
ಗರ್ಭಿಣಿ SWAT ಕಮಾಂಡೋ ಪತ್ನಿಯನ್ನು ಡಂಬಲ್‌ನಿಂದ ಹೊಡೆದು ಕೊಂದ ಪತಿ!
ದೆಹಲಿ ಪೊಲೀಸ್ ಪಡೆಯ SWAT ಕಮಾಂಡೋ ಕಾಜಲ್ ಚೌಧರಿ ಪತಿಯ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.
ದೆಹಲಿ ಪೊಲೀಸ್ ಪಡೆಯ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಾರಿಕೆ (SWAT) ವಿಭಾಗದಲ್ಲಿ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 27 ವರ್ಷದ ಕಾಜಲ್ ಚೌಧರಿ ಅವರನ್ನು ಅವರ ಪತಿ ಅಂಕುರ್ ಎಂಬಾತ ಅತಿ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಜನವರಿ 22 ರಂದು ಪಶ್ಚಿಮ ದೆಹಲಿಯ ಮೋಹನ್ ಗಾರ್ಡನ್ ಬಡಾವಣೆಯಲ್ಲಿ ಈ ಭೀಕರ ಘಟನೆ ನಡೆದಿದೆ.
ಪತ್ನಿಯ ಸಹೋದರನಿಗೆ ಫೋನ್ ಮಾಡಿದ ಹಂತಕ
ಕಾಜಲ್ ಅವರ ಸಹೋದರ ನಿಖಿಲ್ (ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್) ಅವರಿಗೆ ಅಂದು ರಾತ್ರಿ 10 ಗಂಟೆ ಸುಮಾರಿಗೆ ಭಾವ ಅಂಕುರ್ ಫೋನ್ ಮಾಡಿದ್ದಾನೆ. "ನಿನ್ನ ತಂಗಿಗೆ ತಿಳಿ ಹೇಳು" ಎಂದು ಕಿರುಚಾಡಿದ್ದಾನೆ. ಗಾಬರಿಗೊಂಡ ನಿಖಿಲ್ ತಂಗಿಗೆ ಫೋನ್ ಮಾಡಿದಾಗ, ಕಾಜಲ್ ತಾನು ಅನುಭವಿಸುತ್ತಿರುವ ನರಕಯಾತನೆಯನ್ನು ವಿವರಿಸುತ್ತಿದ್ದರು.
ಈ ವೇಳೆ ಫೋನ್ ಕಸಿದುಕೊಂಡ ಪತಿ ಅಂಕುರ್, "ಈ ಕರೆಯನ್ನು ರೆಕಾರ್ಡ್ ಮಾಡಿಕೊ, ಪೊಲೀಸರಿಗೆ ಸಾಕ್ಷ್ಯವಾಗಿ ಬೇಕಾಗುತ್ತದೆ. ನಾನು ನಿನ್ನ ತಂಗಿಯನ್ನು ಕೊಲ್ಲುತ್ತಿದ್ದೇನೆ. ಪೊಲೀಸರು ನನ್ನನ್ನೇನೂ ಮಾಡಲು ಸಾಧ್ಯವಿಲ್ಲ" ಎಂದು ಕಿರುಚಾಡಿದ್ದಾನೆ. ಮರುಕ್ಷಣವೇ ಕಾಜಲ್ ಅವರ ಕಿರುಚಾಟ ಕೇಳಿ ಫೋನ್ ಕಟ್ ಆಗಿದೆ.
ಡಂಬಲ್‌ನಿಂದ ತಲೆಗೆ ಹೊಡೆದು ಹತ್ಯೆ
ಫೋನ್ ಕಟ್ ಆದ ಐದು ನಿಮಿಷಗಳ ನಂತರ ಮತ್ತೆ ಕರೆ ಮಾಡಿದ ಅಂಕುರ್, "ಅವಳು ಸತ್ತು ಹೋಗಿದ್ದಾಳೆ, ಆಸ್ಪತ್ರೆಗೆ ಬನ್ನಿ" ಎಂದು ತಿಳಿಸಿದ್ದಾನೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಕಾಜಲ್ ಅವರ ತಲೆಗೆ ಭಾರವಾದ ಜಿಮ್ ಡಂಬಲ್‌ನಿಂದ ಹಿಂದಿನಿಂದ ಜೋರಾಗಿ ಹೊಡೆಯಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಕಾಜಲ್, ಜನವರಿ 27 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವರದಕ್ಷಿಣೆ ಕಿರುಕುಳದ ಹಿನ್ನೆಲೆ
ಮದುವೆಯ ಸಮಯದಲ್ಲಿ ಬುಲೆಟ್ ಬೈಕ್, ಚಿನ್ನಾಭರಣ ಮತ್ತು ನಗದು ನೀಡಿದ್ದರೂ, "ಕಾರು ಬರಬೇಕಿತ್ತು" ಎಂಬ ಕಾರಣಕ್ಕೆ ಅತ್ತೆ ಮತ್ತು ನಾದಿನಿಯರು ಕಾಜಲ್ ಅವರಿಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಕಾಜಲ್ ಅವರು ತಮ್ಮ ಸಂಬಳದಲ್ಲಿ ಅತ್ತೆ-ಮಾವಂದಿರಿಗಾಗಿ ಸಾಲವನ್ನೂ ಮಾಡಿದ್ದರು. ಆದರೂ ಅವರು ಗರ್ಭಿಣಿಯಾಗಿದ್ದಾಗಲೂ ಮನೆಯ ಎಲ್ಲಾ ಕೆಲಸಗಳನ್ನು ಮಾಡುವಂತೆ ಒತ್ತಾಯಿಸಲಾಗುತ್ತಿತ್ತು. ಪಾನಿಪತ್‌ನಲ್ಲಿ ಕಾಲೇಜು ದಿನಗಳಲ್ಲಿ ಪ್ರೀತಿಸಿ 2023ರ ನವೆಂಬರ್‌ನಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಒಂದೂವರೆ ವರ್ಷದ ಗಂಡು ಮಗನಿದ್ದಾನೆ.
ಆರೋಪಿಯ ಬಂಧನ
ರಕ್ಷಣಾ ಸಚಿವಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಅಂಕುರ್‌ನನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕಾಜಲ್ ಅವರ ಒಂದೂವರೆ ವರ್ಷದ ಮಗ ಈಗ ಕಾಜಲ್‌ನ ತವರು ಮನೆಯಲ್ಲಿದ್ದಾನೆ

