
Digital arrest| 'ಡಿಜಿಟಲ್ ಅರೆಸ್ಟ್' ಹಾವಳಿ: ಕೇವಲ 59 ದಿನಗಳಲ್ಲಿ 11.6 ಕೋಟಿ ರೂ. ದೋಚಿದ ಸೈಬರ್ ಖದೀಮರು!
Cyber Arrest| ಈ ವರ್ಷದ ಮೊದಲ 59 ದಿನಗಳಲ್ಲೇ ನಕಲಿ ತನಿಖಾಧಿಕಾರಿಗಳ ಬೆದರಿಕೆಗೆ ಹೆದರಿ ಸಾರ್ವಜನಿಕರು ಬರೋಬ್ಬರಿ 11.6 ಕೋಟಿ ರೂ. ಕಳೆದುಕೊಂಡಿದ್ದಾರೆ. ಕಡಿಮೆ ಜನರನ್ನು ಗುರಿಯಾಗಿಸಿ ಬೃಹತ್ ಮೊತ್ತ ದೋಚಲಾಗುತ್ತಿದೆ.
ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರತಿದಿನ ಸರಾಸರಿ 18 ರಿಂದ 20 ಲಕ್ಷ ರೂಪಾಯಿಗಳಷ್ಟು ಹಣ ವಂಚಕರ ಪಾಲಾಗುತ್ತಿದ್ದು, ಈ ಬಗ್ಗೆ ಸೈಬರ್ ಠಾಣೆಗಳಲ್ಲಿ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ನಾಲ್ಕಂಕಿ ದಾಟುತ್ತಿದೆ.
ಈ ಬಗ್ಗೆ ಇತ್ತೀಚೆಗೆ ಬಿಡುಗಡೆಯಾಗಿರುವ ಅಂಕಿ-ಅಂಶಗಳು ಆಘಾತಕಾರಿ ಆಗಿವೆ. 2026ರ ಮೊದಲ 59 ದಿನಗಳಲ್ಲಿಯೇ ರಾಜ್ಯದ ಜನರು ಬರೋಬ್ಬರಿ 11.6 ಕೋಟಿ ರೂಪಾಯಿಗಳನ್ನು ಡಿಜಿಟಲ್ ವಂಚನೆ ಹೆಸರಿನಲ್ಲಿ ಕಳೆದುಕೊಂಡಿದ್ದಾರೆ. ಇದರಲ್ಲಿ ಈವರೆಗೆ ಕೇವಲ 25.2 ಲಕ್ಷ ರೂಪಾಯಿ (ಶೇ. 2.2 ರಷ್ಟು) ಮಾತ್ರ ವಸೂಲಿಯಾಗಿದೆ. ಸೈಬರ್ ಅಪರಾಧಿಗಳು ಪೊಲೀಸರ ಕಾರ್ಯಾಚರಣೆಗೂ ಮೀರಿದ ವೇಗದಲ್ಲಿ ತಮ್ಮ ಜಾಲವನ್ನು ವಿಸ್ತರಿಸುತ್ತಿದ್ದಾರೆ ಎಂಬುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.
ಯಾವಾಗ ಎಷ್ಟೆಷ್ಟು ಪ್ರಕರಣ?
2023ರ ಜನವರಿಯಿಂದ 2026ರ ಫೆಬ್ರವರಿವರೆಗಿನ ಅವಧಿಯಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳಿಂದ ವಂಚಕರು ಒಟ್ಟಾರೆ 468.6 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. 2026ರ ಮಾರ್ಚ್ ತಿಂಗಳ ಅಧಿಕೃತ ಅಂಕಿ-ಅಂಶಗಳು ಇನ್ನೂ ಲಭ್ಯವಾಗಿಲ್ಲವಾದರೂ, ದಿನನಿತ್ಯ ದಾಖಲಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಈ ವರ್ಷದ ಅಂತ್ಯದ ವೇಳೆಗೆ ನಷ್ಟದ ಪ್ರಮಾಣ ನಿರೀಕ್ಷೆಗೂ ಮೀರಿ ಹೆಚ್ಚಾಗುವ ಸಾಧ್ಯತೆಯಿದೆ. ಮಾರ್ಚ್ 8ರಂದು 94 ವರ್ಷದ ಹಿರಿಯ ಸಂಶೋಧಕರೊಬ್ಬರು ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾಗಿ ಬರೋಬ್ಬರಿ 5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಕಳೆದ ಮೂರು ವರ್ಷಗಳ ಅಂಕಿ-ಅಂಶಗಳನ್ನು ವಿಶ್ಲೇಷಿಸಿದರೆ, ಡಿಜಿಟಲ್ ಅರೆಸ್ಟ್‌ನಂತಹ ಗಾಳಕ್ಕೆ ಸಿಲುಕಿ ಗೃಹಬಂಧಿಯಾಗಿರುವವರಲ್ಲಿ ಅಕ್ಷರಸ್ಥರೇ ಹೆಚ್ಚಿದ್ದಾರೆ. ಈ ವಂಚನೆ ಪ್ರಾರಂಭಗೊಂಡಿದ್ದು 2023ರಲ್ಲಿ. ಅಂದು 196 ಪ್ರಕರಣಗಳು ದಾಖಲಾಗಿ 22.5 ಕೋಟಿ ರೂಪಾಯಿಗಳನ್ನು ವಂಚಕರು ಲಪಟಾಯಿಸಿದ್ದರು. ಇದರಲ್ಲಿ ಕೇವಲ 2.3 ಕೋಟಿ ರೂಪಾಯಿಗಳಷ್ಟೇ ವಸೂಲಿಯಾಗಿತ್ತು. 