
ಐಷಾರಾಮಿ ಕಾರುಗಳ ಮೂಲಕ ಅಂತಿಮ ಯಾತ್ರೆ: ಮಣ್ಣಾದ ಮಾಲೀಕ ರಾಯ್ ಸಿ.ಜೆ.
ಸಿ.ಜೆ. ರಾಯ್ ಕೊನೆಯ ಆಸೆಯಂತೆ ಬನ್ನೇರುಘಟ್ಟ ಸಮೀಪದ ಕಾನ್ಫಿಡೆಂಟ್ ಕ್ಯಾಸ್ಕ್ಯೇಡ್‌ನ ರಾಜ್ ಕುಮಾರ್ ಪಾರ್ಕ್‌ನಲ್ಲಿ ಕ್ರಿಶ್ಚಿಯನ್ ಸಮುದಾಯ ಸಂಪ್ರದಾಯದ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಆತ್ಮಹತ್ಯೆಗೆ ಶರಣಾದ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್ ಕೊನೆಯ ಆಸೆಯಂತೆ ಬನ್ನೇರುಘಟ್ಟ ಸಮೀಪದ ಕಾನ್ಫಿಡೆಂಟ್ ಕ್ಯಾಸ್ಕ್ಯೇಡ್‌ನ ರಾಜ್ ಕುಮಾರ್ ಪಾರ್ಕ್‌ನಲ್ಲಿ ಕ್ರಿಶ್ಚಿಯನ್ ಸಮುದಾಯ ಸಂಪ್ರದಾಯದ ವಿಧಿ ವಿಧಾನಗಳೊಂದಿಗೆ ಭಾನುವಾರ ನೆರವೇರಿತು.
ರಾಯ್ ಅವರ ತಾಯಿ, ಸಹೋದರ ಬಾಬು, ಪತ್ನಿ ಹಾಗೂ ಮಕ್ಕಳು ಕಣ್ಣೀರು ಹಾಕುತ್ತಾ ಅಂತಿಮ ವಿದಾಯ ಹೇಳಿದರು. ಸಿ.ಜೆ. ರಾಯ್ ಕಾರುಗಳ ಪ್ರೇಮಿಯಾಗಿದ್ದು, ಅವರ ಇಚ್ಛೆಯಂತೆಯೇ ಅತೀವವಾಗಿ ಇಷ್ಟಪಡುತ್ತಿದ್ದ ರೋಲ್ಸ್ ರಾಯ್ಸ್, ಬೆನ್ಸ್, ಬಿಎಂಡಬ್ಲ್ಯೂ ಮತ್ತು ಆಡಿ ಸೇರಿದಂತೆ ಹಲವು ಐಷಾರಾಮಿ ಕಾರುಗಳ ಮೆರವಣಿಗೆಯೊಂದಿಗೆ ಅಂತಿಮ ಯಾತ್ರೆ ಕೈಗೊಳ್ಳಲಾಯಿತು. ಕುಟುಂಬಸ್ಥರು ಈ ಕಾರುಗಳಲ್ಲೇ ಪಾರ್ಥಿವ ಶರೀರವನ್ನು ಹಿಂಬಾಲಿಸಿದರು.
ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ ಪಾರ್ಥಿವ ಶರೀರವನ್ನು ಪತ್ನಿ ಹಾಗೂ ಮಕ್ಕಳಿಗೆ ಹಸ್ತಾಂತರಿಸಲಾಯಿತು. ಬಳಿಕ ಪಾರ್ಥಿವ ಶರೀರವನ್ನು ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಬಳಿ ಇರುವ ಸೇಂಟ್ ಜೋಸೆಫ್ ಚರ್ಚ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾಜ್‌ಕುಮಾರ್ ಪಾರ್ಕ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಗಣ್ಯರ ಅಂತಿಮ ದರ್ಶನ
ಕಾನ್ಫಿಡೆಂಟ್ ಕ್ಯಾಸ್ಕ್ಯೇಡ್‌ನ ರಾಯಲ್ ಹಾಲ್‌ನಲ್ಲಿ ಸಿ.ಜೆ.ರಾಯ್ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಎನ್.ಎ. ಹ್ಯಾರಿಸ್ , ಮತ್ತವರ ಪುತ್ರ ಮೊಹಮ್ಮದ್ ನಲಪಾಡ್ ಸೇರಿದಂತೆ ರಾಜಕೀಯ, ಚಲನಚಿತ್ರ ಮತ್ತು ಉದ್ಯಮ ರಂಗದ ಹಲವು ಗಣ್ಯರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಿ.ಜೆ.ರಾಯ್ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದರು, ಅವರ ಸಾವು ನೋವು ತಂದಿದೆ ಎಂದರು.
ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ.ರಾಯ್ ಜ. 30ರಂದು ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಶೋಕನಗರ ಠಾಣಾ ವ್ಯಾಪ್ತಿಯ ಲ್ಯಾಂಗ್ ಫೋರ್ಡ್ ಟೌನ್‌ನಲ್ಲಿರುವ ತಮ್ಮದೇ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಸಿ.ಜೆ.ರಾಯ್, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದರು. ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಘಟನೆ ನಡೆದಿತ್ತು.
ರಾಯ್ ಸಿ.ಜೆ. ಕಳೇಬರ
ಎಸ್ಐಟಿಯಿಂದ ತನಿಖೆ
ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಅನುಮತಿ ನೀಡಿದ ಹಿನ್ನಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಎಸ್ಐಟಿ ತಂಡ ರಚಿಸಿದ್ದಾರೆ. ಐಪಿಎಸ್ ಅಧಿಕಾರಿ ವಂಶಿಕೃಷ್ಣ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಸೋಮವಾರದಿಂದ ತಂಡವು ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

