ಗೋಕಾಕ್: ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಏಳು ಮಂದಿ ಖದೀಮರ ಬಂಧನ
x

ಗೋಕಾಕ್: ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಏಳು ಮಂದಿ ಖದೀಮರ ಬಂಧನ

ಮಾರ್ಚ್ 17 ರಂದು ಗೋಕಾಕ್ ನಗರದಲ್ಲಿ ರಾಮಚಂದ್ರ ಘೋರ್ಪಡೆ ಎಂಬುವವರನ್ನು ಅಡ್ಡಗಟ್ಟಿದ್ದ ಈ ಗ್ಯಾಂಗ್, 16 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ ಲಾಕೆಟ್ ಅನ್ನು ಕಸಿದುಕೊಂಡು ಪರಾರಿಯಾಗಿತ್ತು.


Click the Play button to hear this message in audio format

ಒಂಟಿಯಾಗಿ ಹೋಗುತ್ತಿದ್ದ ಜನರನ್ನು ಅಡ್ಡಗಟ್ಟಿ ಬೆದರಿಸಿ ದರೋಡೆ ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್‌ವೊಂದನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ರಸ್ತೆಯಲ್ಲಿ ಹೋಗುವವರ ಬಳಿಯಿರುವ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಳ್ಳುತ್ತಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು ಏಳು ಮಂದಿ ಖದೀಮರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ನಗರದಲ್ಲಿ ನಡೆಯುತ್ತಿದ್ದ ಸರಣಿ ದರೋಡೆಗಳಿಗೆ ಬ್ರೇಕ್ ಬಿದ್ದಂತಾಗಿದೆ.

ಮಾರ್ಚ್ 17 ರಂದು ಗೋಕಾಕ್ ನಗರದಲ್ಲಿ ದಾರಿಹೋಕರಾದ ರಾಮಚಂದ್ರ ಘೋರ್ಪಡೆ ಎಂಬುವವರನ್ನು ಅಡ್ಡಗಟ್ಟಿದ್ದ ಈ ಗ್ಯಾಂಗ್, ಅವರ ಕೊರಳಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ ಲಾಕೆಟ್ ಅನ್ನು ಬಲವಂತವಾಗಿ ಕಸಿದುಕೊಂಡು ಪರಾರಿಯಾಗಿತ್ತು. ಈ ಕುರಿತು ರಾಮಚಂದ್ರ ಅವರು ಗೋಕಾಕ್ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಪರಾಧಿಗಳ ಪತ್ತೆಗಾಗಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದರು. ಖಚಿತ ಮಾಹಿತಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಡೀ ಗ್ಯಾಂಗ್ ಅನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕೇವಲ 12 ಸಾವಿರಕ್ಕೆ ಚಿನ್ನ ಮಾರಾಟ ಮಾಡಿದ್ದ ಖದೀಮರು!

ಬಂಧಿತ ಆರೋಪಿಗಳನ್ನು ಆಕಾಶ ತಳವಾರ, ರಾಮಸಿದ್ದ ತೋಳಿ, ರಿತೀಶ ಫಕ್ಕೇರಿ, ನಾಗರಾಜ್ ತೋಳಿ, ಗೋಪಾಲ ತೋಳಿ ಹಾಗೂ ಸಿದ್ದಪ್ಪ ಕುರಬನ್ನವರ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್‌ನಲ್ಲಿ ಓರ್ವ ಅಪ್ರಾಪ್ತ ಬಾಲಕನೂ ಶಾಮೀಲಾಗಿದ್ದಾನೆ. ರಾಮಚಂದ್ರ ಅವರಿಂದ ದೋಚಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಚೈನ್ ಮತ್ತು ಲಾಕೆಟ್ ಅನ್ನು ಈ ಖದೀಮರು ಕೇವಲ 12 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ. ಸದ್ಯ ಬಂಧಿತರಿಂದ ಆ 12 ಸಾವಿರ ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Read More
Next Story