Six arrested by CCB for cheating by promising jobs in courts
x

ಸಿಸಿಬಿ ಕೇಂದ್ರ ಕಚೇರಿ 

ಕೋರ್ಟ್‌ಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ: ಆರು ಮಂದಿ ಸೆರೆ

ಗ್ರೀನ್‌ಶೀಟ್ ಎಂಬ ಫಾರ್ಮೆಟ್‌ನಲ್ಲಿ ಅಭ್ಯರ್ಥಿಗಳ ಮೊಬೈಲ್ ನಂಬರ್, ಗುರುತು ಮತ್ತು ಸಹಿಗಳನ್ನು ಪಡೆದು ನಂತರ ನಾಪತ್ತೆಯಾಗುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಪ್ರೊಸೆಸ್ ಸರ್ವರ್, ಪ್ಯೂನ್, ಎಸ್‌ಡಿಎ, ಎಫ್‌ಡಿಎ ಹಾಗೂ ಡ್ರೈವರ್ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿಗಳನ್ನು ವಂಚಿಸುತ್ತಿದ್ದ ಆರು ಮಂದಿಯನ್ನು ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ರಾಜ್ಯದ ಸುಮಾರು 450ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ನ್ಯಾಯಾಲಯಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ, ನಕಲಿ ನೇಮಕಾತಿ ಪತ್ರಗಳನ್ನು ನೀಡುತ್ತಿದ್ದರು. ಆನ್‌ಲೈನ್ ಮೂಲಕ ಮತ್ತು ನೇರವಾಗಿ ಹಣವನ್ನು ಪಡೆದು ವಂಚಿಸುತ್ತಿದ್ದರು. ಸಹಕಾರ ನಗರದಲ್ಲಿರುವ ದೀಕ್ಷಾ ಎಜುಕೇಶನ್ ಅಕಾಡೆಮಿ ಹಾಗೂ ಆಶೀರ್ವಾದ್ ಎಂಟರ್‌ಪ್ರೈಸಸ್ ಕಚೇರಿಗಳಲ್ಲಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಭರ್ತಿ ಮಾಡಿಸಿಕೊಂಡು, ಅವರ ದಾಖಲೆಗಳನ್ನು ಪರಿಶೀಲಿಸಿ, ಸಹಿ ಪಡೆದುಕೊಳ್ಳುತ್ತಿದ್ದರು. ಆರೋಪಿಗಳಿಂದ 38 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಆದೇಶ ಪತ್ರ

ಗ್ರೀನ್‌ಶೀಟ್ ಎಂಬ ಫಾರ್ಮೆಟ್‌ನಲ್ಲಿ ಅಭ್ಯರ್ಥಿಗಳ ಮೊಬೈಲ್ ನಂಬರ್, ಗುರುತು ಮತ್ತು ಸಹಿಗಳನ್ನು ಪಡೆದು ನಂತರ ನಾಪತ್ತೆಯಾಗುತ್ತಿದ್ದರು. ಬಳಿಕ, ಅಭ್ಯರ್ಥಿಗಳಿಗೆ ನಕಲಿ ಆದೇಶ ಪ್ರತಿಗಳನ್ನು ನೀಡಿ, ಅವರು ಆಯ್ಕೆಯಾಗಿರುವುದಾಗಿ ನಂಬಿಸುತ್ತಿದ್ದರು. ನ್ಯಾಯಾಲಯದ ನಕಲಿ ಸಹಿ ಮತ್ತು ಮೊಹರನ್ನು ಹೊಂದಿರುವ ಆಯ್ಕೆ ಪಟ್ಟಿಯನ್ನು ನೀಡುತ್ತಿದ್ದರು. ಈ ಸಂಬಂಧ ಸಿಸಿಬಿ ಮತ್ತು ಕೊಡಿಗೆಹಳ್ಳಿ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಂಧಿತ ಆರೋಪಿಗಳು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಇತರ ಸಹಚರರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಈ ಕಾರ್ಯಾಚರಣೆಯನ್ನು ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಉಪ ಪೊಲೀಸ್ ಆಯುಕ್ತ (ಅಪರಾಧ-01 ವಿಭಾಗ) ಹರಿಬಾಬು ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರು, ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಯ ತಂಡವು ಯಶಸ್ವಿಯಾಗಿ ನಡೆಸಿದೆ.

Read More
Next Story