
ನ್ಯಾಯಾಲಯದ ಹೆಸರಲ್ಲಿ ಹೈಟೆಕ್ ಉದ್ಯೋಗ ದಂಧೆ; ಜಾಮೀನು ಪಡೆದು ಮತ್ತೆ 25 ಕೋಟಿ ರೂ., ಲೂಟಿ
ಸರ್ಕಾರಿ ಕೆಲಸದ ಆಮಿಷವೊಡ್ಡಿ ನಕಲಿ ನೇಮಕಾತಿ ಪತ್ರಗಳ ಮೂಲಕ 450ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ದಂಪತಿಗಳು, ಈ ಹಿಂದೆ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದರು
ಒಂದೆಡೆ ಸರ್ಕಾರಿ ಉದ್ಯೋಗಕ್ಕಾಗಿ ಯುವಜನತೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಬಹುತೇಕರು ಸರ್ಕಾರಿ ಹುದ್ದೆ ಪಡೆದುಕೊಂಡರೆ ಸಾಕು, ಜೀವನದಲ್ಲಿ ಏನಾದರೂ ಸಾಧಿಸಬಹುದು, ನೆಮ್ಮದಿಯ ಬದುಕು ಸಾಗಿಸಬಹುದು ಎಂಬೆಲ್ಲ ಲೆಕ್ಕಾಚಾರಗಳಲ್ಲಿದ್ದಾರೆ. ಇಂತಹ ಲೆಕ್ಕಾಚಾರಗಳನ್ನೇ ಬಂಡವಾಳವಾಗಿಸಿಕೊಂಡಿರುವ ಈ ದಂಪತಿಗಳು, ಸರ್ಕಾರಿ ಕೆಲಸದ ಆಮಿಷದೊಂದಿಗೆ ನಕಲಿ ನೇಮಕಾತಿ ಪತ್ರಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಲೂಟಿ ಮಾಡಿದ್ದಾರೆ.
ಈ ಹಿಂದೆಯೂ ಇದೇ ಪ್ರಕರಣಗಳಲ್ಲಿ ಜೈಲು ಸೇರಿದ್ದ ಈ ದಂಪತಿಗಳು ಜಾಮೀನು ಪಡೆದು ಹೊರಬಂದು, ಮತ್ತೆ ಇಂತಹದ್ದೇ ಕೃತ್ಯ ನಡೆಸಿರುವುದು ನ್ಯಾಯಾಲಯವನ್ನು ಬೆಚ್ಚಿಬೀಳಿಸಿದೆ. ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 450ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದ ಆರು ಮಂದಿಯನ್ನು ಹಾಗೂ ಪ್ರತ್ಯೇಕ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಸುಮಾರು 25 ಕೋಟಿ ರೂ. ಪಂಗನಾಮ ಹಾಕಿದ್ದ ಜೇಸನ್ ಡಿಸೋಜಾ ಮತ್ತು ಲವಿನಾ ಎಂಬ ದಂಪತಿಯನ್ನು ಬಂಧಿಸಿದ್ದಾರೆ.
ಕಚೇರಿಗಳಲ್ಲಿಯೇ ವಂಚನೆ
ಬೆಂಗಳೂರಿನ ಸಹಕಾರ ನಗರದಲ್ಲಿ ‘ದೀಕ್ಷಾ ಎಜುಕೇಶನ್ ಅಕಾಡೆಮಿ’ ಹಾಗೂ ‘ಆಶೀರ್ವಾದ್ ಎಂಟರ್‌ಪ್ರೈಸಸ್’ ಎಂಬ ಕಚೇರಿಗಳನ್ನು ತೆರೆದಿದ್ದ ತಂಡವು, ತಾನು ಅಧಿಕೃತವಾಗಿ ಉದ್ಯೋಗ ಕೊಡಿಸುವ ಸಂಸ್ಥೆಯೆಂದು ಬಿಂಬಿಸಿಕೊಂಡಿತ್ತು. ನ್ಯಾಯಾಲಯಗಳಲ್ಲಿ ಖಾಲಿ ಇರುವ ಎಸ್‌ಡಿಎ, ಎಫ್‌ಡಿಎ, ಪ್ರೊಸೆಸ್ ಸರ್ವರ್ ಮತ್ತು ಡಿ-ಗ್ರೂಪ್ ಹುದ್ದೆಗಳಿಗೆ ಲಕ್ಷಾಂತರ ರೂಪಾಯಿ ಬೇಡಿಕೆಯಿಡುತ್ತಿದ್ದರು. ಅಭ್ಯರ್ಥಿಗಳಿಗೆ ನಕಲಿ 'ಗ್ರೀನ್‌ಶೀಟ್' ನೀಡಿ ಸಹಿ ಪಡೆಯುವುದು ಮಾತ್ರವಲ್ಲದೆ, ನ್ಯಾಯಾಧೀಶರ ನಕಲಿ ಸಹಿ ಹಾಗೂ ನ್ಯಾಯಾಲಯದ ಅಧಿಕೃತ ಮೊಹರುಗಳನ್ನು ಒಳಗೊಂಡ ನಕಲಿ ನೇಮಕಾತಿ ಆದೇಶ ಪ್ರತಿಗಳನ್ನು ಸೃಷ್ಟಿಸಿ ನೀಡುತ್ತಿದ್ದರು. ಇದರಿಂದಾಗಿ ಅಭ್ಯರ್ಥಿಗಳು ತಮಗೆ ಕೆಲಸ ಸಿಕ್ಕೇ ಬಿಟ್ಟಿದೆ ಎಂದು ನಂಬಿ ತಮ್ಮ ಜೀವನದ ಉಳಿತಾಯವನ್ನೆಲ್ಲ ಇವರ ಕೈಗಿಡುತ್ತಿದ್ದರು.
