ಹೊಸಕೋಟೆ ಬಿರಿಯಾನಿ ತಿಂದು ವೇಗದ ಚಾಲನೆ;  6 ವಿದ್ಯಾರ್ಥಿಗಳು ಸೇರಿ ಏಳು ಮಂದಿಯ ದುರಂತ ಅಂತ್ಯ
x
ಹೊಸಕೋಟೆ ರಸ್ತೆಯಲ್ಲಿ ನಜ್ಜುಗುಜ್ಜಾಗಿರುವ ಕಾರು

ಹೊಸಕೋಟೆ ಬಿರಿಯಾನಿ ತಿಂದು ವೇಗದ ಚಾಲನೆ; 6 ವಿದ್ಯಾರ್ಥಿಗಳು ಸೇರಿ ಏಳು ಮಂದಿಯ ದುರಂತ ಅಂತ್ಯ

ಕಾರು ಚಾಲನೆ ಮಾಡುತ್ತಿದ್ದ ಅಪ್ರಾಪ್ತರ ಬಳಿ ಚಾಲನಾ ಪರವಾನಗಿ ಇರಲಿಲ್ಲ. ಅತಿ ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ಸರಣಿ ಅಪಘಾತಕ್ಕೆ ಒಳಗಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Click the Play button to hear this message in audio format

ತಾನು ಮಾಡದ ತಪ್ಪಿಗೆ ಜೀವ ತೆತ್ತ ಅಮಾಯಕ ಬೈಕ್ ಸವಾರ, ಮೋಜಿನಾಟಕ್ಕೆ ಬಲಿಯಾದ ಆರು ಮಂದಿ ವಿದ್ಯಾರ್ಥಿಗಳು... ಇದು ಹೊಸಕೋಟೆ ಬಳಿ ನಡೆದ ಭೀಕರ ರಸ್ತೆ ಅಪಘಾತದ ಕರುಣಾಜನಕ ಚಿತ್ರಣ. ಮುಂಜಾನೆ ಬಿರಿಯಾನಿ ತಿನ್ನಲು ಬೆಂಗಳೂರಿನಿಂದ ಹೊಸಕೋಟೆ ಕಡೆಗೆ ಹೋಗುವ ಭರದಲ್ಲಿ ಅಪ್ರಾಪ್ತ ಬಾಲಕರು ನಡೆಸಿದ ಅಜಾಗರೂಕ ಚಾಲನೆ, ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಕಣ್ಣಿಲ್ಲದ ತಾಯಿಯ ಮಗನ ಪ್ರಾಣವನ್ನೂ ಕಸಿದುಕೊಂಡಿದೆ. ಕ್ಷಣಮಾತ್ರದ ನಿರ್ಲಕ್ಷ್ಯ ಏಳು ಜೀವಗಳನ್ನು ಬಲಿಪಡೆದಿದೆ.

ಮೃತಪಟ್ಟ ವಿದ್ಯಾರ್ಥಿಗಳು ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಅದೇ ರೀತಿ ಬೈಕ್​ ಸವಾರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನೈಟ್ ಶಿಫ್ಟ್ ಮುಗಿಸಿ ಮನಗೆ ವಾಪಸ್ ಹೋಗುತ್ತಿದ್ದಾಗ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಅವರು ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತರನ್ನು ಕೊತ್ತನೂರು ನಿವಾಸಿ ಅಶ್ವಿನ್ ನಾಯರ್ (17), ಎಚ್‌ಬಿಆರ್ ಲೇಔಟ್‌ ನಿವಾಸಿ ಅರ್ಹನ್‌ ಷರೀಫ್, ಪ್ರೇಜರ್​ ಟೌನ್‌ ನಿವಾಸಿಗಳಾದ ಅಯಾನ್ ಅಲಿ (17), ಭರತ್(18), ಹುಳಿಮಾವು ನಿವಾಸಿ ಈತನ್‌ ಜಾರ್ಜ್(18) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಅಪ್ರಾಪ್ತ ಬಾಲಕನ ವಿಳಾಸ ಪತ್ತೆಯಾಗಿಲ್ಲ. ಈ ಆರು ಮಂದಿ ವಿದ್ಯಾರ್ಥಿಗಳು ಬೆಂಗಳೂರಿನ ಆರ್ ವಿ ಪಿಯು ಕಾಲೇಜು ಹಾಗೂ ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಸಿಎಂಆರ್‌ ಕಾಲೇಜಿನ ವಿದ್ಯಾರ್ಥಿಗಳು.

