಂದೆ 2022ರಲ್ಲಿ ಕೇವಲ 7,000 ರೂಪಾಯಿ ಬಡ್ಡಿ ಹಣದ ವಿವಾದಕ್ಕೆ ಸಂಬಂಧಿಸಿದಂತೆ ಈತನ ಮೇಲೆ ಕೊಲೆ ಯತ್ನ ನಡೆಸಲಾಗಿತ್ತು. ಆರಿಫ್ ತನ್ನ ಬೈಕ್‌ನಲ್ಲಿ ಕೆಲಸಕ್ಕಾಗಿ ಮಂಗಳೂರಿನ ಮೀನುಗಾರಿಕಾ ಬಂದರಿಗೆ ತೆರಳುತ್ತಿದ್ದಾಗ, ಮುಳ್ಳುಗುಡ್ಡೆ ಬಳಿ ಕಾರಿನಲ್ಲಿ ಹೊಂಚು ಹಾಕಿದ್ದ ನಾಲ್ವರು ದುಷ್ಕರ್ಮಿಗಳ ತಂಡ ಏಕಾಏಕಿ ತಡೆದು ನಿಲ್ಲಿಸಿ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಅಂದು ಗಂಭೀರವಾಗಿ ಗಾಯಗೊಂಡಿದ್ದ ಆರಿಫ್ ಪ್ರಾಣಾಪಾಯದಿಂದ ಪಾರಾಗಿದ್ದರು.

