ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ!
x

ಕೊಡಗಿನ ಕುಟ್ಟಾ ಸಮೀಪದ ಹೋಮ್‌ಸ್ಟೇನಲ್ಲಿ ಅಮೆರಿಕ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದ್ದು, ಅಡುಗೆಯವ ಹಾಗೂ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ!

ಕೊಡಗಿನ ಕುಟ್ಟಾ ಸಮೀಪದ ಹೋಮ್‌ ಸ್ಟೇನಲ್ಲಿ ಅಮೆರಿಕ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದ್ದು, ಅಡುಗೆ ಸಿಬ್ಬಂದಿ ಹಾಗೂ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾಡಳಿತವು ಹೋಮ್‌ ಸ್ಟೇ ಪರವಾನಗಿ ರದ್ದುಗೊಳಿಸಿದೆ.


Click the Play button to hear this message in audio format

ಕೊಡಗು ಜಿಲ್ಲೆಯ ಕುಟ್ಟಾ ಗ್ರಾಮದ ಹೋಂ ಸ್ಟೇನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿರುವ ಅಮೆರಿಕದ ಮಹಿಳೆಗೆ ಅಮಲು ಪದಾರ್ಥ ಬೆರೆಸಿದ ಪಾನೀಯ ನೀಡಿದ ಬಳಿಕ ಹಲ್ಲೆ ನಡೆಸಲಾಗಿತ್ತು ಎಂಬ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.

ಮೂರು ದಿನಗಳ ಕಾಲ ಹೋಂ ಸ್ಟೇ ವೈ-ಫೈ ಸಂಪರ್ಕ ಸ್ಥಗಿತಗೊಂಡಿದ್ದರಿಂದ ತಕ್ಷಣವೇ ಸಹಾಯ ಪಡೆಯಲು ಸಾಧ್ಯವಾಗಲಿಲ್ಲ. ತನಗೆ ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿದ್ದರು ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಹೋಂ ಸ್ಟೇ ಅಡುಗೆ ಸಿಬ್ಬಂದಿಯಾದ ಬ್ರಿಜೇಶ್‌ ಕುಮಾರ್ ಅಮಲು ಪದಾರ್ಥ ಬೆರೆಸಿದ ಪಾನೀಯ ನೀಡಿ ಹಲ್ಲೆ ನಡೆಸಿದ ಎಂದು ವಾಷಿಂಗ್ಟನ್ ಮೂಲದ ಮಹಿಳೆ ದೂರಿನಲ್ಲಿ ಆರೋಪಿಸಿದ್ದು, ದೂರಿನನ್ವಯ ಮುಖ್ಯ ಆರೋಪಿ ಬ್ರಿಜೇಶ್ ಮತ್ತು ಕೃತ್ಯ ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಹೋಮ್‌ ಸ್ಟೇ ಮಾಲೀಕ ವಿಶಾಲ್ ಪೊನ್ನಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಮೇ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆಯ ಹಿನ್ನೆಲೆ

ಸಂತ್ರಸ್ತ ಮಹಿಳೆಯು ಏ.12 ರಂದು ಹೋಮ್‌ಸ್ಟೇಗೆ ಎರಡನೇ ಬಾರಿಗೆ ಭೇಟಿ ನೀಡಿದ್ದರು. ಅಡುಗೆ ಸಿಬ್ಬಂದಿ ನೀಡಿದ ಪಾನೀಯ ಕುಡಿದು ತಾನು ಅರೆಪ್ರಜ್ಞಾವಸ್ಥೆಗೆ ಜಾರಿದಾಗ ಈ ಕೃತ್ಯ ನಡೆಸಲಾಗಿದೆ. ಘಟನೆಯ ನಂತರ ಸುಮಾರು ಮೂರು ದಿನಗಳ ಕಾಲ ಹೋಮ್‌ಸ್ಟೇಯ ವೈ-ಫೈ ಸಂಪರ್ಕ ಕಡಿತಗೊಂಡಿದ್ದರಿಂದ ತಕ್ಷಣವೇ ಯಾರಿಗೂ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.

ಏ.17 ರಂದು ಮೈಸೂರಿಗೆ ತೆರಳಿ ಖಾಸಗಿ ಆಸ್ಪತ್ರೆಗೆ ದಾಖಲಾದ ಅವರು, ಬಳಿಕ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಂಪರ್ಕಿಸಿದ್ದಾರೆ. ರಾಯಭಾರ ಕಚೇರಿಯ ಮಾಹಿತಿ ಮೇರೆಗೆ ಗೃಹ ಇಲಾಖೆ ಎಚ್ಚೆತ್ತುಕೊಂಡು ಏ.19 ರಂದು ಎಫ್‌ಐಆರ್ ದಾಖಲಿಸಿದೆ.

ಬೆಂಗಳೂರಿನ ಉನ್ನತ ಪೊಲೀಸ್ ಅಧಿಕಾರಿಗಳ ಪ್ರಕಾರ, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಪ್ರಸ್ತುತ ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಡಿಜಿಟಲ್ ಪುರಾವೆಗಳ ಸಂಗ್ರಹ ನಡೆಯುತ್ತಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೊಡಗು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು, ಹೋಮ್‌ಸ್ಟೇ ಪರವಾನಗಿ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ. ಸಂತ್ರಸ್ತೆಯ ಸುರಕ್ಷತೆ ಮತ್ತು ಪ್ರವಾಸೋದ್ಯಮದ ಘನತೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಸಿ.ಟಿ. ರವಿ ಆಕ್ರೋಶ

ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ತ್ವರಿತ ಕ್ರಮ ಕೈಗೊಳ್ಳಲಾಗಿದೆ. ಹೋಮ್‌ ಸ್ಟೇಗಳ ಭದ್ರತಾ ನಿಯಮಗಳು ಮತ್ತು ಎಸ್‌ಒಪಿಗಳ ಉಲ್ಲಂಘನೆ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇತ್ತ ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಭಾರತದ 'ಅತಿಥಿ ದೇವೋ ಭವ' ಸಂಸ್ಕೃತಿಗೆ ಕಪ್ಪುಚುಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋಮ್‌ಸ್ಟೇ ಮಾಲೀಕ ವಿಶಾಲ್ ಪರ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಘಟನೆ ನಡೆದ ನಂತರವೂ ಸಂತ್ರಸ್ತೆಯು ಸಹಜವಾಗಿಯೇ ಇದ್ದರು. ಅವರಿಗೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಮಾಲೀಕರೇ ನೆರವಾಗಿದ್ದರು ಎಂದು ವಾದಿಸಿದ್ದಾರೆ. ಆರೋಪಿಗಳು ಈಗಾಗಲೇ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಬಾಕಿ ಇದೆ.

Read More
Next Story