ಕನಕಪುರ: ವೈದ್ಯನ ಸಾವಿನ ಬೆನ್ನಲ್ಲೇ ಅದೇ ಆಸ್ಪತ್ರೆಯ ನರ್ಸ್ ಆತ್ಮಹತ್ಯೆ, ಖಿನ್ನತೆಯೇ ಕಾರಣ
x

ಹಾರೋಹಳ್ಳಿ ತಾಲ್ಲೂಕಿನ ಗುಂಡನಗೊಲ್ಲಹಳ್ಳಿ ಗ್ರಾಮದ ನಿವಾಸಿ ಸರಸ್ವತಿ (45) ಆತ್ಮಹತ್ಯೆ ಮಾಡಿಕೊಂಡ ನರ್ಸ್.

ಕನಕಪುರ: ವೈದ್ಯನ ಸಾವಿನ ಬೆನ್ನಲ್ಲೇ ಅದೇ ಆಸ್ಪತ್ರೆಯ ನರ್ಸ್ ಆತ್ಮಹತ್ಯೆ, ಖಿನ್ನತೆಯೇ ಕಾರಣ

ಡಾ. ಚೇತನ್ ಅವರ ಕುಟುಂಬವು ಮುನ್ಸಿಪಲ್ ಹೈ ಸ್ಕೂಲ್ ಮೈದಾನದ ಬಳಿಯಿದ್ದ ತಮ್ಮ ಹಳೆಯ ಮನೆಯಿಂದ ಇತ್ತೀಚೆಗಷ್ಟೇ ಚನ್ನಬಸಪ್ಪ ಲೇಔಟ್‌ನ ಹೊಸ ಮನೆಗೆ ಸ್ಥಳಾಂತರಗೊಂಡಿತ್ತು.


ಎರಡು ದಿನಗಳ ಹಿಂದೆಯಷ್ಟೇ ವೈದ್ಯರೊಬ್ಬರು ನೇಣಿಗೆ ಶರಣಾಗಿದ್ದ ಘಟನೆಯ ಬೆನ್ನಲ್ಲೇ, ಅವರ ಸಾವಿನಿಂದ ತೀವ್ರ ಖಿನ್ನತೆಗೊಳಗಾಗಿದ್ದ ಅದೇ ಆಸ್ಪತ್ರೆಯ ಶುಶ್ರೂಷಕಿಯೊಬ್ಬರು (ನರ್ಸ್‌) ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದಿದೆ.

ಹಾರೋಹಳ್ಳಿ ತಾಲ್ಲೂಕಿನ ಗುಂಡನಗೊಲ್ಲಹಳ್ಳಿ ಗ್ರಾಮದ ನಿವಾಸಿ ಸರಸ್ವತಿ (45) ಆತ್ಮಹತ್ಯೆ ಮಾಡಿಕೊಂಡ ನರ್ಸ್. ಇವರು ಪಟ್ಟಣದ ನವೋದಯ ಆಸ್ಪತ್ರೆಯಲ್ಲಿ ಕಳೆದ 25 ವರ್ಷಗಳಿಂದ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಘಟನೆಯ ಹಿನ್ನೆಲೆ

ನವೋದಯ ಆಸ್ಪತ್ರೆಯ ವೈದ್ಯರಾಗಿದ್ದ ಡಾ. ಚೇತನ್ ಟೆಂಕರ್ ಅವರು ಮೇ 6ರಂದು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಸರಸ್ವತಿ ಅವರು ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವುದರ ಜೊತೆಗೆ, ಡಾ. ಚೇತನ್ ಅವರ ತಂದೆ–ತಾಯಿಯ ಆರೈಕೆದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವೈದ್ಯರ ಸಾವಿನಿಂದ ಸರಸ್ವತಿ ಅವರು ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ?

ಡಾ. ಚೇತನ್ ಅವರ ಕುಟುಂಬವು ಮುನ್ಸಿಪಲ್ ಹೈ ಸ್ಕೂಲ್ ಮೈದಾನದ ಬಳಿಯಿದ್ದ ತಮ್ಮ ಹಳೆಯ ಮನೆಯಿಂದ ಇತ್ತೀಚೆಗಷ್ಟೇ ಚನ್ನಬಸಪ್ಪ ಲೇಔಟ್‌ನ ಹೊಸ ಮನೆಗೆ ಸ್ಥಳಾಂತರಗೊಂಡಿತ್ತು. ವೈದ್ಯರ ಹಳೆಯ ಮನೆಯಲ್ಲಿ ಈ ಹಿಂದೆ ಸರಸ್ವತಿ ಅವರು ವಾಸವಾಗಿದ್ದರು. ಆದರೆ ವೈದ್ಯರು ಮನೆ ಬದಲಿಸಿದ ಬಳಿಕ ಸರಸ್ವತಿ ಅವರೂ ಬೇರೆ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು. ಡಾ. ಚೇತನ್ ಅವರ ಹಳೆಯ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಲಾಗಿತ್ತು.

ಗುರುವಾರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಡಾ. ಚೇತನ್ ಅವರ ಹಳೆಯ ಮನೆಗೆ ಬಂದ ಸರಸ್ವತಿ, 'ನನ್ನ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತೇನೆ' ಎಂದು ಬಾಡಿಗೆದಾರರಿಗೆ ತಿಳಿಸಿ ಎರಡನೇ ಮಹಡಿಗೆ ತೆರಳಿದ್ದಾರೆ. ಆದರೆ, ಒಂದು ಗಂಟೆಯಾದರೂ ಅವರು ಕೆಳಗೆ ಬಾರದಿದ್ದಾಗ ಅನುಮಾನಗೊಂಡ ಬಾಡಿಗೆ ಮನೆಯವರು ಮೇಲೋಗಿ ನೋಡಿದ್ದಾರೆ. ಈ ವೇಳೆ ಸರಸ್ವತಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ಭೇಟಿ ಹಾಗೂ ಪರಿಶೀಲನೆ:

ಮೃತದೇಹವನ್ನು ಕಂಡು ಗಾಬರಿಗೊಂಡ ಬಾಡಿಗೆ ಮನೆಯ ಮಹಿಳೆಯೊಬ್ಬರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ನೆರೆಹೊರೆಯವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಡಾ. ಚೇತನ್ ಅವರ ಸಾವಿನಿಂದ ತೀವ್ರ ಖಿನ್ನತೆಗೆ ಒಳಗಾಗಿ ತನ್ನ ಸಹೋದರಿ ಈ ಕೃತ್ಯವೆಸಗಿದ್ದಾಳೆ ಎಂದು ಸರಸ್ವತಿ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

Read More
Next Story