ಪ್ರೇಯಸಿಗೆ ಚಾಕುವಿನಿಂದ ಇರಿದು, ಕಾರಿನಲ್ಲೇ ಪೆಟ್ರೋಲ್‌ ಬಾಂಬ್‌ ಸ್ಪೋಟಿಸಿಕೊಂಡು ಯುವಕ ಸಜೀವ ದಹನ
x

ಚಲಿಸುತ್ತಿದ್ದ ಕಾರಿನೊಳಗೆ ಯುವತಿಯೊಂದಿಗೆ ತೀವ್ರ ಗಲಾಟೆ ಮಾಡಿಕೊಂಡ ಯುವಕನೊಬ್ಬ ಆಕೆಗೆ ಚಾಕುವಿನಿಂದ ಇರಿದು, ಬಳಿಕ ಕಾರಿನೊಳಗೆ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಸಜೀವ ದಹನವಾಗಿದ್ದಾನೆ.

ಪ್ರೇಯಸಿಗೆ ಚಾಕುವಿನಿಂದ ಇರಿದು, ಕಾರಿನಲ್ಲೇ ಪೆಟ್ರೋಲ್‌ ಬಾಂಬ್‌ ಸ್ಪೋಟಿಸಿಕೊಂಡು ಯುವಕ ಸಜೀವ ದಹನ

ತುಮಕೂರು ಶಿರಾ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಯುವತಿಗೆ ಇರಿದು, ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಯುವಕ ಸಜೀವ ದಹನವಾಗಿದ್ದಾನೆ. ಗಾಯಗೊಂಡ ಯುವತಿ ಆಸ್ಪತ್ರೆಗೆ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Click the Play button to hear this message in audio format

ತುಮಕೂರು ಜಿಲ್ಲೆಯ ಶಿರಾ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಯುವಕನೊಬ್ಬ ಯುವತಿಗೆ ಚಾಕುವಿನಿಂದ ಇರಿದು, ಬಳಿಕ ಕಾರಿನೊಳಗೆ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಸಜೀವ ದಹನವಾಗಿರುವ ಭೀಕರ ಘಟನೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಬೆಂಗಳೂರಿನ ನಾಗೇಂದ್ರ (30) ಎಂಬಾತ ಕಾರಿನಲ್ಲೇ ಸುಟ್ಟು ಕರಕಲಾಗಿದ್ದು, ಆತನೊಂದಿಗಿದ್ದ ರಮ್ಯಾ ಉಲ್ಲಾಸ್ (23) ಎಂಬ ಯುವತಿ ತೀವ್ರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪ್ರಸ್ತುತ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ರಮ್ಯಾ ಉಲ್ಲಾಸ್ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಒಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ನಾಗೇಂದ್ರ ಹಾಗೂ ರಮ್ಯಾ ಬೆಂಗಳೂರಿನಿಂದ ಅಂಕೋಲಾಕ್ಕೆ ತೆರಳಲು ಖಾಸಗಿಯಾಗಿ ಕಾರೊಂದನ್ನು ಬುಕ್ ಮಾಡಿದ್ದರು. ಚಾಲಕನೊಂದಿಗೆ ಇವರಿಬ್ಬರು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ, ಕಾರು ತುಮಕೂರು ದಾಟುತ್ತಿದ್ದಂತೆ ನಾಗೇಂದ್ರ ಹಾಗೂ ರಮ್ಯಾ ನಡುವೆ ಯಾವುದೋ ವೈಯಕ್ತಿಕ ವಿಚಾರಕ್ಕೆ ಕಾರಿನಲ್ಲೇ ತೀವ್ರ ಜಗಳ ಆರಂಭವಾಗಿದೆ.

