ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಸ್ಥಿಪಂಜರ ಪತ್ತೆ: ಕೊಲೆಯೋ ಅಥವಾ ಆತ್ಮಹತ್ಯೆಯೋ?
x

ಸಾಂದರ್ಭಿಕ ಚಿತ್ರ 

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಸ್ಥಿಪಂಜರ ಪತ್ತೆ: ಕೊಲೆಯೋ ಅಥವಾ ಆತ್ಮಹತ್ಯೆಯೋ?

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾಗಿರುವ ಅಸ್ತಿಪಂಜರ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್ ಸಮೀಪವಿರುವ ಖಾಸಗಿ ಆವರಣವೊಂದರಲ್ಲಿ ಐದಾರು ತಿಂಗಳ ಹಳೆಯದಾದ ಅಸ್ಥಿಪಂಜರವೊಂದು ಪತ್ತೆಯಾಗಿದ್ದು, ಕಾರ್ಮಿಕ ವಲಯ ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ಸುಮಾರು 8 ಎಕರೆ ವಿಸ್ತೀರ್ಣದ ಪಾಳುಬಿದ್ದ ಜಾಗವೊಂದರಲ್ಲಿರುವ ಹೊಂಗೆ ಮರಕ್ಕೆ ವ್ಯಕ್ತಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದೇಹವು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಕೇವಲ ಮೂಳೆಗಳು ಕಂಡುಬಂದಿವೆ. ಕಳೆದ ಹಲವು ತಿಂಗಳಿಂದ ಈ ಆವರಣಕ್ಕೆ ಯಾರೂ ಬಾರದೆ ನಿರ್ಜನವಾಗಿತ್ತು. ಮರದ ಸುತ್ತ ಬೆಳೆದಿರುವ ದಟ್ಟವಾದ ಪೊದೆಗಳು ಮತ್ತು ಗಿಡಗಂಟಿಗಳ ನಡುವೆ ಶವ ನೇತಾಡುತ್ತಿದ್ದ ಕಾರಣ, ಈ ಭೀಕರ ಘಟನೆ ಇಷ್ಟು ದಿನಗಳ ಕಾಲ ಹೊರಜಗತ್ತಿಗೆ ತಿಳಿದುಬಂದಿರಲಿಲ್ಲ. ದೇಹದ ಮಾಂಸಖಂಡಗಳು ಕೊಳೆತು ಉದುರಿಹೋಗಿದ್ದು, ಬುರುಡೆ ಮಾತ್ರ ಮರದ ಕೊಂಬೆಗೆ ನೇತಾಡುತ್ತಿತ್ತು; ಉಳಿದ ದೇಹದ ಭಾಗಗಳು ಕೆಳಗೆ ಬಿದ್ದಿದ್ದವು ಎನ್ನಲಾಗಿದೆ.

ತನಿಖೆ ಆರಂಭಿಸಿದ ಪೊಲೀಸರು

ಅಸ್ಥಿಪಂಜರ ಪತ್ತೆಯಾದ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಅಸ್ಥಿಪಂಜರವು ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಘಟನೆ ನಡೆದು ಹಲವು ತಿಂಗಳುಗಳೇ ಕಳೆದಿರುವುದರಿಂದ ಸಾವಿನ ನಿಖರ ಕಾರಣ ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಗುರುತು ಪತ್ತೆಗೆ ತೀವ್ರ ಶೋಧ

ಪೊಲೀಸರು ಶವದ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಟ್ಟಿದ್ದಾರೆ. ಕಳೆದ 6 ತಿಂಗಳ ಅವಧಿಯಲ್ಲಿ ದೊಡ್ಡಬಳ್ಳಾಪುರ, ಬಾಶೆಟ್ಟಿಹಳ್ಳಿ ಮತ್ತು ಸುತ್ತಮುತ್ತಲ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 'ವ್ಯಕ್ತಿ ನಾಪತ್ತೆ' (Missing Person) ಪ್ರಕರಣಗಳ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಅಸ್ಥಿಪಂಜರದ ಮೇಲಿರುವ ಬಟ್ಟೆಯ ಚೂರುಗಳು ಅಥವಾ ವ್ಯಕ್ತಿ ಧರಿಸಿದ್ದ ಇತರೆ ವಸ್ತುಗಳ ಆಧಾರದ ಮೇಲೆ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

Read More
Next Story