Accused Siya Goyals lawyer appointment dispute; Rs 10 crore defamation notice!
x

ಮೃತ ಕೇತನ್‌ ಅಗರ್‌ವಾಲ್‌ ಹಾಗೂ ಕೊಲೆ ಆರೋಪಿ ಸಿಯಾ ಗೋಯಲ್‌

ಆರೋಪಿ ಸಿಯಾ ಗೋಯಲ್ ವಕೀಲರ ನೇಮಕ ವಿವಾದ; 10 ಕೋಟಿ ರೂ. ಮಾನನಷ್ಟ ನೋಟಿಸ್

ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಸ್ವತಃ ಹೇಳಿಕೆ ನೀಡಿದ ಸಿಯಾ ಗೋಯಲ್ "ವಕೀಲ ವಿಪುಲ್ ದುಶಿಂಗ್ ಅವರು ನನ್ನ ಪರವಾಗಿ ಮಾತನಾಡುತ್ತಿದ್ದಾರೆ" ಎಂದು ಸ್ಪಷ್ಟಪಡಿಸಿದರು.


Click the Play button to hear this message in audio format

ಇಡೀ ಮಹಾರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ, ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುವ ಕಾನೂನು ಸಲಹೆಗಾರರು ಯಾರು ಎಂಬ ಬಗ್ಗೆ ಹೊಸದೊಂದು ತೀವ್ರ ವಿವಾದ ಭುಗಿಲೆದ್ದಿದೆ.

10 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ಸಿಯಾ ಗೋಯಲ್ ಅವರ ಸಹೋದರ ಸಾಹಿಲ್ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ, "ವಕೀಲ ಆಶುತೋಷ್ ಶ್ರೀವಾಸ್ತವ ಅವರನ್ನು ನಮ್ಮ ಕುಟುಂಬ ನೇಮಿಸಿಲ್ಲ. ಸಿಯಾ ಅವರಿಂದ ಕೆಲವು ಕಾನೂನು ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳಲು ಶ್ರೀವಾಸ್ತವ ಅವರು ವಂಚನೆ ಮಾಡಿರಬಹುದು" ಎಂದು ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆಯಿಂದ ಕೆರಳಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಆಶುತೋಷ್ ಶ್ರೀವಾಸ್ತವ, ತಮ್ಮ ವೃತ್ತಿಪರ ಖ್ಯಾತಿಗೆ ಧಕ್ಕೆ ತಂದಿರುವುದಾಗಿ ಆರೋಪಿಸಿ ಸಾಹಿಲ್ ಗೋಯಲ್ ವಿರುದ್ಧ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ ಮಾಡಿದ್ದಾರೆ.

ಆರೋಪ ತಳ್ಳಿಹಾಕಿದ ವಕೀಲರು

'ಬಾರ್ ಅಂಡ್ ಬೆಂಚ್' ವರದಿಯ ಪ್ರಕಾರ, ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ನಿರಾಕರಿಸಿರುವ ಶ್ರೀವಾಸ್ತವ, ತಮ್ಮ ತಂಡವು ಈ ಹಿಂದೆ ಸಿಯಾ ಅವರನ್ನು ಭೇಟಿಯಾಗಿತ್ತು ಮತ್ತು ಅವರು ತಮ್ಮನ್ನು ಪ್ರತಿನಿಧಿಸಲು ಒಪ್ಪಿಗೆ ಸೂಚಿಸಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ. "ಅವರು ಸುಳ್ಳು ಹೇಳುತ್ತಿದ್ದಾರೆ ಮತ್ತು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆರೋಪಿ ಸಿಯಾ ಗೋಯಲ್ ಅವರು ಎಲ್ಲಾ ದಾಖಲೆಗಳಿಗೆ ಸಹಿ ಮಾಡಿ ಅಧಿಕಾರ ನೀಡಿದ್ದಾರೆ. ಆ ವಕಾಲತ್‌ನ್ನು ನ್ಯಾಯಾಲಯದಲ್ಲೂ ಸಲ್ಲಿಸಲಾಗಿದೆ. ಸಿಯಾ ಒಬ್ಬ ಮೇಜರ್ (ವಯಸ್ಕಳು), ತನಗಾಗಿ ವಕೀಲರನ್ನು ನೇಮಿಸಿಕೊಳ್ಳುವ ಸಂಪೂರ್ಣ ಹಕ್ಕು ಅವರಿಗಿದೆ. ಸಾಹಿಲ್ ಅವರ ಬೇಜವಾಬ್ದಾರಿ ಹೇಳಿಕೆಯು ಕಾನೂನು ಸಮುದಾಯದ ಮೇಲಿನ ತಪ್ಪು ದಾಳಿಯಾಗಿದೆ" ಎಂದು ಶ್ರೀವಾಸ್ತವ ಆಕ್ರೋಶ ಹೊರಹಾಕಿದ್ದಾರೆ.

ನ್ಯಾಯಾಲಯದಲ್ಲಿ ವಕೀಲರ ಬದಲಾವಣೆ!

