
ಕೊಲ್ಲಾಪುರದ ಚಂದಗಡದಲ್ಲಿ ಕೋಳಿ ಫಾರ್ಮ್ ಶೆಡ್‌ನಲ್ಲಿ ನಡೆಯುತ್ತಿದ್ದ ಮೆಫೆಡ್ರೋನ್ ತಯಾರಿಕಾ ಘಟಕ ಪತ್ತೆಯಾಗಿದೆ.
ಕೋಳಿ ಫಾರ್ಮ್ ಹೆಸರಲ್ಲಿ ಡ್ರಗ್ಸ್ ಫ್ಯಾಕ್ಟರಿ- 1.13 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ
ಕೊಲ್ಲಾಪುರದ ಚಂದಗಡದಲ್ಲಿ ಕೋಳಿ ಫಾರ್ಮ್ ಶೆಡ್‌ನಲ್ಲಿ ನಡೆಯುತ್ತಿದ್ದ ಮೆಫೆಡ್ರೋನ್ ತಯಾರಿಕಾ ಘಟಕ ಪತ್ತೆಯಾಗಿದೆ. 208 ಗ್ರಾಂ ಡ್ರಗ್ಸ್ ಸೇರಿ 1.13 ಕೋಟಿ ರೂ. ಮೌಲ್ಯದ ವಸ್ತು ಜಪ್ತಿಯಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನಲ್ಲಿ ಕೋಳಿ ಫಾರ್ಮ್ ಹೆಸರಿನಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಬೆಳಗಾವಿ ಜಿಲ್ಲೆಯ ಮೂಲದ ಇಬ್ಬರು ಸೇರಿದ್ದಾರೆ.
ಚಂದಗಡ ತಾಲೂಕಿನ ರಾಜಗೋಳಿ ಗ್ರಾಮದಲ್ಲಿ ಕೋಳಿ ಫಾರ್ಮ್ ಹೆಸರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಮಹಾರಾಷ್ಟ್ರ ಮಾದಕವಸ್ತು ವಿರೋಧಿ ಟಾಸ್ಕ್ ಫೋರ್ಸ್ ಅಧಿಕಾರಿಗಳು ಘಟಕದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿ ತಯಾರಿಸಲಾಗುತ್ತಿದ್ದ ಎಂಡಿಎಂಎ ಮಾದರಿಯ ಮಾದಕ ವಸ್ತುಗಳನ್ನು ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕಕ್ಕೆ ಪೂರೈಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
1.13 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ
ದಾಳಿ ವೇಳೆ 208 ಗ್ರಾಂ ಮಾದಕ ವಸ್ತು, ಡ್ರಗ್ಸ್ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳು ಹಾಗೂ ಯಂತ್ರೋಪಕರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 1.13 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಬೆಳಗಾವಿಯಿಂದ ಕೇವಲ 20 ಕಿ.ಮೀ ದೂರ
ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾದ ರಾಜಗೋಳಿ ಗ್ರಾಮವು ಬೆಳಗಾವಿ ಜಿಲ್ಲೆಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದೊಂದಿಗೆ ಆರೋಪಿಗಳ ಸಂಪರ್ಕ ಹಾಗೂ ಡ್ರಗ್ಸ್ ಪೂರೈಕೆ ಜಾಲದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಏಳು ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಈ ಅಕ್ರಮ ಡ್ರಗ್ಸ್ ತಯಾರಿಕಾ ಘಟಕದ ಹಿಂದೆ ಮತ್ತಷ್ಟು ಮಂದಿ ಇದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