2024ರಲ್ಲಿ ಪ್ರಕರಣಗಳ ಸಂಖ್ಯೆ 1,129ಕ್ಕೆ ಏರಿಕೆಯಾಗಿ, 219.4 ಕೋಟಿ ರೂಪಾಯಿ ವಂಚನೆಯಾಗಿತ್ತು. ಇದರಲ್ಲಿ 27.8 ಕೋಟಿ ರೂಪಾಯಿಗಳನ್ನು (ಶೇ. 13ರಷ್ಟು) ಮಾತ್ರ ಪೊಲೀಸರು ವಸೂಲಿ ಮಾಡಿದ್ದರು.
2025ರಲ್ಲಿ ಪ್ರಕರಣಗಳ ಸಂಖ್ಯೆ 345ಕ್ಕೆ ಗಣನೀಯವಾಗಿ ಇಳಿಕೆಯಾದರೂ, ನಷ್ಟದ ಪ್ರಮಾಣ ಮಾತ್ರ 215.1 ಕೋಟಿ ರೂಪಾಯಿಗಳಷ್ಟಿತ್ತು. ಇದರಲ್ಲಿ ಕೇವಲ 10.7 ಕೋಟಿ ರೂಪಾಯಿ (ಶೇ. 5ರಷ್ಟು) ವಸೂಲಿಯಾಗಿದೆ. ವಂಚಕರು ಈಗ ಕಡಿಮೆ ಜನರನ್ನು ಗುರಿಯಾಗಿಸಿ, ಅವರಿಂದಲೇ ಬೃಹತ್ ಮೊತ್ತವನ್ನು ದೋಚುವ ತಂತ್ರ ಅನುಸರಿಸುತ್ತಿರುವುದನ್ನು ಈ ಅಂಕಿ-ಅಂಶಗಳು ಎತ್ತಿ ತೋರಿಸುತ್ತವೆ. 2024ರಲ್ಲಿ ಪ್ರತಿ ಪ್ರಕರಣದ ಸರಾಸರಿ ನಷ್ಟ 19.4 ಲಕ್ಷ ರೂಪಾಯಿ ಇದ್ದರೆ, 2025ರಲ್ಲಿ ಅದು 62.3 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. 2026ರಲ್ಲಿ ಇಲ್ಲಿಯವರೆಗೆ ದಾಖಲಾಗಿರುವ ಕೇವಲ 25 ಪ್ರಕರಣಗಳಲ್ಲಿಯೇ ಸರಾಸರಿ ನಷ್ಟ 46.3 ಲಕ್ಷ ರೂಪಾಯಿಗಳಷ್ಟಿದ್ದು, ವರ್ಷದ ಮುಕ್ತಾಯದ ವೇಳೆಗೆ ಈ ಮೊತ್ತ ಮತ್ತಷ್ಟು ಏರಿಕೆಯಾಗುವ ಆತಂಕವಿದೆ.
ಸರ್ಕಾರದ ಕ್ರಮಗಳೇನು?
ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರವು ಎಲ್ಲಾ ಸೈಬರ್ ಅಪರಾಧ ಪ್ರಕರಣಗಳ ಶೀಘ್ರ ತನಿಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ ಎಂದಿದ್ದಾರೆ. ರಾಜ್ಯದಲ್ಲಿ 45 ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕವಸ್ತು ಅಪರಾಧ) ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿದ್ದು, ದೇಶದ ಮೊಟ್ಟಮೊದಲ ಸಿಇಎನ್ ಠಾಣೆಯನ್ನು 2010ರಲ್ಲೇ ಸ್ಥಾಪಿಸಲಾಗಿದೆ. ರಾಜ್ಯಾದ್ಯಂತ ಸೈಬರ್ ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದ್ದು, ಡಿಜಿ ಹುದ್ದೆಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸೈಬರ್ ಕಮಾಂಡ್ ರಚಿಸಲಾಗಿದೆ. ಸಿಐಡಿ ಕಚೇರಿಯಲ್ಲಿ ಸೈಬರ್ ಅಪರಾಧ ತನಿಖೆ ಹಾಗೂ ಡಿಜಿಟಲ್ ಫೋರೆನ್ಸಿಕ್ ತರಬೇತಿ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಏನಿದು ಡಿಜಿಟಲ್ ಅರೆಸ್ಟ್?
