ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳದ ಯುವತಿ ನಾಪತ್ತೆ: ತೀವ್ರಗೊಂಡ ಶೋಧ
x

ಯುವತಿ ಹಿಂತಿರುಗದಿರುವುದನ್ನು ಗಮನಿಸಿದ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳದ ಯುವತಿ ನಾಪತ್ತೆ: ತೀವ್ರಗೊಂಡ ಶೋಧ

ಯುವತಿ ಹಿಂತಿರುಗದಿರುವುದನ್ನು ಗಮನಿಸಿದ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


Click the Play button to hear this message in audio format

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ (ಟ್ರೆಕ್ಕಿಂಗ್) ತೆರಳಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ (36) ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಘಟನೆ ನಡೆದು ಹಲವು ಗಂಟೆಗಳು ಕಳೆದರೂ ಯುವತಿಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಯುವತಿಯ ಪತ್ತೆಗಾಗಿ ಅರಣ್ಯ ಇಲಾಖೆ, ಪೊಲೀಸ್ ಹಾಗೂ ಸ್ಥಳೀಯರನ್ನೊಳಗೊಂಡ ತಂಡಗಳು ಶ್ವಾನದಳ ಮತ್ತು ಡ್ರೋನ್ ಬಳಸಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ.

ಕೇರಳ ವಾಸಿಯಾಗಿರುವ ಶರಣ್ಯ ವೃತ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ಏಕಾಂಗಿಯಾಗಿ ಕೊಡಗು ಪ್ರವಾಸ ಕೈಗೊಂಡಿದ್ದ ಇವರು, ಕಕ್ಕಬ್ಬೆ ಸಮೀಪದ ಯವಕಪಾಡಿ ಗ್ರಾಮದ ಕಬ್ಬಿನಕಾಡಿನ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಆನ್‌ಲೈನ್ ಮೂಲಕ ಟ್ರೆಕ್ಕಿಂಗ್‌ಗೆ ಬುಕಿಂಗ್ ಮಾಡಿದ್ದ ಅವರು ಬುಧವಾರ ಬೆಳಿಗ್ಗೆ ಚಾರಣಕ್ಕೆ ತೆರಳಿದ್ದರು. ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿರುವ ಕಾರಣ, ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಶರಣ್ಯ ಅವರನ್ನು ಇತರ ಪ್ರವಾಸಿಗರ ತಂಡದೊಂದಿಗೆ ಕಳುಹಿಸಿದ್ದರು. ಸಂಜೆ ಇತರ ಪ್ರವಾಸಿಗರು ಮರಳಿದರೂ ಶರಣ್ಯ ಮಾತ್ರ ವಾಪಸಾಗಿರಲಿಲ್ಲ. ದಾರಿ ತಪ್ಪಿರುವ ಬಗ್ಗೆ ಅವರು ತಾವು ತಂಗಿದ್ದ ಹೋಂ ಸ್ಟೇ ಮಾಲೀಕರಿಗೆ ಕರೆ ಮಾಡಿ ತಿಳಿಸಿದ್ದರು ಎನ್ನಲಾಗಿದ್ದು, ಆ ಬಳಿಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ.

ಬಿರುಸಿನ ಶೋಧ ಕಾರ್ಯಾಚರಣೆ

ಯುವತಿ ಹಿಂತಿರುಗದಿರುವುದನ್ನು ಗಮನಿಸಿದ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಡಗು ಎಸ್‌ಪಿ ಬಿಂದು ಮಣಿ ಹಾಗೂ ಡಿಎಫ್‌ಒ ಅಭಿಷೇಕ್ ಅವರ ನೇತೃತ್ವದಲ್ಲಿ 5 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. 60ಕ್ಕೂ ಹೆಚ್ಚು ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ, ಶ್ವಾನದಳ ಹಾಗೂ ಡ್ರೋನ್ ಕ್ಯಾಮೆರಾಗಳ ಮೂಲಕ ದಟ್ಟ ಕಾಡಿನಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕಡಿದಾದ ಹಾದಿ, ಮಳೆಮೋಡ ಹಾಗೂ ಕಾಡಾನೆಗಳ ಭೀತಿಯ ನಡುವೆಯೂ ಕಾರ್ಯಾಚರಣೆ ಮುಂದುವರಿದಿದೆ. ಯುವತಿಯ ಸಹೋದರ ಶ್ಯಾಮ್ ಮಡಿಕೇರಿಗೆ ಆಗಮಿಸಿದ್ದು, ಕುಟುಂಬಸ್ಥರು ಆತಂಕದಲ್ಲಿದ್ದಾರೆ.

ದೇವರ ಮೊರೆ ಹೋದ ಸ್ಥಳೀಯರು

ನಾಪತ್ತೆಯಾಗಿರುವ ಶರಣ್ಯ ಸುರಕ್ಷಿತವಾಗಿ ಮರಳಲಿ ಎಂದು ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಸ್ಥಳೀಯ ಕುಡಿಯ ಜನಾಂಗದವರು ತಮ್ಮ ಆರಾಧ್ಯ ದೈವ 'ಮಲೆ ತಮ್ಮಚ್ಚ' ದೇವರಿಗೆ ವಿಶೇಷ ಹರಕೆ ಹೊತ್ತಿದ್ದಾರೆ. ತಡಿಯಂಡಮೋಳ್ ಬೆಟ್ಟವು ದಾರಿ ತಪ್ಪುವಂತಹ ಕಠಿಣ ಮಾರ್ಗವನ್ನು ಹೊಂದಿಲ್ಲದಿದ್ದರೂ, ಯುವತಿ ದಿಢೀರ್ ನಾಪತ್ತೆಯಾಗಿರುವುದು ಸ್ಥಳೀಯರು ಹಾಗೂ ಅಧಿಕಾರಿಗಳಲ್ಲಿ ಆತಂಕವನ್ನು ಸೃಷ್ಟಿಸಿದೆ.

Read More
Next Story