
ರಾಯ್ ಸಿ.ಜೆ ವೈಯಕ್ತಿಕ ಡೈರಿ ಪೊಲೀಸರ ವಶಕ್ಕೆ; ಗಣ್ಯರು, ನಟಿಯರ ಹೆಸರು ಪತ್ತೆ
ತನ್ನ ತಾಯಿಯ ಜೊತೆ ಮಾತನಾಡಬೇಕು ಎಂದು ಅಧಿಕಾರಿಗಳಿಂದ ಮೊಬೈಲ್ ಪಡೆದು ತಮ್ಮ ಕೊಠಡಿಗೆ ತೆರಳಿದ್ದ ರಾಯ್ ಸಿ.ಜೆ. ಒಳಗಡೆ ಬಿಡದಂತೆ ತನ್ನ ಅಂಗರಕ್ಷಕರಿಗೆ ತಿಳಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ರಾಯ್ ಸಿ.ಜೆ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶನ ಟಿ.ಎ. ಜೋಸೆಫ್ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಐಟಿ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪಗಳನ್ನು ಮಾಡಿಲ್ಲ.
ಶುಕ್ರವಾರ(ಜ.30) ರಾಯ್ ಸಿ.ಜೆ, ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಲು ಟಿ.ಎ. ಜೋಸೆಫ್ ಅವರೊಂದಿಗೆ ಲ್ಯಾಂಗ್‌ಫೋರ್ಡ್ ರಸ್ತೆಯ ಕಚೇರಿಗೆ ಬಂದಿದ್ದರು. ಕಚೇರಿಗೆ ಬಂದ ಬಳಿಕ ಕೆಲ ಹೊತ್ತು ವಿಚಾರಣೆ ಎದುರಿಸಿದ್ದರು. ನಂತರ ಐಟಿ ಅಧಿಕಾರಿಗಳು ಸಿ.ಜೆ.ರಾಯ್ ಮೊಬೈಲ್ ಪಡೆದುಕೊಂಡು ತಾಯಿ ಜತೆ ಮಾತನಾಡಬೇಕು ಎಂದು ಹೇಳಿ ತಮ್ಮ ಕೊಠಡಿಗೆ ತೆರಳಿದ್ದರು ಎಂಬುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ಅದರೆ ದೂರಿನಲ್ಲಿ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯಾಗಿ ನೇರವಾಗಿ ಆರೋಪ ಮಾಡಿಲ್ಲ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.
ಕಚೇರಿಗೆ ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಲು ಬಂದಿದ್ದರೂ, ಸಾವಿಗೆ ಅವರೇ ಕಾರಣ ಎಂದು ಎಲ್ಲೂ ಹೇಳಲಾಗಿಲ್ಲ. ಅವರ ಸಾವಿನ ಹಿಂದೆ ಯಾವುದಾದರೂ ಗುಪ್ತ ಕಾರಣಗಳಿವೆಯೇ? ಈ ಬಗ್ಗೆ ಸಂಪೂರ್ಣ ಮತ್ತು ಕೂಲಂಕಷ ತನಿಖೆ ನಡೆಸಬೇಕು ಎಂದು ಟಿ.ಎ. ಜೋಸೆಫ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಕೋರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಮುಂದುವರಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಯ್
ತಮ್ಮ ಕೊಠಡಿಗೆ ಹೋಗಿದ್ದ ವೇಳೆ ಯಾರನ್ನೂ ಕೆಲಕಾಲ ಒಳಗೆ ಬಿಡಬೇಡಿ ಎಂದು ಅಲ್ಲಿನ ಭದ್ರತಾ ಸಿಬ್ಬಂದಿಗೆ ರಾಯ್ ಸಿ.ಜೆ. ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ. ಕೆಲಹೊತ್ತಿನ ಬಳಿಕ ಟಿ.ಎ. ಜೋಸೆಫ್ ಹೋದಾಗ ಭದ್ರತಾ ಸಿಬ್ಬಂದಿ ರಾಯ್ ಸೂಚನೆಯ ಕುರಿತು ತಿಳಿಸಿದ್ದಾರೆ. ಹತ್ತು ನಿಮಿಷಗಳ ಜೋಸೆಫ್ ಅವರು ಡೋರ್ ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅನುಮಾನಗೊಂಡು ಬಾಗಿಲು ಒಡೆದು ಒಳಗೆ ಹೋದಾಗ ರಾಯ್ ಸಿ.ಜೆ. ಅವರು ತಮ್ಮ ಕುರ್ಚಿಯ ಮೇಲೆಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಆಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಸ್ಥಳಕ್ಕೆ ಬಂದ ವೈದ್ಯಕೀಯ ಸಿಬ್ಬಂದಿ ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ಕರೆದೊಯ್ದಿದ್ದರೂ ಅದಕ್ಕಿಂತ ಮೊದಲು ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ರಾಯ್ ಡೈರಿ ಪತ್ತೆ?
