
ಡಿಕ್ಕಿಯ ಪರಿಣಾಮ ಕಿಡಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಹಾಗೂ ಪೆಟ್ರೋಲ್ ಪಂಪ್ ಬೆಂಕಿಗೆ ಆಹುತಿಯಾಗಿವೆ.
ಪೆಟ್ರೋಲ್ ಬಂಕ್‌ಗೆ ಡಿಕ್ಕಿ ಹೊಡೆದ ಜಾಗ್ವಾರ್ ; ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಕಾರು, ಬಂಕ್
ಅತ್ತಿಬೆಲೆಯ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಘಟನೆ ಸಂಭವಿಸಿದ್ದು. ಕುಡಿದ ಮತ್ತಿನಲ್ಲಿ ಜಾಗ್ವಾರ್ ಚಾಲಕ ಸಂಜಯ್ ನೇರವಾಗಿ ಕಾರನ್ನು ಪೆಟ್ರೋಲ್ ಬಂಕ್‌ಗೆ ಅಪ್ಪಳಿಸಿದ್ದಾನೆ. ಪರಿಣಾಮವಾಗಿ ಈ ಭಾರೀ ದುರಂತ ಸಂಭವಿಸಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿ ಮದ್ಯದ ಅಮಲಿನಲ್ಲಿ ಚಾಲಕನೋರ್ವ ಅತಿವೇಗವಾಗಿ ಚಲಾಯಿಸುತ್ತಿದ್ದ ಜಾಗ್ವಾರ್ ಕಾರೊಂದು ನಿಯಂತ್ರಣ ಕಳೆದುಕೊಂಡು ಪೆಟ್ರೋಲ್ ಬಂಕ್‌ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಡಿಕ್ಕಿಯ ಬೆನ್ನಲ್ಲೇ ಕಾರು ಹಾಗೂ ಪೆಟ್ರೋಲ್ ಪಂಪ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅತ್ತಿಬೆಲೆಯ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಘಟನೆ ಸಂಭವಿಸಿದೆ. ಸಂಜಯ್ ಎಂಬಾತ ಯುವತಿಯೊಬ್ಬಳೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ವೇಗವಾಗಿ ಬಂದ ಕಾರು ಬಂಕ್ ಸಿಬ್ಬಂದಿ ಗುಡ್ಡು ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ಪೆಟ್ರೋಲ್ ಪಂಪ್‌ಗೆ ನೇರವಾಗಿ ಅಪ್ಪಳಿಸಿದೆ.
ಡಿಕ್ಕಿಯ ಪರಿಣಾಮ ಉಂಟಾದ ಕಿಡಿಯಿಂದ ಕೆಲವೇ ಕ್ಷಣಗಳಲ್ಲಿ ಕಾರು ಮತ್ತು ಪೆಟ್ರೋಲ್ ಪಂಪ್‌ಗೆ ಬೆಂಕಿ ವ್ಯಾಪಿಸಿದೆ. ಅಪಾಯದ ಮುನ್ಸೂಚನೆ ಅರಿತ ಕಾರಿನಲ್ಲಿದ್ದ ಯುವಕ ಹಾಗೂ ಯುವತಿ ತಕ್ಷಣ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಬಂಕ್ ಸಿಬ್ಬಂದಿ ಗುಡ್ಡು ಕುಮಾರ್ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಿಯಂತ್ರಣ
ಬೆಂಕಿ ಕಾಣಿಸಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ಎಲೆಕ್ಟ್ರಾನಿಕ್ ಸಿಟಿ, ಆನೇಕಲ್ ಹಾಗೂ ತಮಿಳುನಾಡಿನ ಹೊಸೂರು ಭಾಗದಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಸತತ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಮತ್ತಷ್ಟು ದೊಡ್ಡ ಅನಾಹುತ ಸಂಭವಿಸುವುದನ್ನು ತಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಾಗ್ವಾರ್ ಕಾರು ಚಾಲನೆ ಮಾಡುತ್ತಿದ್ದ ಸಂಜಯ್‌ನನ್ನು ಅತ್ತಿಬೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ಹಾಗೂ ಚಾಲಕನ ಸ್ಥಿತಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.
