
ರೋಣ ಬಳಿ ಕ್ರೂಸರ್-ಕ್ಯಾಂಟರ್ ಲಾರಿ ಡಿಕ್ಕಿ, ಮೂವರು ಮಹಿಳಾ ಕಾರ್ಮಿಕರ ದುರ್ಮರಣ.
ಗದಗದಲ್ಲಿ ಭೀಕರ ರಸ್ತೆ ಅಪಘಾತ| ಕಡಲೆ ಕೀಳಲು ತೆರಳುತ್ತಿದ್ದ ಮೂವರು ಸಾವು
ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಕ್ರೂಸರ್ ಹಾಗೂ ಕ್ಯಾಂಟರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಗಜೇಂದ್ರಗಡ ಮೂಲದ ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬದುಕಿನ ಬಂಡಿ ಸಾಗಿಸಲು ಬೆಳ್ಳಂಬೆಳಿಗ್ಗೆ ಕೂಲಿಗೆ ಹೊರಟಿದ್ದ ರೈತ ಮಹಿಳೆಯರ ಪಾಲಿಗೆ ಗುರುವಾರ (ಫೆಬ್ರವರಿ 5) ಕರಾಳ ದಿನವಾಗಿ ಪರಿಣಮಿಸಿದೆ. ಕ್ರೂಸರ್ ವಾಹನ ಮತ್ತು ಕ್ಯಾಂಟರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮಹಿಳಾ ಕೃಷಿ ಕಾರ್ಮಿಕರು ಸ್ಥಳದಲ್ಲೇ ಪ್ರಾಣಬಿಟ್ಟರೆ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಮನಕಲಕುವ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಿಗಳೂರು (Jigalur) ಕ್ರಾಸ್ ಬಳಿ ನಡೆದಿದೆ.
ಮೃತಪಟ್ಟವರನ್ನು ಗಜೇಂದ್ರಗಡ ಪಟ್ಟಣದ ಶಿವಾಜಿಪೇಟೆಯ ನಿವಾಸಿಗಳಾದ ಮರಿಯಂ ಹುನಗುಂದ (55), ಅನ್ನಪೂರ್ಣ ಚಂಗಳಿ (45), ಮತ್ತು ಸಂಗೀತ ಹೊಸಮನಿ (48) ಎಂದು ಗುರುತಿಸಲಾಗಿದೆ. ಇವರೆಲ್ಲರೂ ನಿತ್ಯದಂತೆ ಕಡಲೆ ಕೀಳುವ ಕೃಷಿ ಕೆಲಸಕ್ಕಾಗಿ ಗಜೇಂದ್ರಗಡದಿಂದ ರೋಣದ ಕಡೆಗೆ ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದರು.
ಜಿಗಳೂರು ಕ್ರಾಸ್ ಬಳಿ ಬರುತ್ತಿದ್ದಂತೆ, ಎದುರಿನಿಂದ ಅತಿವೇಗವಾಗಿ ಬಂದ ಕ್ಯಾಂಟರ್ ಲಾರಿ, ಕಾರ್ಮಿಕರಿದ್ದ ಕ್ರೂಸರ್ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದೊಳಗಿದ್ದವರು ಹೊರಬರಲಾಗದೆ ಪರದಾಡುವಂತಾಯಿತು. ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ ದುರದೃಷ್ಟವಶಾತ್, ಗಂಭೀರವಾಗಿ ಪೆಟ್ಟು ಬಿದ್ದಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಕೊನೆಯುಸಿರೆಳೆದರು.
ಗಾಯಾಳುಗಳ ಸ್ಥಿತಿ ಹೇಗಿದೆ?
ಅಪಘಾತದಲ್ಲಿ 15ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ್‌ನ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ 13 ಮಂದಿ ಗಾಯಾಳುಗಳಿಗೆ ರೋಣದ ಪಂಡಿತ್ ಭೀಮಸೇನ ಜೋಶಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೈ-ಕಾಲು ಮುರಿತಕ್ಕೆ ಒಳಗಾಗಿರುವ ಹಲವರ ಆಕ್ರಂದನ ಆಸ್ಪತ್ರೆ ಆವರಣದಲ್ಲಿ ಮುಗಿಲುಮುಟ್ಟಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ರೋಣ ಠಾಣೆ ಪೊಲೀಸರು ಮತ್ತು ಗದಗ ಎಸ್ಪಿ ರೋಹನ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಟರ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಗಳೂರು ಕ್ರಾಸ್ ಬಳಿ ಪದೇ ಪದೇ ಇಂತಹ ಅಪಘಾತಗಳು ನಡೆಯುತ್ತಿದ್ದು, ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮೂವರು ಪ್ರವಾಸಿಗರ ಸಾವು
ಪ್ರತ್ಯೇಕ ಘಟನೆಯೊಂದರಲ್ಲಿ ಇತ್ತೀಚೆಗೆ ಪ್ರವಾಸದ ಮಜಾ ಮುಗಿಸಿ ಮನೆಗೆ ಮರಳುತ್ತಿದ್ದವರ ಪಾಲಿಗೆ ವಿಧಿ ಮೃತ್ಯುವಿನ ರೂಪದಲ್ಲಿ ಎದುರಾದ ದುರ್ಘಟನೆ (ಜನವರಿ 26) ತುಮಕೂರು ತಾಲೂಕಿನ ನೆಲಹಾಳ್ ಬಳಿ ನಡೆದಿತ್ತು. ಗೋಕರ್ಣ, ಮುರುಡೇಶ್ವರ ಮತ್ತು ಉಡುಪಿ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ಮಾರುತಿ ಎರ್ಟಿಗಾ ಕಾರು, ರಾಷ್ಟ್ರೀಯ ಹೆದ್ದಾರಿ 48ರ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಮೂವರು ಪ್ರವಾಸಿಗರು ಸ್ಥಳದಲ್ಲೇ ಮೃತಪಟ್ಟಿದ್ದರು. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿತ್ತು.
ವಿಷಯ ತಿಳಿದ ತಕ್ಷಣ ತುಮಕೂರು ಎಸ್ಪಿ ಅಶೋಕ್ ಕೆ.ವಿ. ಮತ್ತು ಕೋರಾ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅತಿವೇಗ ಮತ್ತು ಚಾಲಕನ ನಿಯಂತ್ರಣ ತಪ್ಪಿದ್ದೇ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಬೆಳಗಿನ ಜಾವದ ಮಂಪರು ಅಥವಾ ಕಡಿಮೆ ಗೋಚರತೆಯೂ ಇದಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಹೆದ್ದಾರಿಗಳಲ್ಲಿ ಅಸುರಕ್ಷಿತವಾಗಿ ವಾಹನ ನಿಲ್ಲಿಸುವ ಲಾರಿಗಳ ವಿರುದ್ಧ ಮತ್ತು ರಾತ್ರಿ ವೇಳೆ ಚಾಲನೆಯ ಎಚ್ಚರಿಕೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.