ಸೋಮವಾರ ವಡ್ಗಾಂವ್ ಮಾವಲ್ ನ್ಯಾಯಾಲಯದಲ್ಲಿ ಈ ವಿವಾದ ಅಧಿಕೃತವಾಗಿ ಮುನ್ನೆಲೆಗೆ ಬಂದಿತು. ವಕೀಲ ಶ್ರೀವಾಸ್ತವ ಅವರು ಸಿಯಾ ಅವರ ಸಹಿ ಇರುವ ವಕಾಲತ್‌ನಾಮವನ್ನು ಸಲ್ಲಿಸಿ, ತಾವು ಸಿಯಾ ಪರ ವಾದ ಮಂಡಿಸುವುದಾಗಿ ತಿಳಿಸಿದರು. ಆದರೆ, ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಸ್ವತಃ ಹೇಳಿಕೆ ನೀಡಿದ ಸಿಯಾ ಗೋಯಲ್ "ವಕೀಲ ವಿಪುಲ್ ದುಶಿಂಗ್ ಅವರು ನನ್ನ ಪರವಾಗಿ ಮಾತನಾಡುತ್ತಿದ್ದಾರೆ" ಎಂದು ಸ್ಪಷ್ಟಪಡಿಸಿದರು. ಸಿಯಾ ಕುಟುಂಬಸ್ಥರು ಸಹ ದುಶಿಂಗ್ ಅವರನ್ನೇ ಅಧಿಕೃತವಾಗಿ ವಕೀಲರನ್ನಾಗಿ ನೇಮಿಸಿರುವುದಾಗಿ ಪುನರುಚ್ಚರಿಸಿದ್ದಾರೆ. ಶ್ರೀವಾಸ್ತವ ಅವರ ನೋಟಿಸ್‌ಗೆ ಸಾಹಿಲ್ ಗೋಯಲ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತನಿಖೆ ತೀವ್ರಗೊಳಿಸಿದ ಪೊಲೀಸರು

ಇನ್ನೊಂದೆಡೆ, ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೇತನ್ ಅಗರ್ವಾಲ್‌ನನ್ನು ಕಣಿವೆಗೆ ತಳ್ಳಿ ಕೊಲೆ ಮಾಡಿದ ಪುಣೆಯ ಲೋಹಗಡ್ ಕೋಟೆಯ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಿರುವುದಾಗಿ ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ನೀಡಿದ ಮಾಹಿತಿಯೇನು?

ಆರೋಪಿಗಳು ಮೊಬೈಲ್‌ನಿಂದ ಡಿಲೀಟ್ ಮಾಡಿರುವ ಡಿಜಿಟಲ್ ಸಾಕ್ಷ್ಯಗಳನ್ನು ಮರುಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಚೌಧರಿ ಜೊತೆಗೆ ಘಟನಾ ಸ್ಥಳದಲ್ಲಿ ಕೊಲೆಯ ಸನ್ನಿವೇಶವನ್ನು ಮರುಸೃಷ್ಟಿಸಿ ಪರಿಶೀಲಿಸಲಾಗುತ್ತಿದೆ. ಕೋಟೆಯ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಅಂದು ಆರೋಪಿಗಳ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ. ಪ್ರವಾಸದ ಸಮಯದಲ್ಲಿ ಸಿಯಾ ಎಸೆದಿದ್ದಾರೆ ಎನ್ನಲಾದ ಕೇತನ್ ಅಗರ್ವಾಲ್ ಅವರ ಕಾಣೆಯಾದ ಪಾಸ್‌ಪೋರ್ಟ್ ಪತ್ತೆ ಹಚ್ಚಬೇಕಿದೆ. ಹೊಸದಾಗಿ ಪತ್ತೆಯಾಗಿರುವ ಸಾಕ್ಷಿಗಳೊಂದಿಗೆ ಇಬ್ಬರೂ ಆರೋಪಿಗಳನ್ನು ಮುಖಾಮುಖಿ ತನಿಖೆಗೆ ಒಳಪಡಿಸಲು ಪೊಲೀಸರು ಸಜ್ಜಾಗಿದ್ದಾರೆ.

ಪ್ರಕರಣದ ಹಿನ್ನೆಲೆ

ಪೊಲೀಸ್ ತನಿಖೆಯ ಪ್ರಕಾರ, 20 ವರ್ಷದ ಸಿಯಾ ಗೋಯಲ್‌ಗೆ ಕೇತನ್ ಅಗರ್ವಾಲ್ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಮದುವೆ ರದ್ದುಗೊಳಿಸಿದರೆ ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಹೆದರಿದ ಸಿಯಾ, ತನ್ನ 22 ವರ್ಷದ ಗೆಳೆಯ ಚೇತನ್ ಚೌಧರಿ ಜೊತೆ ಸೇರಿ ಕೇತನ್‌ನನ್ನು ಮುಗಿಸಲು ಸಂಚು ರೂಪಿಸಿದ್ದಳು. ಟ್ರೆಕ್ಕಿಂಗ್ ನೆಪದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್‌ನನ್ನು ಲೋಹಗಡ್ ಕೋಟೆಗೆ ಕರೆದೊಯ್ದು, ಅಲ್ಲಿನ ಕಡಿದಾದ ಬಂಡೆಯಿಂದ ಕೆಳಗೆ ತಳ್ಳಿ ಕೊಲೆ ಮಾಡಿದ ಆರೋಪದಡಿ ಇಬ್ಬರನ್ನೂ ಬಂಧಿಸಲಾಗಿದೆ.

Read More
Next Story