ಅಗ್ಗದ ದರದಲ್ಲಿ ಚಿನ್ನದ ಆಮಿಷ: ಹೈದರಾಬಾದ್ ಉದ್ಯಮಿಗೆ 20 ಲಕ್ಷ ರೂ. ವಂಚನೆ
x

ಅಗ್ಗದ ದರದಲ್ಲಿ ಚಿನ್ನದ ಆಮಿಷ: ಹೈದರಾಬಾದ್ ಉದ್ಯಮಿಗೆ 20 ಲಕ್ಷ ರೂ. ವಂಚನೆ

ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ಹೈದರಾಬಾದ್ ಉದ್ಯಮಿಯನ್ನು ಬೆಂಗಳೂರಿಗೆ ಕರೆಸಿಕೊಂಡ ಖತರ್ನಾಕ್ ಗ್ಯಾಂಗ್, ಅವರ ಮೇಲೆ ಹಲ್ಲೆ ನಡೆಸಿ 20 ಲಕ್ಷ ರೂ., ದೋಚಿ ಪರಾರಿಯಾಗಿದೆ.


ಅಗ್ಗದ ದರದಲ್ಲಿ ಚಿನ್ನ ನೀಡುತ್ತೇವೆ ಎಂದು ನಂಬಿಸಿ ಸಾರ್ವಜನಿಕರನ್ನು ವಂಚಿಸುವ ಜಾಲಗಳು ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಿವೆ. ಈ ಬಾರಿ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಈ ಜಾಲಕ್ಕೆ ಸಿಲುಕಿ ಭಾರಿ ಮೊತ್ತದ ಹಣ ಕಳೆದುಕೊಂಡಿದ್ದಾರೆ. ಸುಮಾರು 4 ಕೆ.ಜಿ ಚಿನ್ನದ ನಾಣ್ಯಗಳು ತಮ್ಮ ಬಳಿ ಇವೆ ಎಂದು ನಂಬಿಸಿದ ಖತರ್ನಾಕ್ ಗ್ಯಾಂಗ್, ಉದ್ಯಮಿಯಿಂದ ಬರೋಬ್ಬರಿ 20 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿದೆ.

ಹೈದರಾಬಾದ್ ಮೂಲದ ಉದ್ಯಮಿ ವಿಶ್ವಪ್ರಸಾದ್ ರೆಡ್ಡಿ ಅವರು ಬೆಂಗಳೂರಿನ ಕುಮಾರ್ ಎಂಬಾತನ ಸಂಪರ್ಕಕ್ಕೆ ಬಂದಿದ್ದರು. ತನ್ನ ಬಳಿ ಅಪಾರ ಪ್ರಮಾಣದ ಚಿನ್ನದ ನಾಣ್ಯಗಳಿದ್ದು, ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ, ಅಂದರೆ ಕೇವಲ 20 ಲಕ್ಷ ರೂ.ಗಳಿಗೆ ಒಂದು ಕೆ.ಜಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಕುಮಾರ್ ಆಮಿಷ ಒಡ್ಡಿದ್ದ. ಈ ಮಾತನ್ನು ನಂಬಿದ ವಿಶ್ವಪ್ರಸಾದ್ ರೆಡ್ಡಿ, ಹಣದೊಂದಿಗೆ ಗುರುವಾರ ಬೆಳಿಗ್ಗೆ ಹೈದರಾಬಾದ್‌ನಿಂದ ವಿಮಾನದ ಮೂಲಕ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಅಲ್ಲಿಂದ ಟ್ಯಾಕ್ಸಿ ಮೂಲಕ ಆರೋಪಿಗಳು ಸೂಚಿಸಿದ ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆ ಗ್ರಾಮದ ಸಮೀಪವಿರುವ ನಿರ್ಜನ ಪ್ರದೇಶಕ್ಕೆ ತಲುಪಿದ್ದಾರೆ. ವಿಶ್ವಪ್ರಸಾದ್ ರೆಡ್ಡಿ ಅವರು ನಿಗದಿತ ಸ್ಥಳಕ್ಕೆ ಬರುತ್ತಿದ್ದಂತೆ, ಅಲ್ಲಿ ಹೊಂಚು ಹಾಕಿ ಕುಳಿತಿದ್ದ ಆರು ಮಂದಿ ದುಷ್ಕರ್ಮಿಗಳ ತಂಡ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ. ಉದ್ಯಮಿಯನ್ನು ಬೆದರಿಸಿದ ಗ್ಯಾಂಗ್, ಅವರ ಬಳಿ ಇದ್ದ 20 ಲಕ್ಷ ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದೆ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.