'ಡಿಜಿಟಲ್ ಅರೆಸ್ಟ್' ಎಂಬುದು ಸೈಬರ್ ಅಪರಾಧಿಗಳು ಜನರನ್ನು ಬೆದರಿಸಿ ಹಣ ದೋಚಲು ಬಳಸುತ್ತಿರುವ ಅತ್ಯಂತ ವ್ಯವಸ್ಥಿತ ತಂತ್ರ. ದೇಶದ ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಯಾವುದೇ ನಿಯಮವಿಲ್ಲದಿದ್ದರೂ, ವಂಚಕರು ಜನರ ಭಯವನ್ನೇ ಬಂಡವಾಳವಾಗಿಸಿಕೊಂಡು ವಂಚನೆ ಎಸಗುತ್ತಿದ್ದಾರೆ.
ನಿಮಗೊಂದು ಅಪರಿಚಿತ ಸಂಖ್ಯೆಯಿಂದ ಕರೆ ಅಥವಾ ಐವಿಆರ್ (IVR) ಆಟೋಮ್ಯಾಟಿಕ್ ಕರೆ ಬರುತ್ತದೆ. ತಾವು ಕಸ್ಟಮ್ಸ್, ಫೆಡ್‌ಎಕ್ಸ್, ಕೊರಿಯರ್ ಸಂಸ್ಥೆ, ಟೆಲಿಕಾಂ ಇಲಾಖೆ ಅಥವಾ 'ಟ್ರಾಯ್'ನಿಂದ ಕರೆ ಮಾಡುತ್ತಿರುವುದಾಗಿ ಅವರು ಹೇಳಿಕೊಳ್ಳುತ್ತಾರೆ. "ನಿಮ್ಮ ಆಧಾರ್ ಸಂಖ್ಯೆ ಬಳಸಿ ತೆಗೆದುಕೊಂಡ ಸಿಮ್ ಕಾರ್ಡ್‌ಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿವೆ" ಅಥವಾ "ನಿಮ್ಮ ಹೆಸರಿನಲ್ಲಿ ವಿದೇಶದಿಂದ ಬಂದಿರುವ ಪಾರ್ಸೆಲ್‌ನಲ್ಲಿ ಡ್ರಗ್ಸ್, ನಕಲಿ ಪಾಸ್‌ಪೋರ್ಟ್ ಅಥವಾ ಎಟಿಎಂ ಕಾರ್ಡ್‌ಗಳು ಪತ್ತೆಯಾಗಿವೆ" ಎಂದು ಆರೋಪಿಸುತ್ತಾರೆ. ಬಳಿಕ ನಿಮ್ಮ ಕರೆಯನ್ನು ಹೆಚ್ಚಿನ ತನಿಖೆಗಾಗಿ ನಕಲಿ ಪೊಲೀಸ್, ಸಿಬಿಐ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಥವಾ ಸೈಬರ್ ಕ್ರೈಂ ಅಧಿಕಾರಿಗಳಿಗೆ ವರ್ಗಾಯಿಸುವ ನಾಟಕವಾಡುತ್ತಾರೆ.
ಅಧಿಕಾರಿಗಳ ಸೋಗಿನಲ್ಲಿರುವ ವಂಚಕರು ನಿಮ್ಮನ್ನು ಸ್ಕೈಪ್ ಅಥವಾ ವಾಟ್ಸಾಪ್ ಮೂಲಕ ವೀಡಿಯೊ ಕರೆಗೆ ಬರುವಂತೆ ಆದೇಶಿಸುತ್ತಾರೆ. ಕರೆಯಲ್ಲಿ ಅವರು ಅಚ್ಚುಕಟ್ಟಾದ ಪೊಲೀಸ್ ಸಮವಸ್ತ್ರ ಧರಿಸಿರುತ್ತಾರೆ ಮತ್ತು ಅವರ ಹಿನ್ನೆಲೆಯಲ್ಲಿ ಅಶೋಕ ಸ್ತಂಭ, ಪೊಲೀಸ್ ಲಾಂಛನಗಳಿರುವ ನೈಜ ಪೊಲೀಸ್ ಠಾಣೆಯಂತಹ ವ್ಯವಸ್ಥೆ ಇರುತ್ತದೆ. ನಿಮ್ಮ ವಾಟ್ಸಾಪ್‌ಗೆ ನಕಲಿ ಎಫ್‌ಐಆರ್ (FIR), ಸುಪ್ರೀಂ ಕೋರ್ಟ್ ವಾರಂಟ್ ಅಥವಾ ಸಿಬಿಐ ಐಡಿ ಕಾರ್ಡ್‌ಗಳನ್ನು ಕಳುಹಿಸುತ್ತಾರೆ. "ನೀವು ಈಗ ಅಧಿಕೃತವಾಗಿ ಡಿಜಿಟಲ್ ಅರೆಸ್ಟ್ ಆಗಿದ್ದೀರಿ. ನೀವು ಎಲ್ಲೂ ಹೋಗುವಂತಿಲ್ಲ, ಕ್ಯಾಮೆರಾದಿಂದ ಆಚೆ ಬರುವಂತಿಲ್ಲ, ಈ ವಿಚಾರವನ್ನು ಕುಟುಂಬದವರಾಗಲಿ ಅಥವಾ ಬೇರೆ ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ" ಎಂದು ಮಾನಸಿಕವಾಗಿ ಬಂಧಿಸಿ, ನಿಮ್ಮನ್ನು ತೀವ್ರ ವಿಚಾರಣೆಗೆ ಗುರಿಪಡಿಸುತ್ತಾರೆ.
