
ರಸ್ತೆ ಮೇಲೆ ಒಣಗಲು ಹಾಕಿದ್ದ ರಾಗಿ ಕಣದಿಂದ ದುರಂತ: ಲಾರಿ ಹರಿದು ಅಜ್ಜ-ಮೊಮ್ಮಗಳ ದಾರುಣ ಸಾವು
ಮೃತ ಸೃಷ್ಟಿ ಕೂಡ್ಲಿಗಿ ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಹಾಗೂ ತಾತನ ಜತೆ ಸ್ಕೂಟರ್ನಲ್ಲಿ ಹೋಗುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಒಣಗಲು ಹಾಕಿದ್ದ ರಾಗಿ ಕಣದ ಮೇಲೆ ದ್ವಿಚಕ್ರ ವಾಹನ ಜಾರಿ ಬಿದ್ದ ಪರಿಣಾಮ, ಹಿಂದಿನಿಂದ ಬಂದ ಲಾರಿಯೊಂದು ಹರಿದು ಅಜ್ಜ ಹಾಗೂ ಮೊಮ್ಮಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕ್ಯಾಸನಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ತಾಲ್ಲೂಕಿನ ಕೆಳಗಿನ ಕರ್ನಾರ್ ಹಟ್ಟಿ ಗ್ರಾಮದ ನಿವಾಸಿ ಈಶ್ವರಪ್ಪ (55) ಹಾಗೂ ಅವರ ಮೊಮ್ಮಗಳು ಸೃಷ್ಟಿ (14) ಎಂದು ಗುರುತಿಸಲಾಗಿದೆ.
ಮೃತ ಸೃಷ್ಟಿ ಕೂಡ್ಲಿಗಿ ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗುರುವಾರದಂದು ಅವಳ ವಾರ್ಷಿಕ ಪರೀಕ್ಷೆಗಳು ಮುಕ್ತಾಯಗೊಂಡಿದ್ದವು. ಹೀಗಾಗಿ, ಮೊಮ್ಮಗಳನ್ನು ಶಾಲೆಗೆ ಹೋಗಿ ಕರೆದುಕೊಂಡು ಬರಲು ಈಶ್ವರಪ್ಪ ಅವರು ತಮ್ಮ ಬೈಕಿನಲ್ಲಿ ತೆರಳಿದ್ದರು. ಪರೀಕ್ಷೆ ಮುಗಿದ ಖುಷಿಯಲ್ಲಿ ಅಜ್ಜನ ಜೊತೆ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.
ರಾಗಿ ಕಣದ ಮೇಲೆ ಜಾರಿದ ಬೈಕ್
ಅಜ್ಜ ಮತ್ತು ಮೊಮ್ಮಗಳು ಪ್ರಯಾಣಿಸುತ್ತಿದ್ದ ಬೈಕ್ ಕ್ಯಾಸನಕೆರೆ ಬಳಿ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ರಸ್ತೆಯ ಮೇಲೆ ರೈತರು ಒಣಗಲು ಹಾಕಿದ್ದ ರಾಗಿ ಕಣದ ಮೇಲೆ ಹರಿದಿದೆ. ಈ ವೇಳೆ ಬೈಕ್ ಒಮ್ಮೆಲೆ ನಿಯಂತ್ರಣ ತಪ್ಪಿ ಇಬ್ಬರೂ ಹೆದ್ದಾರಿಯ ಮೇಲೆಯೇ ಉರುಳಿ ಬಿದ್ದಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ಹಿಂದಿನಿಂದ ಬಂದ ಲಾರಿಯೊಂದು ಇಬ್ಬರ ಮೇಲೂ ಹರಿದಿದೆ. ತೀವ್ರವಾಗಿ ಗಾಯಗೊಂಡ ಇಬ್ಬರೂ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹೆದ್ದಾರಿಗಳಲ್ಲಿ ಬೆಳೆಗಳನ್ನು ಒಣಗಿಸಲು ಹಾಕುವುದು ಇಂತಹ ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬುದಕ್ಕೆ ಈ ಕರುಣಾಜನಕ ಘಟನೆ ನಿದರ್ಶನವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಭೀಕರ ಅಪಘಾತದ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

