ಕೆಎಸ್‌ಆರ್‌ಟಿಸಿ ಉದ್ಯೋಗದ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ: ಸಿಸಿಬಿ ಪೊಲೀಸರಿಂದ ಎಫ್‌ಐಆರ್ ದಾಖಲು
x

ಸಾರಿಗೆ ನೌಕರರು ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. 

ಕೆಎಸ್‌ಆರ್‌ಟಿಸಿ ಉದ್ಯೋಗದ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ: ಸಿಸಿಬಿ ಪೊಲೀಸರಿಂದ ಎಫ್‌ಐಆರ್ ದಾಖಲು

ಸರ್ಕಾರಿ ಲಾಂಛನ ಬಳಸಿ ನಕಲಿ ದಾಖಲೆ ಸೃಷ್ಟಿಸುವ ಜಾಲ ಸಕ್ರಿಯವಾಗಿದ್ದು, ಸಾರ್ವಜನಿಕರು ಇಂತಹ ಆಮಿಷಗಳಿಗೆ ಬಲಿಯಾಗದೆ ಎಚ್ಚರದಿಂದಿರಲು ಪೊಲೀಸ್ ಇಲಾಖೆ ಮನವಿ ಮಾಡಿದೆ.


Click the Play button to hear this message in audio format

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್‌ಆರ್‌ಟಿಸಿ) ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಬಂಧ ಪ್ರಸಾದ್ ಎಂಬುವರು ನೀಡಿದ ದೂರಿನ ಮೇರೆಗೆ ಮಾಗಡಿ ತಾಲೂಕಿನ ಚಿಕ್ಕತೊರೆಪಾಳ್ಯದ ನಿವಾಸಿ ರುದ್ರೇಶ್ ಎಸ್. ನಾಯಕ್ ಮತ್ತು ಬೆಂಗಳೂರಿನ ಶಶಿಭೂಷಣ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಆರೋಪಿಗಳು ಉದ್ಯೋಗ ಆಕಾಂಕ್ಷಿಗಳ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ವ್ಯವಸ್ಥಿತವಾಗಿ ನಂಬಿಸಿ ಹಣ ಲೂಟಿ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಸ್ನೇಹದ ಹೆಸರಲ್ಲಿ ಆರಂಭವಾದ ಜಾಲ

ಈ ವಂಚನೆಯ ಜಾಲವು ಸ್ನೇಹದ ಹೆಸರಿನಲ್ಲಿ ಆರಂಭವಾಗಿತ್ತು. ದೂರುದಾರ ಪ್ರಸಾದ್ ಅವರು ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾಗ ಸಹಪಾಠಿಯಾಗಿದ್ದ ರುದ್ರೇಶ್ ಎಸ್. ನಾಯಕ್ ಪರಿಚಯವಾಗಿತ್ತು. ಈತ ತಾನು ಕೆಎಸ್‌ಆರ್‌ಟಿಸಿಯ ಆಯ್ಕೆ ವಿಭಾಗದಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳಿದ್ದಲ್ಲದೆ, ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಆಣೆ ಮಾಡಿ ನಂಬಿಕೆ ಹುಟ್ಟಿಸಿದ್ದನು. ಆರಂಭದಲ್ಲಿ ಕೇವಲ 26 ಸಾವಿರ ರೂ. ನೀಡಿದರೆ ಕೆಲಸ ಖಚಿತಪಡಿಸುವುದಾಗಿ ನಂಬಿಸಿ, ಹಲವು ಆಕಾಂಕ್ಷಿಗಳಿಂದ ಹಣ ವಸೂಲಿ ಮಾಡಿದ್ದನು. ಅನುಮಾನ ಬಾರದಂತೆ ತಡೆಯಲು ನೇರವಾಗಿ ಹಣ ಪಡೆಯುವ ಬದಲು ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಸೂಚಿಸಿ, ರಾಮನಗರದ ಕರ್ನಾಟಕ ಬ್ಯಾಂಕ್ ಶಾಖೆಯ ತನ್ನ ಖಾತೆಗೆ ಸುಮಾರು 12 ಲಕ್ಷ ರೂ.ಗಳನ್ನು ಜಮೆ ಮಾಡಿಸಿಕೊಂಡಿದ್ದಾನೆ.

ನಕಲಿ ದಾಖಲೆ ಸೃಷ್ಟಿಸಿ ವಂಚನೆ

ವಂಚನೆಯ ತಂತ್ರಗಾರಿಕೆಯು ಕೇವಲ ಹಣಕ್ಕೆ ಸೀಮಿತವಾಗಿರಲಿಲ್ಲ, ಬದಲಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಕಾಂಕ್ಷಿಗಳನ್ನು ದಾರಿ ತಪ್ಪಿಸಲಾಗಿತ್ತು. ಆಯ್ಕೆ ಪಟ್ಟಿ ಸಿದ್ದವಾಗಿದೆ ಎಂದು ನಂಬಿಸಲು ಬೆಂಗಳೂರಿನ ಹೋಟೆಲ್‌ವೊಂದಕ್ಕೆ ಆಕಾಂಕ್ಷಿಗಳನ್ನು ಕರೆಸಿಕೊಂಡಿದ್ದ ರುದ್ರೇಶ್, ಕೆಎಸ್‌ಆರ್‌ಟಿಸಿಯ ಅಧಿಕೃತ ಲೆಟರ್‌ಹೆಡ್ ಮತ್ತು ಮೊಹರು ಹೊಂದಿದ್ದ ನಕಲಿ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದನು.