ಕಾರು ಚಾಲನೆ ಮಾಡುತ್ತಿದ್ದ ಬಾಲಕನ ಬಳಿ ಚಾಲನಾ ಪರವಾನಗಿ ಇರಲಿಲ್ಲ. ದುರ್ಘಟನೆಗೆ ಒಳಗಾದ ಕಾರು ಮೃತ ಬಾಲಕ ಅಯಾನ್ ಅಲಿಯ ತಂದೆಯ ಹೆಸರಿನಲ್ಲಿದೆ. ಬಾಲಕರೆಲ್ಲರೂ ಉತ್ಸಾಹದಿಂದ ಅತಿ ವೇಗದಲ್ಲಿ ಹೋಗುತ್ತಿದ್ದಾಗ ಹೊಸಕೋಟೆ ಸಮೀಪದ ಸೂಲಿಬೆಲೆ ಬಳಿ ನಿಯಂತ್ರಣ ತಪ್ಪಿ ಮೊದಲಿಗೆ ಬೈಕ್ ಹಾಗೂ ನಂತರ ಕ್ಯಾಂಟರ್ ಒಂದಕ್ಕೆ ಡಿಕ್ಕಿ ಹೊಡೆದಿದೆ ಕೇಂದ್ರ ವಲಯದ ಐಜಿಪಿ ಲಾಬೂರಾಮ್ ತಿಳಿಸಿದ್ದಾರೆ.

ಮೊದಲ ಹಾಗೂ ದ್ವಿತೀಯ ವ್ಯಾಸಂಗ ಮಾಡುತ್ತಿದ್ದ ಆರು ಮಂದಿ ಸ್ನೇಹಿತರು ಮನೆಯವರಿಗೂ ತಿಳಿಯದಂತೆ ಯೋಜನೆ ಹಾಕಿಕೊಂಡಿದ್ದು, ಎಕ್ಸ್​ಯುವಿ 7oo ಕಾರಿನಲ್ಲಿ ಹೊಸಕೋಟೆಗೆ ಹೋಗಿ ಬರುತ್ತಿದ್ದರು. ಕಾರು ಮೊದಲಿಗೆ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು, ನಂತರ ಕ್ಯಾಂಟರ್‌ಗೆ ಹಿಂದಿನಿಂದ ಡಿಕ್ಕಿಯಾಗಿದೆ. ಈ ವೇಳೆ ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ನಿವಾಸಿಯಾದ ಬೈಕ್‌ ಸವಾರ ಗಗನ್ (24) ಮೃತಪಟ್ಟಿದ್ದಾರೆ.

