
ಬೈಕ್ ವಿಚಾರಕ್ಕೆ ಗಲಾಟೆ; ಪ್ರೇಯಸಿ ಹಾಗೂ ಆಕೆಯ ಪೋಷಕರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯಕರ
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದ ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕಿನ ನೆಲಮಂಗಲ ಸಮೀಪದ ತರಬನಹಳ್ಳಿಯಲ್ಲಿ ಬೈಕ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವೊಂದು ಅತಿರೇಕಕ್ಕೆ ಹೋಗಿದ್ದು, ಯುವಕನೊಬ್ಬ ತನ್ನ ಪ್ರೇಯಸಿ ಹಾಗೂ ಆಕೆಯ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಯಶವಂತಪುರ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದ ಸುಮಲತಾ ಅವರು ಕೌಟುಂಬಿಕ ಕಾರಣಗಳಿಂದಾಗಿ ನಾಲ್ಕು ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದರು. ಇದೇ ಅವಧಿಯಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪಾಂಡುರಂಗ (29 ವರ್ಷ) ಎಂಬಾತನ ಪರಿಚಯವಾಗಿತ್ತು. ಆನ್‌ಲೈನ್ ಸ್ನೇಹ ಪ್ರೇಮಕ್ಕೆ ತಿರುಗಿ, ಇಬ್ಬರೂ ಮಹಾಲಕ್ಷ್ಮಿ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ಲಿವಿಂಗ್ ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಆದರೆ, ಇತ್ತೀಚೆಗೆ ಪಾಂಡುರಂಗ ಬೇರೊಬ್ಬ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿದ್ದ ವಿಚಾರ ಸುಮಲತಾಗೆ ತಿಳಿದಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿ, ಸುಮಾರು ಎರಡು ತಿಂಗಳ ಹಿಂದೆ ಆತನಿಂದ ದೂರವಾದ ಸುಮಲತಾ ತರಬನಹಳ್ಳಿಯಲ್ಲಿರುವ ತಮ್ಮ ತವರು ಮನೆಗೆ ಮರಳಿದ್ದರು.
ಜಗಳಕ್ಕೆ ಕಾರಣವಾದ ಬೈಕ್
ಇತ್ತೀಚೆಗೆ ಸುಮಲತಾ ಅವರ ಮನೆಗೆ ದಿಢೀರನೆ ಬಂದ ಪಾಂಡುರಂಗ, ಬೈಕ್ ಕೊಡುವಂತೆ ಪಟ್ಟು ಹಿಡಿದಿದ್ದಾನೆ. ಆದರೆ, ಆ ಬೈಕ್ ತನ್ನ ಅಕ್ಕನಿಗೆ ಸೇರಿದ್ದು ಎಂದು ಹೇಳಿ ಸುಮಲತಾ ಅದನ್ನು ನೀಡಲು ಕಡ್ಡಿಮುರಿದಂತೆ ನಿರಾಕರಿಸಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಸುಮಲತಾ ಅವರ ಪೋಷಕರು ಮಧ್ಯಪ್ರವೇಶಿಸಿ, ಪಾಂಡುರಂಗನನ್ನು ತರಾಟೆಗೆ ತೆಗೆದುಕೊಂಡು ಬೈದು ಕಳುಹಿಸಿದ್ದರು ಎನ್ನಲಾಗಿದೆ.
ದ್ವೇಷದಿಂದ ಅಮಾನವೀಯ ಕೃತ್ಯ
ಬೈಕ್ ನೀಡದ ವಿಚಾರ ಹಾಗೂ ಆಕೆಯ ಪೋಷಕರು ತನಗೆ ಅವಮಾನ ಮಾಡಿದ್ದಾರೆ ಎಂಬ ದ್ವೇಷದಿಂದ ರೊಚ್ಚಿಗೆದ್ದ ಪಾಂಡುರಂಗ, ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ. ಏಕಾಏಕಿ ಮನೆಗೆ ನುಗ್ಗಿ ಸುಮಲತಾ ಹಾಗೂ ಆಕೆಯ ತಂದೆ ಶ್ರೀರಾಮ (49), ತಾಯಿ ಮಂಜಮ್ಮ (46) ಅವರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ನೆರವಿನಿಂದ ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮೂವರ ಸ್ಥಿತಿಯೂ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಆರೋಪಿ ಪೊಲೀಸರ ಬಲೆಗೆ
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದ ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿ ಪಾಂಡುರಂಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

