Koppal News|ವಸತಿ ಶಾಲೆಯಲ್ಲಿದ್ದ ಬಾಲಕಿ ಗರ್ಭಿಣಿ; ಆರೋಪಿ ಬಂಧನ
x

ವಸತಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಘಟನೆ ನಡೆದಿದೆ. 

Koppal News|ವಸತಿ ಶಾಲೆಯಲ್ಲಿದ್ದ ಬಾಲಕಿ ಗರ್ಭಿಣಿ; ಆರೋಪಿ ಬಂಧನ

ಬಾಲಕಿಯ ಆರೋಗ್ಯದಲ್ಲಿ ಏರುಪೇರಾದಾಗ ಈ ವಿಷಯ ಬೆಳಕಿಗೆ ಬಂದಿದ್ದು, ಪೋಷಕರು ಮತ್ತು ಸಾರ್ವಜನಿಕರು ವಸತಿ ಶಾಲೆಯ ಭದ್ರತೆ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯ ಆಮಿಷವೊಡ್ಡಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಹಿನ್ನೆಲೆಯಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ದೈಹಿಕ ಸಂಪರ್ಕ ಬೆಳೆಸಿದ ಆರೋಪಿಯು, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಕಳೆದ ಫೆಬ್ರವರಿ 19ರಂದು ಬಾಲಕಿಗೆ ಇದ್ದಕ್ಕಿದ್ದಂತೆ ರಕ್ತಸ್ರಾವ ಕಾಣಿಸಿಕೊಂಡಾಗ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಈ ಸಂದರ್ಭದಲ್ಲಿ ಬಾಲಕಿ ಗರ್ಭಿಣಿಯಾಗಿರುವ ವಿಷಯ ಬಹಿರಂಗವಾಗಿದೆ. ತಕ್ಷಣವೇ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಸತಿ ಶಾಲೆಯ ಆವರಣದಲ್ಲಿ ಇಂತಹ ಕೃತ್ಯ ನಡೆಯುತ್ತಿದ್ದರೂ ಗಮನಿಸದ ಮತ್ತು ವಿಷಯವನ್ನು ಮುಚ್ಚಿಡಲು ಯತ್ನಿಸಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪ್ರಾಂಶುಪಾಲರನ್ನು ತಕ್ಷಣವೇ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಕಳೆದ ನವೆಂಬರ್‌ನಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಾಲೆಯೊಂದರ ವಸತಿ ನಿಲಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯೋರ್ವಳು ಗಂಡು ಮಗುವಿಗೆ ಜನ್ಮ ನೀಡಿದ್ದ ಘಟನೆ ನಡೆದಿತ್ತು. ಶಾಲಾ ಹಾಸ್ಟೆಲ್‌ನಲ್ಲಿ ಇದ್ದ ವಿದ್ಯಾರ್ಥಿನಿಗೆ ದಿಢೀರ್ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಆಕೆಯನ್ನು ತಕ್ಷಣವೇ ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯಕೀಯ ತಪಾಸಣೆ ವೇಳೆ ಆಕೆ ಗರ್ಭಿಣಿ ಎಂಬುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಆ ಅಪ್ರಾಪ್ತ ಬಾಲಕಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಬಾಲಕಿಯ ಈ ಪರಿಸ್ಥಿತಿಗೆ ಕಾರಣನಾದ ಯುವಕನನ್ನು ಶೀಘ್ರವಾಗಿ ಬಂಧಿಸಿ, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ವಸತಿ ನಿಲಯದಲ್ಲಿ ಬಾಲಕಿ ಒಂಬತ್ತು ತಿಂಗಳು ಗರ್ಭಿಣಿಯಾಗಿದ್ದರೂ, ಈ ವಿಷಯ ವಾರ್ಡನ್ ಅಥವಾ ಅಲ್ಲಿನ ಸಿಬ್ಬಂದಿಯ ಗಮನಕ್ಕೆ ಬಾರದೇ ಇರುವುದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

Read More
Next Story