ಕಲಬುರಗಿ: ಸರ್ಕಾರಿ ಶಾಲಾ ಶಿಕ್ಷಕಿಯ ಭೀಕರ ಕೊಲೆ, ಕೊಂದು ಸುಟ್ಟು ಹಾಕಿದ ಪಾಪಿ
x

ಮೃತ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ

ಕಲಬುರಗಿ: ಸರ್ಕಾರಿ ಶಾಲಾ ಶಿಕ್ಷಕಿಯ ಭೀಕರ ಕೊಲೆ, ಕೊಂದು ಸುಟ್ಟು ಹಾಕಿದ ಪಾಪಿ

ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿ ಜ್ಯೋತಿ ಕಪಾಳೆ ಹಿರೇಮಠ (57) ಕೊಲೆಯಾದವರು. ಇವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.


Click the Play button to hear this message in audio format

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ನಡೆದ ಭೀಕರ ಘಟನೆಯಲ್ಲಿ 57 ವರ್ಷದ ಸರ್ಕಾರಿ ಶಾಲಾ ಶಿಕ್ಷಕಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಗುರುತು ಸಿಗದಂತೆ ಶವಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಅಮಾನವೀಯ ಕೃತ್ಯ ನಡೆದಿದೆ.

ಕೊಲೆಯಾದ ದುರ್ದೈವಿಯನ್ನು ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿ ಜ್ಯೋತಿ ಕಪಾಳೆ ಹಿರೇಮಠ (57) ಎಂದು ಗುರುತಿಸಲಾಗಿದೆ. ಇವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ವೃತ್ತಿ ನಿಮಿತ್ತ ಬೀದರ್‌ನಲ್ಲಿ ನೆಲೆಸಿದ್ದ ಜ್ಯೋತಿ ಅವರು, ವಾರಕ್ಕೊಮ್ಮೆ ಕಲಬುರಗಿಯಲ್ಲಿರುವ ತಮ್ಮ ಮನೆಗೆ ಬಂದು ಹೋಗುತ್ತಿದ್ದರು.

ಜ್ಯೋತಿ ಅವರು ಕಲಬುರಗಿಯಿಂದ ಬೀದರ್‌ಗೆ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಾರ್ಗಮಧ್ಯೆ ಕಮಲಾಪುರ ತಾಲೂಕಿನ ಕಲ್ಮೂಡ ಬಳಿ ಅಡ್ಡಗಟ್ಟಿದ ಹಂತಕರು, ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ನಂತರ ಕೊಲೆಯನ್ನು ಮುಚ್ಚಿಹಾಕಲು ರಸ್ತೆ ಪಕ್ಕದಲ್ಲೇ ಸುಮಾರು ಐದು ಲೀಟರ್ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ತನಿಖೆ ಆರಂಭ

ಆರಂಭದಲ್ಲಿ ಕಮಲಾಪುರ ಪೊಲೀಸರು 'ಅಪರಿಚಿತ ಶವ' ಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ತನಿಖೆಯನ್ನು ಚುರುಕುಗೊಳಿಸಿದಾಗ ಕೊಲೆಯಾದವರು ಕಲಬುರಗಿ ಮೂಲದ ಶಿಕ್ಷಕಿ ಎಂಬ ಸತ್ಯಾಂಶ ಹೊರಬಿದ್ದಿದೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕೊಲೆಗೆ ನಿಖರವಾದ ಕಾರಣವೇನು? ಇದರ ಹಿಂದೆ ಯಾರಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

Read More
Next Story