ಹಿಟ್ ಆ್ಯಂಡ್ ರನ್ ಕೇಸ್‌: ಇಬ್ಬರು ಸಾವು, ಕಾರು ಚಾಲಕ ಅರೆಸ್ಟ್
x

ದೇವನಹಳ್ಳಿ ಬಳಿ ಫಾರ್ಚುನರ್ ಕಾರು ಡಿಕ್ಕಿಗೆ ಇಬ್ಬರು ಬೈಕ್ ಸವಾರರು ಸಾವು. ಅಪಘಾತದ ಬಳಿಕ ಪರಾರಿಯಾಗಿದ್ದ ಚಾಲಕನನ್ನು ಕಿಲೋಮೀಟರ್‌ಗಟ್ಟಲೆ ಬೆನ್ನಟ್ಟಿ ಪೊಲೀಸರು ಬಂಧಿಸಿದ್ದಾರೆ.

ಹಿಟ್ ಆ್ಯಂಡ್ ರನ್ ಕೇಸ್‌: ಇಬ್ಬರು ಸಾವು, ಕಾರು ಚಾಲಕ ಅರೆಸ್ಟ್

ಅಪಘಾತದ ಬಳಿಕ ಕಾರು ಚಾಲಕ ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಿದ್ದಾನೆ. ಈ ವೇಳೆ ಅಪಘಾತದ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಬಿದ್ದಿದ್ದು, ಅದನ್ನೇ ಪ್ರಮುಖ ಸುಳಿವಾಗಿ ಪರಿಗಣಿಸಿದ ಪೊಲೀಸರು ಕಾರಿನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.


Click the Play button to hear this message in audio format

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಫಾರ್ಚುನರ್ ಕಾರು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಗಾಯಾಳುಗಳ ನೆರವಿಗೆ ಧಾವಿಸದೆ ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದು, ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಕೊನೆಗೂ ಕಾರು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ಅತ್ತಿಬೆಲೆ ಸಮೀಪ ರಾತ್ರಿ ಈ ಅಪಘಾತ ಸಂಭವಿಸಿದೆ. ದೇವನಹಳ್ಳಿ ಪಟ್ಟಣದ ಮಿಥುನ್ ಮತ್ತು ಕನಕ ಮೃತ ದುರ್ದೈವಿಗಳು. ಇಬ್ಬರೂ ಹೆದ್ದಾರಿಯಲ್ಲಿರುವ ಡಾಬಾಗಳಿಗೆ ಮೊಟ್ಟೆ ಮತ್ತು ಚಿಕನ್ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಅತಿವೇಗವಾಗಿ ಬಂದ ಫಾರ್ಚುನರ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಂಬರ್ ಪ್ಲೇಟ್ ಸುಳಿವಿನಿಂದ ಕಾರಿನ ಪತ್ತೆ

ಅಪಘಾತದ ಬಳಿಕ ಕಾರು ಚಾಲಕ ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಿದ್ದಾನೆ. ಈ ವೇಳೆ ಅಪಘಾತದ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಬಿದ್ದಿದ್ದು, ಅದನ್ನೇ ಪ್ರಮುಖ ಸುಳಿವಾಗಿ ಪರಿಗಣಿಸಿದ ಪೊಲೀಸರು ಕಾರಿನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಪಘಾತ ಮಾಡಿ ಪರಾರಿಯಾಗುತ್ತಿದ್ದ ಫಾರ್ಚುನರ್ ಕಾರು ಚಿಕ್ಕಬಳ್ಳಾಪುರ ಮಾರ್ಗವಾಗಿ ತೆಲಂಗಾಣದತ್ತ ತೆರಳುತ್ತಿತ್ತು. ಮಾಹಿತಿ ಪಡೆದ ಪೊಲೀಸರು ಸೈರನ್ ಹಾಕಿ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಚಾಲಕ ಪೊಲೀಸರ ಸೂಚನೆ ನಿರ್ಲಕ್ಷಿಸಿ ವೇಗವಾಗಿ ಕಾರು ಚಲಾಯಿಸಿದ್ದಾನೆ. ಪೊಲೀಸರು ಬೊಲೆರೋ ಗೂಡ್ಸ್ ವಾಹನವನ್ನು ಅಡ್ಡ ಹಾಕಿದರೂ ನಿಲ್ಲಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಕುಡಿದ ಅಮಲಿನಲ್ಲಿದ್ದ ಎನ್ನಲಾದ ಚಾಲಕ ಬೇಕಾಬಿಟ್ಟಿಯಾಗಿ ಕಾರು ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕಿಲೋಮೀಟರ್‌ಗಟ್ಟಲೆ ಬೆನ್ನಟ್ಟಿದ್ದಾರೆ. ಕೊನೆಗೆ ಇತರೆ ವಾಹನಗಳ ನೆರವಿನಿಂದ ಕಾರನ್ನು ತಡೆದು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರದ ಬಳಿ ಮಧ್ಯರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ ಹಿಟ್ ಆ್ಯಂಡ್ ರನ್ ಮಾಡಿ ಪರಾರಿಯಾಗುತ್ತಿದ್ದ ಕಾರು ಪೊಲೀಸರ ಕೈಗೆ ಸಿಕ್ಕಿದೆ. ಪೊಲೀಸರ ಮೊಬೈಲ್‌ನಲ್ಲಿ ಇಡೀ ಚೇಸಿಂಗ್ ದೃಶ್ಯ ಸೆರೆಯಾಗಿದೆ. ಸದ್ಯ ಪ್ರಕರಣ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಇಬ್ಬರ ಸಾವಿಗೆ ಕಾರಣವಾದ ಕಾರು ಚಾಲಕನ ವಿರುದ್ಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read More
Next Story