ಮರುಕಳಿಸುತ್ತಿರುವ ವಂಚನೆ ಪ್ರಕರಣಗಳು:

ಬೆಂಗಳೂರು ಗ್ರಾಮಾಂತರ ಮತ್ತು ನಗರದ ಹೊರವಲಯದಲ್ಲಿ ಇಂತಹ "ಚಿನ್ನದ ಆಮಿಷ"ದ ವಂಚನೆ ಪ್ರಕರಣಗಳು ಇದೇ ಮೊದಲೇನಲ್ಲ. ಕಳೆದ ಕೆಲವು ವರ್ಷಗಳಲ್ಲಿ ಇಂತಹ ಹತ್ತಾರು ಪ್ರಕರಣಗಳು ವರದಿಯಾಗಿವೆ.

ಈ ಹಿಂದೆ ತುಮಕೂರು ಮತ್ತು ರಾಮನಗರ ಭಾಗಗಳಲ್ಲಿ "ಹಳೆಯ ಮನೆಯನ್ನು ಕೆಡವಿದಾಗ ಚಿನ್ನದ ನಾಣ್ಯಗಳು ಸಿಕ್ಕಿವೆ. ನಾವು ಅದನ್ನು ಅಕ್ಕಸಾಲಿಗರಿಗೆ ಮಾರಾಟ ಮಾಡಲು ಹೆದರುತ್ತಿದ್ದೇವೆ, ಆದ್ದರಿಂದ ಕಡಿಮೆ ಬೆಲೆಗೆ ನಿಮಗೆ ನೀಡುತ್ತೇವೆ" ಎಂದು ನಂಬಿಸಿ, ಗ್ರಾಹಕರನ್ನು ಕರೆಸಿಕೊಂಡು ಲಕ್ಷಾಂತರ ರೂಪಾಯಿ ದೋಚಿದ ಘಟನೆಗಳು ನಡೆದಿವೆ.

ಮೈಸೂರು ರಸ್ತೆಯ ಬಳಿ ತಮಿಳುನಾಡು ಮೂಲದ ವ್ಯಾಪಾರಿಯೊಬ್ಬರಿಗೆ ಅಸಲಿ ಚಿನ್ನದ ಸಣ್ಣ ಚೂರನ್ನು ತೋರಿಸಿ ನಂಬಿಸಿ, ನಂತರ ಹಣ ಪಡೆದು ಪೇಂಟ್ ಮಾಡಿದ ಸೀಸದ ತುಂಡುಗಳನ್ನು ನೀಡಿ ವಂಚಿಸಲಾಗಿತ್ತು.

ಮಾನ ನಿಲ್ದಾಣದ ಸಮೀಪವಿರುವ ನಿರ್ಜನ ಪ್ರದೇಶಗಳನ್ನೇ ಈ ಗ್ಯಾಂಗ್‌ಗಳು ತಮ್ಮ ಅಡಗುತಾಣವನ್ನಾಗಿ ಮಾಡಿಕೊಂಡಿವೆ. ಈ ಹಿಂದೆ ಉದ್ಯಮಿಯೊಬ್ಬರನ್ನು ಇದೇ ರೀತಿ ಕರೆಸಿಕೊಂಡು, ಕಾರಿನಲ್ಲೇ ಕೂರಿಸಿಕೊಂಡು ಹಣ ದೋಚಿ ರಸ್ತೆಯಲ್ಲೇ ಬಿಟ್ಟು ಹೋದ ಪ್ರಕರಣಗಳು ವರದಿಯಾಗಿವೆ.

Read More
Next Story