Koppala Crime News| ವಿಶೇಷಚೇತನ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ವೈರಲ್-ಕಾಮುಕ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
x
ಜೀವಾವಧಿ ಶಿಕ್ಷೆ ಗುರಿಯಾದ ಮಹಮ್ಮದ್ ಅಜರುದ್ದೀನ್

Koppala Crime News| ವಿಶೇಷಚೇತನ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ವೈರಲ್-ಕಾಮುಕ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ನಾಲ್ಕು ವರ್ಷಗಳ ಸುದೀರ್ಘ ನ್ಯಾಯಾಂಗ ಹೋರಾಟದ ನಂತರ ನೊಂದ ಮಹಿಳೆಗೆ ನ್ಯಾಯ ಸಿಕ್ಕಂತಾಗಿದ್ದು, ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.


Click the Play button to hear this message in audio format

ಸಮಾಜಕ್ಕೆ ಮಾದರಿಯಾಗಬೇಕಾದ ಗುರುವೊಬ್ಬ ಹೀನಾಯ ಕೃತ್ಯವೆಸಗಿ ಜೈಲು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಅಸಹಾಯಕ ವಿಶೇಷಚೇತನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕಿದ್ದ ಸರ್ಕಾರಿ ಶಾಲಾ ಶಿಕ್ಷಕ ಮಹಮ್ಮದ್ ಅಜರುದ್ದೀನ್​​ಗೆ ಗಂಗಾವತಿ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಕೆಲಸದ ಆಮಿಷವೊಡ್ಡಿ ದೌರ್ಜನ್ಯ

ಆರೋಪಿ ಮಹಮ್ಮದ್ ಅಜರುದ್ದೀನ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ತನಗೆ ಪರಿಚಯವಿದ್ದ ವಿಶೇಷಚೇತನ ಮಹಿಳೆಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಫುಸಲಾಯಿಸಿದ್ದನು. ಈ ಆಮಿಷವೊಡ್ಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಆ ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದನು.

ಲೈಂಗಿಕ ದೌರ್ಜನ್ಯದ ನಂತರವೂ ಮಹಿಳೆಯನ್ನು ಸುಮ್ಮನಿರಲು ಬಿಡದ ಈ ಶಿಕ್ಷಕ, ವಿಡಿಯೋ ಇಟ್ಟುಕೊಂಡು ಆಕೆಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದನು. 2022ರ ಜೂನ್ 30ರಂದು ಆಕೆಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ್ದನು. ಅಷ್ಟೇ ಅಲ್ಲದೆ, ಆಕೆಯೊಂದಿಗಿನ ಲೈಂಗಿಕ ಸಂಪರ್ಕದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದನು.

ನಾಲ್ಕು ವರ್ಷಗಳ ನ್ಯಾಯಾಂಗ ಹೋರಾಟ

ಈ ಅಮಾನವೀಯ ಘಟನೆಯ ಕುರಿತು ನೊಂದ ಮಹಿಳೆಯು ಜುಲೈ 2, 2022ರಂದು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಅಜರುದ್ದೀನ್‌ನನ್ನು ಬಂಧಿಸಿದ್ದರು. ಆರಂಭದಲ್ಲಿ ಬಂಧಿತನಾಗಿದ್ದ ಈತ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದನು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು, 2026 ರ ಫೆಬ್ರವರಿ 18 ರಂದು ಅಜರುದ್ದೀನ್ ಆರೋಪಿ ಎಂದು ತೀರ್ಪು ನೀಡಿದ್ದರು. ಆರೋಪ ಸಾಬೀತಾದ ತಕ್ಷಣ ಪೊಲೀಸರು ಈತನನ್ನು ಮತ್ತೆ ವಶಕ್ಕೆ ಪಡೆದಿದ್ದರು. ಫೆ. 28 ರಂದು ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಲಯವು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನೊಂದ ಮಹಿಳೆಗೆ ನಾಲ್ಕು ವರ್ಷಗಳ ಸುದೀರ್ಘ ಹೋರಾಟದ ನಂತರ ನ್ಯಾಯ ಸಿಕ್ಕಂತಾಗಿದೆ.

Read More
Next Story