
ಸೆಕ್ಟರ್-54 ವ್ಯಾಪ್ತಿಯ ಬಂಜಾರಾ ಮಾರ್ಕೆಟ್ ಬಳಿಯ ಕೊಳೆಗೇರಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಬಿಹಾರ ಮೂಲದ ಸೋನು ಕುಮಾರ್ (19) ಹಾಗೂ ಮೊಹಮ್ಮದ್ ಮಿರಾಜ್ (20) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Murder Case | ಪತ್ನಿಯ ಪ್ರಿಯಕರನಿಂದಲೇ ಡೆಲಿವರಿ ಬಾಯ್ ಕೊಲೆ; ಟ್ರಂಕ್ನಲ್ಲಿ ಶವ ಪತ್ತೆ
ಸೆಕ್ಟರ್-54 ವ್ಯಾಪ್ತಿಯ ಬಂಜಾರಾ ಮಾರ್ಕೆಟ್ ಬಳಿಯ ಕೊಳೆಗೇರಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಬಿಹಾರ ಮೂಲದ ಸೋನು ಕುಮಾರ್ (19) ಹಾಗೂ ಮೊಹಮ್ಮದ್ ಮಿರಾಜ್ (20) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹರಿಯಾಣದ ಗುರುಗ್ರಾಮದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ 24 ವರ್ಷದ ಯುವಕನೊಬ್ಬನನ್ನು ಆತನ ಪತ್ನಿಯ ಪ್ರಿಯಕರನೇ ತನ್ನ ಸ್ನೇಹಿತನೊಂದಿಗೆ ಸೇರಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆಯ ಬಳಿಕ ಯುವಕನ ಮೃತದೇಹವನ್ನು ಕಬ್ಬಿಣದ ಟ್ರಂಕ್ನಲ್ಲಿ (ಪೆಟ್ಟಿಗೆ) ಬಚ್ಚಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಸೆಕ್ಟರ್-54 ವ್ಯಾಪ್ತಿಯ ಬಂಜಾರಾ ಮಾರ್ಕೆಟ್ ಬಳಿಯ ಕೊಳೆಗೇರಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಬಿಹಾರ ಮೂಲದ ಸೋನು ಕುಮಾರ್ (19) ಹಾಗೂ ಮೊಹಮ್ಮದ್ ಮಿರಾಜ್ (20) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅನೈತಿಕ ಸಂಬಂಧವೇ ಕೊಲೆಗೆ ಕಾರಣ
ಮೃತ ಯುವಕನನ್ನು ಬಿಹಾರದ ಸಹರ್ಸಾ ಜಿಲ್ಲೆಯ ಮೂಲದ ಅಮನ್ ಎಂದು ಗುರುತಿಸಲಾಗಿದೆ. ಆತ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದನು. ಆತನ ಪತ್ನಿ ಸುನಿತಾ ಮನೆಗೆಲಸ ಮಾಡುತ್ತಿದ್ದಳು. ವಿಚಾರಣೆ ವೇಳೆ ಆರೋಪಿ ಸೋನು ಕುಮಾರ್, ತನಗೆ ಅಮನ್ನ ಪತ್ನಿ ಸುನಿತಾ ಜೊತೆ ಅನೈತಿಕ ಸಂಬಂಧವಿತ್ತೆಂದು ಒಪ್ಪಿಕೊಂಡಿದ್ದಾನೆ. ಈ ವಿಚಾರ ಇತ್ತೀಚೆಗಷ್ಟೇ ಅಮನ್ಗೆ ತಿಳಿದಿತ್ತು. ಇದೇ ಕಾರಣಕ್ಕೆ ಮೂರ್ನಾಲ್ಕು ದಿನಗಳ ಹಿಂದೆ ಇಬ್ಬರ ನಡುವೆ ದೊಡ್ಡ ಜಗಳ ನಡೆದಿತ್ತು.
ಅಮನ್ನಿಂದ ತನಗೆ ಅಪಾಯವಿದೆ ಎಂದು ಹೆದರಿದ ಸೋನು, ಆತನನ್ನು ಮುಗಿಸಲು ಸಂಚು ರೂಪಿಸಿದ್ದಾನೆ. ಏಪ್ರಿಲ್ 25ರಂದು ಮುಂಜಾನೆ 6:30ರ ಸುಮಾರಿಗೆ ಸುನಿತಾ ಕೆಲಸಕ್ಕೆ ಹೋದ ಬಳಿಕ, ಅಮನ್ ಒಂಟಿಯಾಗಿದ್ದಾಗ ಮನೆಯೊಳಗೆ ನುಗ್ಗಿದ ಸೋನು ಹಾಗೂ ಆತನ ಸ್ನೇಹಿತ ಮಿರಾಜ್ ಈ ಕೃತ್ಯ ಎಸಗಿದ್ದಾರೆ. ಒಬ್ಬಾತ ಅಮನ್ನ ಕಾಲುಗಳನ್ನು ಹಿಡಿದುಕೊಂಡರೆ, ಮತ್ತೊಬ್ಬ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಕಬ್ಬಿಣದ ಟ್ರಂಕ್ನಲ್ಲಿ ಹಾಕಿ ಬೀಗ ಜಡಿದು ಇಬ್ಬರೂ ಪರಾರಿಯಾಗಿದ್ದರು. ಮೃತದೇಹದ ಕುತ್ತಿಗೆಯ ಮೇಲೆ ಗಾಯಗಳು ಹಾಗೂ ಮುಖದ ಮೇಲೆ ಸುಟ್ಟ ಕಲೆಗಳು ಪತ್ತೆಯಾಗಿವೆ.
ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದ ಪತ್ನಿ!
ಭಾನುವಾರ ಸಂಜೆ ಅಮನ್ನ ಅಣ್ಣ ಉಮಾಶಂಕರ್ಗೆ ಕರೆ ಮಾಡಿದ ಸುನಿತಾ, "ಅಮನ್ನ ಸ್ನೇಹಿತನೊಬ್ಬ ಆತನನ್ನು ಕೊಲೆ ಮಾಡಿ ಶವವನ್ನು ಟ್ರಂಕ್ನಲ್ಲಿ ಬಚ್ಚಿಟ್ಟಿದ್ದಾನೆ" ಎಂದು ತಿಳಿಸಿದ್ದಾಳೆ. ಗಾಬರಿಯಿಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಉಮಾಶಂಕರ್, ಮನೆಯೊಳಗಿದ್ದ ಟ್ರಂಕ್ನಲ್ಲಿ ತಮ್ಮನ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಚುರುಕುಗೊಳಿಸಿ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆಯಲ್ಲಿ ಪತ್ನಿ ಸುನಿತಾಳ ಪಾತ್ರದ ಬಗ್ಗೆಯೂ ಪೊಲೀಸರಿಗೆ ಅನುಮಾನವಿದ್ದು, ಆಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಕೈವಾಡ ಸಾಬೀತಾದರೆ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