ಮಾತಿನ ಚಕಮಕಿ ವಿಕೋಪಕ್ಕೆ ಹೋದಾಗ, ನಾಗೇಂದ್ರ ತಾನು ಮೊದಲೇ ಪ್ಲಾನ್ ಮಾಡಿ ತಂದಿದ್ದ ಚಾಕುವಿನಿಂದ ರಮ್ಯಾ ಅವರ ತಲೆ ಹಾಗೂ ದೇಹದ ಭಾಗಕ್ಕೆ ಮನಸೋಇಚ್ಛೆ ಚುಚ್ಚಿದ್ದಾನೆ. ಈ ವೇಳೆ ಕಾರಿನಲ್ಲಿ ಪೆಟ್ರೋಲ್ ಬಾಂಬ್ ಇರುವುದು ಯುವತಿಗೆ ತಿಳಿದಿದೆ. ನಾಗೇಂದ್ರನ ಈ ರೌದ್ರಾವತಾರದಿಂದ ಬೆಚ್ಚಿಬಿದ್ದ ರಮ್ಯಾ, ಬೊಬ್ಬೆ ಹೊಡೆದು ಜೀವ ಉಳಿಸಿಕೊಳ್ಳಲು ಚಲಿಸುತ್ತಿದ್ದ ಕಾರಿನಿಂದಲೇ ಹೊರಗೆ ಹಾರಿದ್ದಾರೆ. ಕಾರಿನೊಳಗೆ ನಡೆಯುತ್ತಿದ್ದ ಈ ಭೀಕರ ದೃಶ್ಯ ಹಾಗೂ ಯುವತಿ ಕೆಳಗೆ ಬಿದ್ದಿದ್ದನ್ನು ಕಂಡು ಗಾಬರಿಗೊಂಡ ವಾಹನ ಚಾಲಕ ತಕ್ಷಣವೇ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಕೆಳಗೆ ಇಳಿದಿದ್ದಾನೆ.

ಚಾಲಕ ಕೆಳಗೆ ಇಳಿಯುತ್ತಿದ್ದಂತೆಯೇ ನಾಗೇಂದ್ರ ಒಳಗಿನಿಂದ ಕಾರಿನ ಎಲ್ಲಾ ಡೋರ್‌ಗಳನ್ನು ಸೆಂಟ್ರಲ್ ಲಾಕ್ ಮಾಡಿಕೊಂಡಿದ್ದಾನೆ. ಡೋರ್ ಲಾಕ್ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಕಾರಿನೊಳಗೆ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಇಡೀ ಕಾರು ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ನಾಗೇಂದ್ರ ತಾನು ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ ಪೆಟ್ರೋಲ್ ಬಾಂಬ್ ಅನ್ನು ಕಾರಿನೊಳಗೆ ಸಿಡಿಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಬೆಂಕಿ ಇಡೀ ಕಾರನ್ನು ಆವರಿಸಿದ್ದರಿಂದ ನಾಗೇಂದ್ರನಿಗೆ ಹೊರಬರಲು ಸಾಧ್ಯವಾಗದೆ ಕಾರಿನೊಳಗೇ ಸಜೀವ ದಹನವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರು ಹೊತ್ತಿ ಉರಿದು ಭಸ್ಮವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ಉನ್ನತ ಅಧಿಕಾರಿಗಳ ತಂಡದೊಂದಿಗೆ ಜೋಗಿಹಳ್ಳಿ ಬಳಿಯ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಕಾರಿನಿಂದ ಜಿಗಿದು ತೀವ್ರ ರಕ್ತಸ್ರಾವ ಹಾಗೂ ಗಾಯಗಳಾಗಿದ್ದ ರಮ್ಯಾ ಉಲ್ಲಾಸ್ ಅವರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭೀಕರ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸುಟ್ಟು ಕರಕಲಾದ ಕಾರನ್ನು ವಶಕ್ಕೆ ಪಡೆದಿದ್ದಾರೆ. ನಾಗೇಂದ್ರ ಮತ್ತು ರಮ್ಯಾ ನಡುವೆ ಇದ್ದ ಸಂಬಂಧವೇನು, ಜಗಳಕ್ಕೆ ಕಾರಣವೇನು ಮತ್ತು ನಾಗೇಂದ್ರ ಮೊದಲೇ ಕೊಲೆ ಹಾಗೂ ಆತ್ಮಹತ್ಯೆಯ ಪ್ಲಾನ್ ಮಾಡಿಕೊಂಡಿದ್ದನೇ ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Read More
Next Story