ಕೋರ್ಟ್ ಆವರಣದಲ್ಲೇ ನಾಟಕ
ಈ ಹಗರಣದ ಮತ್ತೊಂದು ಗಾಬರಿ ಹುಟ್ಟಿಸುವ ಮುಖವೆಂದರೆ ಬಂಧಿತ ದಂಪತಿಗಳಾದ ಜೇಸನ್ ಡಿಸೋಜಾ ಮತ್ತು ಲವಿನಾ ಅವರ ಕಾರ್ಯವೈಖರಿ. ಇವರು ಕೇವಲ ಕಚೇರಿಗಳಿಗೆ ಸೀಮಿತವಾಗದೆ, ಉದ್ಯೋಗಾಕಾಂಕ್ಷಿಗಳನ್ನು ನೇರವಾಗಿ ನ್ಯಾಯಾಲಯದ ಸಂಕೀರ್ಣಗಳಿಗೇ ಕರೆದೊಯ್ಯುತ್ತಿದ್ದರು. ಅಲ್ಲಿನ ಕಟ್ಟಡಗಳನ್ನು ತೋರಿಸಿ, "ಇದೇ ನಿಮ್ಮ ಕೆಲಸದ ಸ್ಥಳ" ಎಂದು ನಂಬಿಸುತ್ತಿದ್ದರು. ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಯನ್ನು ಲಾಡ್ಜ್‌ಗಳಲ್ಲಿ ನಡೆಸುತ್ತಿದ್ದ ಇವರು, ಪ್ರತಿಯೊಬ್ಬರಿಂದ 10 ಲಕ್ಷ ರೂ.ನಿಂದ 25 ಲಕ್ಷ ರೂ.ವರೆಗೂ ವಸೂಲಿ ಮಾಡುತ್ತಿದ್ದರು. ಮಂಜುನಾಥ್ ಎಂಬ ಸಂತ್ರಸ್ತನನ್ನು ನ್ಯಾಯಾಲಯದ ಮೂರನೇ ಮಹಡಿಗೆ ಕರೆದೊಯ್ದು ಕೆಲಸದ ಭರವಸೆ ನೀಡಿ 13.5 ಲಕ್ಷ ರೂ. ಪಂಗನಾಮ ಹಾಕಿದ್ದಾರೆ.
ಜಾಮೀನು ಪಡೆದು ಮತ್ತೆ ಅದೇ ಹಳೆ ಕೃತ್ಯ
ಈ ದಂಪತಿಗಳು ವೃತ್ತಿಪರ ವಂಚಕರಾಗಿದ್ದು, 2023ರಿಂದ ಸಕ್ರಿಯರಾಗಿದ್ದಾರೆ. ಇವರ ಮೇಲೆ 2025ರಲ್ಲಿ ಗದಗ ಸೇರಿದಂತೆ ರಾಜ್ಯದ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಎರಡು ವರ್ಷಗಳ ಹಿಂದೆ ಇದೇ ರೀತಿಯ ಕೃತ್ಯಕ್ಕಾಗಿ ಇವರನ್ನು ಬಂಧಿಸಲಾಗಿತ್ತು. ಆದರೆ, ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಕೆಲವೇ ದಿನಗಳಲ್ಲಿ, ಮತ್ತೆ ಅದೇ ಹಳೆಯ ಏಜೆಂಟ್‌ಗಳ ಜಾಲವನ್ನು ಬಳಸಿಕೊಂಡು ಹೊಸ ರೂಪದಲ್ಲಿ ವಂಚನೆ ಆರಂಭಿಸಿದ್ದರು.
ಸಂತ್ರಸ್ತರು ಬಸವೇಶ್ವರನಗರ ಹಾಗೂ ವಿವಿಧ ಠಾಣೆಗಳಲ್ಲಿ ನೀಡಿದ ದೂರಿನ ಮೇರೆಗೆ ಸಿಸಿಬಿಯ ವಿಶೇಷ ವಿಚಾರಣಾ ದಳವು ನಡೆಸಿದ ಕಾರ್ಯಾಚರಣೆಯಲ್ಲಿ 38 ಲಕ್ಷ ರೂ. ನಗದು ಪತ್ತೆಯಾಗಿದೆ. ಬಂಧಿತರು ಸುಮಾರು 25 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಸರ್ಕಾರಿ ನೇಮಕಾತಿಗಳು ಕೇವಲ ಅಧಿಕೃತ ಮಂಡಳಿಗಳಿಂದ ಮಾತ್ರ ನಡೆಯುತ್ತವೆ ಎಂಬ ಅರಿವು ಜನರಲ್ಲಿ ಇಲ್ಲದಿರುವುದನ್ನು ಇವರು ಸದುಪಯೋಗ ಪಡಿಸಿಕೊಂಡಿದ್ದಾರೆ. ಯಾವುದೇ ಕೆಲಸಕ್ಕೆ ಹಣ ಕೇಳುವುದು ಅಪರಾಧ ಹಾಗೂ ನ್ಯಾಯಾಲಯದ ಹೆಸರಲ್ಲಿ ಬರುವ ನೇಮಕಾತಿ ಪತ್ರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪರಿಶೀಲಿಸದ ಹೊರತು ಯಾರನ್ನೂ ನಂಬಬಾರದು ಎಂದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