ರಾಯ್ ಸಿ.ಜೆ. ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಕಾನ್ಫಿಡೆಂಟ್ ಗ್ರೂಪ್ ಕಚೇರಿಗೆ ತಡರಾತ್ರಿ ತೆರಳಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಪ್ರಮುಖ ದಾಖಲೆಗಳ ಜತೆಗೆ ರಾಯ್ ಸಿ.ಜೆ. ಅವರ ವೈಯಕ್ತಿಕ ಡೈರಿಯನ್ನೂ ವಶಪಡಿಸಿಕೊಂಡಿದ್ದಾರೆ. ಡೈರಿಯಲ್ಲಿ ಹಲವು ಪ್ರಮುಖ ನಟಿಯರು, ಮಾಡೆಲ್‌ಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಹೆಸರುಗಳು ಉಲ್ಲೇಖವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ರಾಯ್ ಸಿ.ಜೆ. ಅವರು ತಮ್ಮ ಉದ್ಯಮದ ಭಾಗವಾಗಿ ಆಯೋಜಿಸುತ್ತಿದ್ದ ಹಲವು ಕಾರ್ಯಕ್ರಮಗಳಿಗೆ ಈ ನಟಿಯರನ್ನು ಮತ್ತು ಮಾಡೆಲ್‌ಗಳನ್ನು ಆಹ್ವಾನಿಸುತ್ತಿದ್ದರು ಎನ್ನಲಾಗಿದೆ. ಆದಾಗ್ಯೂ, ಡೈರಿಯಲ್ಲಿ ಹೆಸರುಗಳನ್ನು ಯಾವ ಉದ್ದೇಶಕ್ಕಾಗಿ ಬರೆಯಲಾಗಿದೆ ಎಂಬುದರ ಬಗ್ಗೆ ಪೊಲೀಸರು ಈಗ ತನಿಖೆ ಕೈಗೊಂಡಿದ್ದಾರೆ. ಡೈರಿಯಲ್ಲಿನ ಹೆಸರುಗಳೊಂದಿಗೆ ಸಿ.ಜೆ.ರಾಯ್ ಅವರಿಗೆ ಬೇರೆ ಯಾವುದಾದರೂ ವ್ಯವಹಾರಿಕ ಅಥವಾ ವೈಯಕ್ತಿಕ ಸಂಬಂಧವಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅವರಿಗೂ ನೊಟೀಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೃಹ ಸಚಿವ ಪರಮೇಶ್ವರ್‌ಗೆ ಆಯುಕ್ತರ ಮಾಹಿತಿ
ಶನಿವಾರ ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಘಟನೆಯ ಕುರಿತು ಪೂರ್ಣ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ರಾಯ್ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಐಟಿ ಅಧಿಕಾರಿಗಳು ಇದ್ದು, ಅವರಿಂದ ಮಾಹಿತಿ ಪಡೆದುಕೊಳ್ಳುವ ಬಗ್ಗೆಯೂ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಐಟಿ ಅಧಿಕಾರಿಗಳೇ ಕಾರಣ: ಸಹೋದರ ಆರೋಪ
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯ್ ಸಿ.ಜೆ. ಸಹೋದರ, ವೈಟ್ ಗೋಲ್ಡ್ ಕಂಪನಿಯ ಮಾಲೀಕರೂ ಆಗಿರುವ ಬಾಬು ಜೋಸೆಫ್, ಐಟಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಕಳೆದ 3 'ದಿನಗಳಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು. ಕೇರಳದ ಐಟಿ ಅಧಿಕಾರಿಗಳು ಸತತ ಒತ್ತಡ ಹೇರಿದ್ದಾರೆ. ನನ್ನ ಸಹೋದರನ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಹೋದರನಿಗೆ ವ್ಯಾಪಾರದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ನನ್ನ ಜತೆ ಮಾತಾಡಿದ್ದರು. ಆ ವೇಳೆ ಸಹಜವಾಗಿಯೇ ಮಾತನಾಡಿದ್ದರು. ಆತನಿಗೆ ಯಾವುದೇ ಸಾಲ ಇರಲಿಲ್ಲ. ನನ್ನ ಸಹೋದರನ ಸಾವಿಗೆ ಐ.ಟಿ. ಇಲಾಖೆಯ ಅಧಿಕಾರಿ ಕೃಷ್ಣಪ್ರಸಾದ್ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