ನೀವು ಸಂಪೂರ್ಣವಾಗಿ ಭಯಭೀತರಾಗಿದ್ದೀರಿ ಎಂದು ಖಚಿತವಾದ ಬಳಿಕ ವಂಚಕರು ಅಸಲಿ ಆಟ ಶುರು ಮಾಡುತ್ತಾರೆ. "ನಿಮ್ಮ ಬ್ಯಾಂಕ್ ಖಾತೆಗಳನ್ನು ಅಕ್ರಮ ಹಣ ವರ್ಗಾವಣೆ ಮಾಡಲು ಬಳಸಲಾಗಿದೆ. ನೀವು ನಿರ್ದೋಷಿ ಎಂದು ಸಾಬೀತುಪಡಿಸಲು ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಆರ್‌ಬಿಐ (RBI) ಅಥವಾ ಸರ್ಕಾರದ 'ಸುರಕ್ಷಿತ ಖಾತೆ'ಗೆ ವರ್ಗಾಯಿಸಿ. ಪರಿಶೀಲನೆಯ ನಂತರ 30 ನಿಮಿಷಗಳಲ್ಲಿ ನಿಮ್ಮ ಹಣವನ್ನು ಮರುಪಾವತಿಸುತ್ತೇವೆ" ಎಂದು ನಂಬಿಸುತ್ತಾರೆ. ಭಯ ಮತ್ತು ಆತಂಕದಲ್ಲಿರುವ ಸಂತ್ರಸ್ತರು ತಮ್ಮ ಸಂಪಾದನೆಯನ್ನು ಆ ಖಾತೆಗಳಿಗೆ ವರ್ಗಾಯಿಸುತ್ತಾರೆ. ಹಣ ಜಮೆಯಾದ ತಕ್ಷಣವೇ ವಂಚಕರು ಕರೆ ಕಡಿತಗೊಳಿಸಿ ಸಂಪರ್ಕಕ್ಕೆ ಸಿಗದಂತೆ ಕಣ್ಮರೆಯಾಗುತ್ತಾರೆ.
ಯಾವುದೇ ನೈಜ ತನಿಖಾ ಸಂಸ್ಥೆ ಅಥವಾ ಪೊಲೀಸರು ವೀಡಿಯೊ ಕರೆ ಮಾಡಿ ಬೆದರಿಸುವುದಿಲ್ಲ ಹಾಗೂ ಹಣ ವರ್ಗಾಯಿಸುವಂತೆ ಕೇಳುವುದಿಲ್ಲ. ಈ ರೀತಿ ಕರೆಗಳು ಬಂದರೆ ತಕ್ಷಣವೇ ಕಡಿತಗೊಳಿಸಿ, ಪೊಲೀಸ್ ಸಹಾಯವಾಣಿ 1930 ಗೆ ಕರೆ ಮಾಡಿ. ಯಾವುದೇ ಕಾರಣಕ್ಕೂ ಅವರು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಬೇಡಿ. ನಿಮ್ಮ ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಒಟಿಪಿ ಅಥವಾ ಪಾಸ್‌ವರ್ಡ್‌ಗಳನ್ನು ಕರೆ ಮಾಡಿದವರೊಂದಿಗೆ ಹಂಚಿಕೊಳ್ಳಬೇಡಿ. ವಂಚಕರು ಕರೆ ಮಾಡಿದಾಗ ಸಾಧ್ಯವಾದರೆ ಅವರ ಫೋನ್ ನಂಬರ್, ವೀಡಿಯೊ ಕರೆಯ ಸ್ಕ್ರೀನ್‌ಶಾಟ್ ಅಥವಾ ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಳ್ಳಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸಲಹೆ ನೀಡುತ್ತಾರೆ.