ಮಂಗಳೂರು ಡಿಪೋದಲ್ಲಿ ಕೆಲಸ ಸೇರಿದಂತೆ ವಿವಿಧ ಹುದ್ದೆಗಳ ಆಮಿಷವೊಡ್ಡಿ ಲಕ್ಷಾಂತರ ರೂ.ಗಳನ್ನು ನಗದು ರೂಪದಲ್ಲಿ ಪೀಕಿದ್ದನು. ಆಕಾಂಕ್ಷಿಗಳಿಗೆ ನಂಬಿಕೆ ಬರಿಸಲು ತನ್ನ ಕುಟುಂಬದ ಆಸ್ತಿ ಪತ್ರಗಳ ಮೂಲ ಪ್ರತಿಗಳನ್ನು ನೀಡಿ, ಒಂದು ವೇಳೆ ಹಣ ವಾಪಸ್ ನೀಡದಿದ್ದರೆ ಆಸ್ತಿ ನಿಮ್ಮದಾಗಲಿದೆ ಎಂಬ ಕರಾರು ಪತ್ರವನ್ನೂ ಮಾಡಿಕೊಟ್ಟು ಮೋಸದ ಜಾಲವನ್ನು ಹೆಣೆದಿದ್ದನು.

ಬೆದರಿಕೆ ಮತ್ತು ಕರಾಳ ಸತ್ಯದ ಅನಾವರಣ

ಹಣ ಕೈ ಸೇರಿದ ಮೇಲೆ ರುದ್ರೇಶ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದನು. ಹಣ ವರ್ಗಾವಣೆಗೆ ಸಹಕರಿಸಿದ್ದ ಆತನ ಗೆಳೆಯ ಶಶಿಭೂಷಣ್‌ನನ್ನು ವಿಚಾರಿಸಿದಾಗ, ಆತ ತನ್ನ ತಮ್ಮ ಪೊಲೀಸ್ ಇಲಾಖೆಯಲ್ಲಿದ್ದಾನೆ ಎಂಬ ಬೆದರಿಕೆ ಒಡ್ಡಿದ್ದನು. ದೂರುದಾರರು ರುದ್ರೇಶ್‌ನ ಸ್ವಂತ ಊರಿಗೆ ಹೋಗಿ ವಿಚಾರಿಸಿದಾಗ, ಈತ ಇದೇ ರೀತಿ ಅನೇಕರಿಗೆ ಉದ್ಯೋಗದ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿರುವ ಕರಾಳ ಸತ್ಯ ಬಯಲಿಗೆ ಬಂದಿದೆ.

ಸದ್ಯ ಸಿಸಿಬಿ ಪೊಲೀಸರು ಈ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದು, ನಕಲಿ ಲೆಟರ್‌ಹೆಡ್ ಮತ್ತು ಮೊಹರು ತಯಾರಿಕೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಹೆಚ್ಚುತ್ತಿರುವ ಉದ್ಯೋಗ ವಂಚನೆ ಪ್ರಕರಣಗಳು

ಇದೇ ರೀತಿಯ ಉದ್ಯೋಗ ವಂಚನೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕಳೆದ ವರ್ಷವಷ್ಟೇ ವಿಧಾನಸೌಧದ ಹೆಸರಿನಲ್ಲಿ ಸಚಿವಾಲಯದ ನಕಲಿ ನೇಮಕಾತಿ ಪತ್ರ ನೀಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ದೋಚಿದ್ದ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದರು. ರೈಲ್ವೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿಯಲ್ಲೂ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುವ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ.

ಇಂತಹ ಪ್ರಕರಣಗಳಲ್ಲಿ ವಂಚಕರು ಹೆಚ್ಚಾಗಿ ಸರ್ಕಾರಿ ಇಲಾಖೆಗಳ ಅಧಿಕೃತ ಲಾಂಛನಗಳನ್ನು ಬಳಸಿ ನಕಲಿ ಪತ್ರಗಳನ್ನು ಸೃಷ್ಟಿಸುತ್ತಾರೆ. ಆದ್ದರಿಂದ ಉದ್ಯೋಗ ಆಕಾಂಕ್ಷಿಗಳು ಯಾವುದೇ ಖಾಸಗಿ ವ್ಯಕ್ತಿಗಳ ಮಾತಿಗೆ ಮರುಳಾಗದೆ, ಅಧಿಕೃತ ವೆಬ್‌ಸೈಟ್‌ಗಳ ಮೂಲಕವೇ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Read More
Next Story