ಬ್ಯಾಂಕ್ ಲಾಕರ್‌ನಲ್ಲಿದ್ದ 2.7 ಕೆಜಿ ಚಿನ್ನ ಕದ್ದ ಅಸಿಸ್ಟೆಂಟ್ ಮ್ಯಾನೇಜರ್ ಬಂಧನ
x

ಬ್ಯಾಂಕ್ ಲಾಕರ್‌ನಲ್ಲಿದ್ದ 2.7 ಕೆಜಿ ಚಿನ್ನ ಕದ್ದ ಅಸಿಸ್ಟೆಂಟ್ ಮ್ಯಾನೇಜರ್ ಬಂಧನ

ಆರೋಪಿ ಕಿರಣ್ ಕುಮಾರ್, ವ್ಯವಸ್ಥಾಪಕರು ಇಲ್ಲದ ವೇಳೆ ಲಾಕರ್‌ನಲ್ಲಿದ್ದ ಚಿನ್ನದ ಪ್ಯಾಕೆಟ್‌ಗಳಿಂದ ಸ್ವಲ್ಪ ಸ್ವಲ್ಪವೇ ಚಿನ್ನವನ್ನು ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


Click the Play button to hear this message in audio format

ಗ್ರಾಹಕರು ನಂಬಿಕೆಯಿಂದ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಬರೋಬ್ಬರಿ 2 ಕೆಜಿ 787 ಗ್ರಾಂ ಚಿನ್ನಾಭರಣವನ್ನು ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕನೇ (Assistant Manager) ಕಳ್ಳತನ ಮಾಡಿರುವ ಘಟನೆ ನಗರದ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್‌ನಲ್ಲಿ ಗ್ರಾಹಕರು ಅಡಮಾನವಿಟ್ಟ ಚಿನ್ನವನ್ನು ಇರಿಸುವ ಲಾಕರ್ ಕೀಗಳು ಸಾಮಾನ್ಯವಾಗಿ ವ್ಯವಸ್ಥಾಪಕರು ಮತ್ತು ಸಹಾಯಕ ವ್ಯವಸ್ಥಾಪಕರ ಸುಪರ್ದಿಯಲ್ಲಿ ಇರುತ್ತವೆ. ಇದರ ದುರ್ಲಾಭ ಪಡೆದ ಆರೋಪಿ ಕಿರಣ್ ಕುಮಾರ್, ವ್ಯವಸ್ಥಾಪಕರು ಇಲ್ಲದ ವೇಳೆ ಲಾಕರ್‌ನಲ್ಲಿದ್ದ ಚಿನ್ನದ ಪ್ಯಾಕೆಟ್‌ಗಳಿಂದ ಸ್ವಲ್ಪ ಸ್ವಲ್ಪವೇ ಚಿನ್ನವನ್ನು ಕದಿಯುತ್ತಿದ್ದನು. ಹೀಗೆ ಯಾರಿಗೂ ತಿಳಿಯದಂತೆ ಬರೋಬ್ಬರಿ 2.7 ಕೆಜಿಗೂ ಅಧಿಕ ಚಿನ್ನವನ್ನು ಆತ ಎಗರಿಸಿದ್ದನು.

ಬೆಳಕಿಗೆ ಬಂದಿದ್ದು ಹೇಗೆ?

ಇತ್ತೀಚೆಗೆ ಗ್ರಾಹಕರೊಬ್ಬರು ತಾವು ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಳ್ಳಲು ಬ್ಯಾಂಕ್‌ಗೆ ಬಂದಿದ್ದಾರೆ. ಈ ವೇಳೆ ವ್ಯವಸ್ಥಾಪಕರು ಲಾಕರ್ ಪರಿಶೀಲಿಸಿದಾಗ, ಸಂಬಂಧಪಟ್ಟ ಚಿನ್ನಾಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಇತರೆ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ, ಬೃಹತ್ ಪ್ರಮಾಣದ ಚಿನ್ನ ಕಳವಾಗಿರುವುದು ಬೆಳಕಿಗೆ ಬಂದಿದೆ.

ಜೂಜಿನ ಚಟಕ್ಕೆ ಬಲಿಯಾದ ಅಧಿಕಾರಿ

ಆನ್‌ಲೈನ್ ಜೂಜಿನ ಚಟಕ್ಕೆ ದಾಸನಾಗಿದ್ದ ಕಿರಣ್ ಕುಮಾರ್, ಕದ್ದ ಚಿನ್ನಾಭರಣಗಳನ್ನು ಕತ್ರಿಗುಪ್ಪೆಯ ಮಣಪ್ಪುರಂ ಫೈನಾನ್ಸ್, ಮುತ್ತೂಟ್ ಮಿನಿ ಫೈನಾನ್ಸ್ ಮತ್ತು ಮುತ್ತೂಟ್ ಫಿನ್‌ಕಾರ್ಪ್‌ಗಳಲ್ಲಿ ಅಡವಿಟ್ಟು ಹಣ ಪಡೆದಿದ್ದನು. ಈ ಹಣವನ್ನೆಲ್ಲ ಆತ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಕಳೆದುಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಚಿನ್ನ ಜಪ್ತಿ ಮತ್ತು ಕಾನೂನು ಕ್ರಮ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ ಸದ್ಯ 700 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಕಳವು ಮಾಲು ಎಂದು ತಿಳಿದಿದ್ದರೂ ಸ್ವೀಕರಿಸುವುದು ಅಪರಾಧವಾಗಿದ್ದರೂ, ಕೆಲವು ಫೈನಾನ್ಸ್ ಸಂಸ್ಥೆಗಳು ಚಿನ್ನ ಅಡಮಾನ ಇಟ್ಟುಕೊಂಡಿರುವುದರ ಬಗ್ಗೆ ಪೊಲೀಸರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಸದ್ಯ ಮುತ್ತೂಟ್ ಫೈನಾನ್ಸ್ ಪೊಲೀಸರಿಗೆ ಚಿನ್ನಾಭರಣ ಹಿಂದಿರುಗಿಸಿದೆ ಎಂದು ವರದಿಯಾಗಿದೆ.

Read More
Next Story