
ನಂದಿನಿ ಉತ್ಪನ್ನದ ವಿರುದ್ಧ ಅಪಪ್ರಚಾರ: ವೈದ್ಯೆ ವಿರುದ್ಧ ಕೆಎಂಎಫ್‌ನಿಂದ ಕ್ರಿಮಿನಲ್ ಕೇಸ್
ಎಫ್‌ಎಸ್‌ಎಸ್‌ಎಐ (FSSAI) ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಸಂಸ್ಥೆಯ ಘನತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಈ ಕಾನೂನು ಕ್ರಮ ಜರುಗಿಸಲಾಗಿದೆ.
ಕರ್ನಾಟಕದ ರೈತರ ಜೀವನಾಡಿ ಹಾಗೂ ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ಆಗಿರುವ 'ನಂದಿನಿ' ಉತ್ಪನ್ನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ, ವೈದ್ಯೆ ಡಾ. ಶರಣ್ಯ ಅವರ ವಿರುದ್ಧ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (KMF) ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಡಾ. ಶರಣ್ಯ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ನಂದಿನಿ ಹಾಲಿನ ಉತ್ಪನ್ನಗಳಲ್ಲಿ ಅಪಾಯಕಾರಿ ರಾಸಾಯನಿಕಗಳಿವೆ ಮತ್ತು ಅವು ಆರೋಗ್ಯಕ್ಕೆ ಹಾನಿಕಾರಕ ಎಂಬರ್ಥದ ಆಧಾರರಹಿತ ಹೇಳಿಕೆಗಳನ್ನು ನೀಡಿದ್ದರು. ಲಕ್ಷಾಂತರ ಗ್ರಾಹಕರು ನಂಬಿರುವ ಬ್ರ್ಯಾಂಡ್ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಇಂತಹ ಗಂಭೀರ ಹೇಳಿಕೆ ನೀಡಿರುವುದು ಸಾರ್ವಜನಿಕರಲ್ಲಿ ಭಾರೀ ಗೊಂದಲ ಮೂಡಿಸಿತ್ತು.
ಕೆಎಂಎಫ್ ಅಧಿಕಾರಿಗಳ ಆಕ್ರೋಶ
"ನಂದಿನಿ ಉತ್ಪನ್ನಗಳು ದೇಶದ ಅತ್ಯುನ್ನತ ಆಹಾರ ಸುರಕ್ಷತಾ ಮಾನದಂಡಗಳನ್ನು (FSSAI) ಕಟ್ಟುನಿಟ್ಟಾಗಿ ಪಾಲಿಸುತ್ತವೆ. ವೈದ್ಯಕೀಯ ವೃತ್ತಿಯಲ್ಲಿರುವವರೇ ಇಷ್ಟು ಬೇಜವಾಬ್ದಾರಿಯಿಂದ ಮಾತನಾಡಿರುವುದು ಸಂಸ್ಥೆಯ ಘನತೆಗೆ ಧಕ್ಕೆ ತಂದಿದೆ," ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅಪಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೆಎಂಎಫ್ ಎರಡು ದಿನಗಳ ಹಿಂದಷ್ಟೇ ಎಚ್ಚರಿಕೆ ನೀಡಿತ್ತು.
ದೂರಿನಲ್ಲಿರುವ ಪ್ರಮುಖ ಅಂಶಗಳು
ಡಾ. ಶರಣ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಕೆಳಗಿನ ಆರೋಪಗಳನ್ನು ಮಾಡಿದ್ದರು ಎನ್ನಲಾಗಿದೆ. ನಂದಿನಿ ಉತ್ಪನ್ನಗಳಾದ ಕ್ರೀಮ್ ಬನ್, ಸ್ಟ್ರಾಬೆರಿ ಫ್ಲೇವರ್ಡ್ ಮಿಲ್ಕ್ ಮತ್ತು 'ಸ್ಟಾರ್' ಪಾನೀಯಗಳು ಟಾಕ್ಸಿಕ್ ಹಾಗೂ ಕೆಮಿಕಲ್‌ಗಳಿಂದ ಕೂಡಿದ್ದು, ಇವುಗಳ ಸೇವನೆಯಿಂದ 'ಆಟೋಇಮ್ಯೂನ್' ಕಾಯಿಲೆಗಳು ಬರುವ ಸಾಧ್ಯತೆಯಿದೆ. ದೀರ್ಘಾವಧಿಯಲ್ಲಿ ಇವುಗಳನ್ನು ಸೇವಿಸಿದರೆ ಭವಿಷ್ಯದಲ್ಲಿ ಕ್ಯಾನ್ಸರ್ ಬರುವುದು ಖಂಡಿತ. ಸ್ಟ್ರಾಬೆರಿ ಮಿಲ್ಕ್‌ನಲ್ಲಿ ನೈಸರ್ಗಿಕ ಹಣ್ಣಿನ ಅಂಶವಿಲ್ಲ, ಬದಲಾಗಿ ಕೃತಕ ಬಣ್ಣ ಹಾಗೂ ಸಂರಕ್ಷಕಗಳನ್ನು ಬಳಸಲಾಗಿದೆ ಎಂದು ಹೇಳಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಕೆಎಂಎಫ್, "ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆ. ಆದ್ದರಿಂದ ಸುಳ್ಳು ಮಾಹಿತಿ ನೀಡಿ ಸಂಸ್ಥೆಗೆ ಮಾನಹಾನಿ ಉಂಟುಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು," ಎಂದು ದೂರಿನಲ್ಲಿ ವಿನಂತಿಸಿದೆ