ಬಾಲಕರು ಓಡಿಸುತ್ತಿದ್ದ ಕಾರು ಕ್ಯಾಂಟರ್​ಗೆ ಹಿಂದಿನಿಂದ ಗುದ್ದಿದ ವೇಗಕ್ಕೆ ಆಕ್ಸಲ್‌ ತುಂಡಾಗಿ ಟಯರ್ ಕಳಚಿಕೊಂಡಿತ್ತು. ಹೀಗಾಗಿ ಕ್ಯಾಂಟರ್ ಸರ್ವೀಸ್ ರಸ್ತೆಗೆ ಉರುಳಿ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಟಯರ್​ ಹಾಗೂ ಆ್ಯಕ್ಸೆಲ್​​ಗೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಬ್ರೇಜಾ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಆ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಿಗ್ಗೆಯಿಂದಲೇ ಮೃತರ ಮಾಹಿತಿ ಕಲೆಹಾಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮೃತರ ಫೋನ್ ಕರೆಗಳನ್ನು ಆಧರಿಸಿ ಅವರ ಗುರುತು ಮತ್ತು ವಿಳಾಸವನ್ನು ಪತ್ತೆ ಮಾಡಲಾಗುತ್ತಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದ ವಿದ್ಯಾರ್ಥಿಗಳಿಗೆ, ಬೆಳಿಗ್ಗೆ ಮನೆಯವರು ಕರೆ ಮಾಡಿದಾಗ ಪೊಲೀಸರು ನೀಡಿದ ಉತ್ತರ ಕೇಳಿ ಇಡೀ ಕುಟುಂಬಗಳೇ ಕಂಗಾಲಾಗಿವೆ. ಹೊಸಕೋಟೆ ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ʼಅಪ್ರಾಪ್ತರ ತಪ್ಪಿಗೆ ಯುವಕ ಬಲಿʼ

ಬೈಕ್ ಸವಾರ ಗಗನ್ ತಾನು ಮಾಡದ ತಪ್ಪಿಗೆ ಪ್ರಾಣ ತೆರಬೇಕಾಯಿತು. ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಗಗನ್ ಅವರ ತಾಯಿಗೆ ಎರಡೂ ಕಣ್ಣುಗಳಿಲ್ಲ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಇಡೀ ಕುಟುಂಬವನ್ನು ಅವರೇ ನಿರ್ವಹಿಸುತ್ತಿದ್ದರು. ಈಗ ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಮಗನ ಸಾವಿನ ಸುದ್ದಿ ತಿಳಿದು ಕಣ್ಣಿಲ್ಲದ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ.

ʼನಿನ್ನೆ ಸಂಜೆ ಕೆಲಸಕ್ಕೆ ಹೋಗುವ ಮುನ್ನ ಮಾತಾಡಿದ್ದ. ಆಮೇಲೆ ಫೋನ್ ಮಾಡಿ ಕಂಪನಿಯವರು ಕಾರು ಕೊಡ್ತಾರೆ ಅಂತ ಹೇಳಿದ್ದ. ಇದೀಗ ನೋಡಿದ್ರೆ ಈ ಸುದ್ದಿ ಕೇಳ್ತಿದಿನಿʼ ಎಂದು ಗಗನ್ ತಾಯಿ ಲಕ್ಷ್ಮೀದ ಗದ್ಗದಿತರಾಗಿದ್ದಾರೆ.

ಗಗನ್ ಬಿಕಾಂ ಪದವಿ ಮುಗಿಸಿ, ಖಾಸಗಿ ಕಂಪನಿ ಕೆಲಸ ಮಾಡುತ್ತಿದ್ದ. ಜತೆಗೆ ವ್ಯವಸಾಯವನ್ನೂ ಮಾಡುತ್ತಿದ್ದರು ಎಂದು ಆತನ ಸೋದರ ಮಾವ ಮಾಹಿತಿ ನೀಡಿದ್ದಾರೆ.

ಆಕ್ರಂದನ ಮುಗಿಲು ಮುಟ್ಟಿತು

ಮುಂಜಾನೆ ಮನೆಯಿಂದ ಹೋದ ಮಕ್ಕಳು, ಬೆಳಗ್ಗೆ ಹೆಣವಾಗಿ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ್ದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಮೃತರ ಫೋನ್ ಕರೆಗಳ ಆಧಾರದ ಮೇಲೆ ಗುರುತು ಪತ್ತೆ ಹಚ್ಚಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಹೊಸಕೋಟೆ ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂದೆ ಹೃದಯವಿದ್ರಾವಕ ದೃಶ್ಯಗಳು ಕಂಡುಬಂದವು.

Read More
Next Story